ಬಹುಮುಖಿ ಕಥಾಯಾತ್ರೆ

7

ಬಹುಮುಖಿ ಕಥಾಯಾತ್ರೆ

Published:
Updated:

ಕಥಾಯಾತ್ರೆ

(41ಪ್ರಾತಿನಿಧಿಕ ಕಥೆಗಳು)

ಲೇ: ನಾಗತಿಹಳ್ಳಿ ಚಂದ್ರಶೇಖರ್, ಪು: 422; ಬೆ: ರೂ.300, ಪ್ರ: ಅಭಿವ್ಯಕ್ತಿ, ನಂ 166, 28ನೇ ಅಡ್ಡರಸ್ತೆ, 17ನೇ ಮುಖ್ಯರಸ್ತೆ, ಬಿಎಸ್‌ಕೆ 2ನೇ ಹಂತ, ಬೆಂಗಳೂರು .ಚ ಲನಚಿತ್ರ ಮತ್ತು ಖಾಸಗಿ ಟೀವಿ ವಾಹಿನಿಗಳಲ್ಲಿ ಪ್ರಸಾರವಾದ ಮೆಗಾ ಧಾರಾವಾಹಿಗಳ ನಿರ್ದೇಶಕರಾಗಿ ಜನಪ್ರಿಯರಾಗಿರುವ ನಾಗತಿಹಳ್ಳಿ ಚಂದ್ರಶೇಖರ್ ವಾಸ್ತವವಾಗಿ ಕಥೆಗಾರರು. ಕಥೆಗಳೊಂದಿಗೆ ಕಾದಂಬರಿ, ಅಂಕಣ, ಪ್ರವಾಸ ಕಥನಗಳನ್ನೂ ಬರೆಯುತ್ತಿದ್ದಾರೆ. ಚಲನಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತೆಗಳನ್ನು ರಚಿಸಿ ತಮ್ಮ ಅಭಿವ್ಯಕ್ತಿ ಸಾಧ್ಯತೆಯನ್ನು ಹಲವು ರೀತಿಯಲ್ಲಿ ಹೊರಹಾಕಿದ್ದಾರೆ. ಅವರು ಈವರೆಗೆ ಬರೆದ ಕಥೆಗಳಲ್ಲಿ ನಲವತ್ತೊಂದು ಕಥೆಗಳನ್ನು ಪ್ರಾತಿನಿಧಿಕ ರೂಪದಲ್ಲಿ ಇಲ್ಲಿ ಕೊಡಲಾಗಿದೆ.‘ಗ್ರಾಮಮುಖಿ’, ‘ಪ್ರೇಮಮುಖಿ’ ಮತ್ತು ‘ನಗರಮುಖಿ’ ಎಂಬ ಮೂರು ವಿಭಾಗಗಳಲ್ಲಿ ಇಲ್ಲಿನ ಕಥೆಗಳನ್ನು ವಿಂಗಡಿಸಲಾಗಿದೆ. ಕಥಾ ವಸ್ತು ಮತ್ತು ಕಥೆಗಳು ನಡೆಯುವ ಆವರಣವನ್ನು ಆಧರಿಸಿ ಈ ವಿಂಗಡಣೆ ಮಾಡಿದಂತಿದೆ.‘ಗ್ರಾಮ ಮುಖಿ’ಯಲ್ಲಿ ನಾಗತಿಹಳ್ಳಿ ಅವರ ನಿರ್ದೇಶನದ ‘ಉಂಡು ಹೋದ, ಕೊಂಡು ಹೋದ’ ಚಿತ್ರಕ್ಕೆ ಮೂಲವಾದ ‘ಕಮಂಗಿಪುರದ ಕತೆ’ಯೂ ಸೇರಿದೆ. ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ಕಥೆಗಳನ್ನು ಬರೆಯಲು ಆರಂಭಿಸಿದ ನಾಗತಿಹಳ್ಳಿ ಅವರ ಒಟ್ಟಾರೆ ಕಥಾ ಸಾಹಿತ್ಯ ಕುರಿತಂತೆ ಪ್ರವೇಶ ರೂಪದ ಮಾತುಗಳನ್ನು ಹೇಳಿರುವ ವಿಮರ್ಶಕ ಸಿ.ಎನ್.ರಾಮಚಂದ್ರನ್ ಇಲ್ಲಿನ ಕಥೆಗಳನ್ನು ಸಿನಿಮೀಯವಾದ ಪ್ರೇಮಕಥೆಗಳು, ಚಿಂತನಾ ಪ್ರಧಾನ ಕಥೆಗಳು, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ವಿಡಂಬನೆ, ಸ್ವಾಭಿಮುಖೀ ಕಥೆಗಳು, ರೂಪಕ ಕಥೆಗಳು ಎಂಬಂಥ ಒಳ ವಿಭಾಗಗಳನ್ನು ಗುರುತಿಸಿದ್ದಾರೆ. ಕಥೆಗಳ ಸ್ವರೂಪದಲ್ಲಿಯೇ ಇಂಥ ಉಪ ವಿಭಾಗಗಳಿಗೆ ಆಸ್ಪದ ನೀಡುವಷ್ಟು ವಸ್ತು ವೈವಿಧ್ಯ ನಾಗತಿಹಳ್ಳಿಯವರದು. ಕಥೆಗಳ ನಿರೂಪಣಾ ರೀತಿಯಲ್ಲಿಯೂ ಪ್ರಯೋಗ ನಡೆಸಿರುವುದು ಸಾಹಿತ್ಯಾಸಕ್ತರು ಗಮನಿಸುವ ಅಂಶ. ಪತ್ರಿಕೆಗಳಿಗಾಗಿ ಕೆಲವು ಕಥೆಗಳನ್ನು ಬರೆದಿರುವುದರಿಂದ ಕೆಲವು ಕಥೆಗಳು ಅಡಕವಾಗಿವೆ. ಪದಗಳ ಮಿತಿಯನ್ನು ಲಕ್ಷಿಸಿದ ಎಚ್ಚರಿಕೆ ಕೆಲವೆಡೆ ವ್ಯಕ್ತವಾಗುತ್ತದೆ.ಕಥೆಯ ಆವರಣ ಯಾವುದೇ ಇರಲಿ, ಪಾತ್ರಗಳು ಹಳ್ಳಿ ಹಿನ್ನೆಲೆಯಲ್ಲಿರಲಿ, ನಗರವಾಸಿಗಳಾಗಿರಲಿ, ಇಲ್ಲಿನ ಕಥೆಗಳಲ್ಲಿ ವ್ಯಕ್ತವಾಗಿರುವುದು ಲೇಖಕನ ಸೂಕ್ಷ್ಮ ಸಂವೇದನೆ. ನಿತ್ಯದ ಬದುಕಿನಲ್ಲಿ ಕಾಣುವ ವೈಪರೀತ್ಯಗಳಿಗೆ ಪ್ರತಿಭಟನೆ ರೂಪದ ಅಭಿವ್ಯಕ್ತಿ. ವಾಸ್ತವತೆಯ ಗಟ್ಟಿ ಬುನಾದಿ ಇಲ್ಲದಿದ್ದರೆ ನಿರೂಪಣೆಯ ತಂತ್ರವಾಗಲೀ ವಿವರಣೆಗಳ ಸಮೃದ್ಧಿಯಾಗಲೀ ಕಥೆಯ ಮೌಲ್ಯವನ್ನು ಹೆಚ್ಚಿಸಲಾರದು. ಸಮಾಜದಲ್ಲಿ ನಡೆಯುತ್ತಿರುವ ಹಿಂಸೆ, ಕಾಣುವ ಅಸಮಾನತೆ, ಬಲಿಷ್ಠರಿಂದ ದುರ್ಬಲರ ಶೋಷಣೆ, ಸಾಮಾಜಿಕ ವ್ಯಕ್ತಿಗಳ ಡಾಂಭಿಕತೆ, ಮೋಸ, ವಂಚನೆ ಮೊದಲಾದ ಸಂಗತಿಗಳೆಲ್ಲ ಕಥಾ ಹಂದರಗಳಲ್ಲಿ ರೂಪುಗೊಳ್ಳುವುದು ಈ ಕಥೆಗಳಲ್ಲಿ ಕಾಣುವ ವೈಶಿಷ್ಟ್ಯ.ನಾಗತಿಹಳ್ಳಿ ಅವರ ಕತೆಗಳಲ್ಲಿ ಇವಷ್ಟೇ ಅಲ್ಲದೆ, ಜೀತಪದ್ಧತಿ, ಜಾತಿಪದ್ಧತಿ, ಮತಾಂತರ, ಕೋಮುವಾದ, ರಾಜಕಾರಣದ ವಿಕಾರ ಸ್ವರೂಪಗಳು ಕೂಡ ಚಿಕಿತ್ಸಕ ನೋಟಕ್ಕೆ ಒಳಗಾಗಿವೆ. ಸಮಸ್ಯೆಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಓದುಗನನ್ನು ವಿಷಾದದ ಅಂಚಿಗೆ ತಂದು ನಿಲ್ಲಿಸುವಷ್ಟಕ್ಕೆ ಇಲ್ಲಿನ ಕೆಲವು ಕಥೆಗಳು ಮುಗಿಯುತ್ತವೆ. ಪಾತ್ರಗಳ ಹೋರಾಟಕ್ಕೆ ಗೆಲುವು ಸಿಗಲಾರದಂತೆ ವ್ಯವಸ್ಥೆ ಬಲಿಷ್ಠವಾಗಿದೆ ಎಂಬ ಅಸಹಾಯಕ ಭಾವದಲ್ಲಿ ಕೆಲವು ಕಥೆಗಳು ಅಂತ್ಯ ಕಾಣುತ್ತವೆ. ಸಿ.ಎನ್.ರಾಮಚಂದ್ರನ್ ಅವರು ಇಲ್ಲಿನ ಎಲ್ಲಾ ಕಥೆಗಳೂ ನೋವಿನಲ್ಲಿ, ಸೋಲಿನಲ್ಲಿ, ಸಾವಿನಲ್ಲಿ ಮುಕ್ತಾಯ ಕಾಣುತ್ತಿರುವುದನ್ನು ಸರಿಯಾಗಿಯೇ ಗುರುತಿಸಿದ್ದಾರೆ.ಸಾಮಾಜಿಕ ಸಮಸ್ಯೆಗೆ ಮುಖಾಮುಖಿಯಾಗುವ ಸಂದರ್ಭದಲ್ಲಿ ವಾಸ್ತವ ಸಂಗತಿಯನ್ನು ಕಲಾತ್ಮಕವಾಗಿ ಬಿಂಬಿಸುವುದರಿಂದ ಕಥೆಗೆ ವಿಶೇಷ ಆಯಾಮಗಳೇನೂ ಲಭಿಸುವುದಿಲ್ಲ. ಅಲ್ಲಿನ ವಿವರಗಳು ಗುಣಾತ್ಮಕವಾಗಿ ಏನನ್ನಾದರೂ ಧ್ವನಿಸುವುದು ಅವಶ್ಯಕವೆನಿಸುತ್ತದೆ.ವಿಷಾದದಲ್ಲಿ, ದುರಂತದಲ್ಲಿ ಅಂತ್ಯ ಕಂಡ ಕಥೆಗಳು ಅದಕ್ಕೆ ತಾರ್ಕಿಕ ಕಾರಣಗಳನ್ನು ಪ್ರಕಟಿಸದಿದ್ದರೆ ಅವು ಪೂರ್ವನಿರ್ಧರಿತ ತೀರ್ಮಾನಕ್ಕೆ ಒಳಗಾದ ಭಾವವನ್ನು ಮೂಡಿಸುತ್ತವೆ. ಇಲ್ಲಿನ ‘ಗಾಯ’ ಕಥೆಯಿಂದ ಹೊರಡುವ ಧ್ವನಿ ಅಧಿಕಾರ ವಿಕೇಂದ್ರೀಕರಣದ ತತ್ವವನ್ನೇ ನೇತ್ಯಾತ್ಮಕವಾಗಿ ಬಿಂಬಿಸುತ್ತದೆ. ಮತಾಂತರ ಪ್ರಶ್ನೆಯನ್ನು ವಸ್ತುವಾಗುಳ್ಳ ‘ಬಾಣಲೆಯಿಂದ ಬೆಂಕಿಗೆ’ ಕಥೆ ಶೀರ್ಷಿಕೆಯ ನೆಲೆಯಲ್ಲಿಯೇ ಲೇಖಕರು ಉದ್ದೇಶಿಸಿರದ ಪ್ರತಿಗಾಮಿ ಧೋರಣೆಯ ಛಾಯೆಯನ್ನು ಅನಾವರಣಗೊಳಿಸಿಬಿಡುತ್ತದೆ. ಸಂಕಲನದ ಹೆಚ್ಚಿನ ಕಥೆಗಳಲ್ಲಿ ಸಮಕಾಲೀನ ಬದುಕಿಗೆ ಸ್ಪಂದಿಸುವ ಸಂವೇದನಾಶೀಲ ಮನಃಸ್ಥಿತಿಯನ್ನೂ ಪುರೋಗಾಮಿ ಚಿಂತನೆಯನ್ನೂ ಕಂಡ ಓದುಗನಿಗೆ ಇಂಥ ಕಡೆ ವಿಸ್ಮಯದ ಭಾವ ಮೂಡುತ್ತದೆ. ಸರಾಗ ಓದು ಮತ್ತು ಮೆಲುಕು ಹಾಕುವಂಥ ರಂಜನೆಯ ಗುಣ ಇರುವ ದ್ವಿತೀಯದರ್ಜೆ ಗುಮಾಸ್ತೆಯೊಬ್ಬನ ಅನಿರೀಕ್ಷಿತ ಸಾವಿನ ನಿರೂಪಣೆ ಇರುವ ‘ಸೆಕೆಂಡ್ ಡಿವಿಷನ್ ಕ್ಲಾರ್ಕಿನ ಸಾವಿನ ಉತ್ತರಾರ್ಧ’ ನಾಗತಿಹಳ್ಳಿ ಅವರ ವಿಡಂಬನಾ ಶೈಲಿಗೆ ನಿದರ್ಶನದಂತಿದೆ.ಚಲನಚಿತ್ರ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯವಾಗಿ ತೊಡಗಿಯೂ ನಾಗತಿಹಳ್ಳಿ ತಮ್ಮ ಕಥನ ಕಲೆಯನ್ನು ಉಳಿಸಿಕೊಂಡಿರುವುದು ಈ ‘ಕಥಾಯಾತ್ರೆ’ಯಲ್ಲಿ  ಎದ್ದು ಕಾಣುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry