ಬಹುಸಂಸ್ಕೃತಿಯ ಮಾಯಾ ನಗರಿ ಬೆಂಗಳೂರು

7

ಬಹುಸಂಸ್ಕೃತಿಯ ಮಾಯಾ ನಗರಿ ಬೆಂಗಳೂರು

Published:
Updated:

``ಬೆಂಗಳೂರು: ಬಹುಸಂಸ್ಕೃತಿಯ ಬೆಂಗಳೂರು ನಗರಿ ಎಲ್ಲರನ್ನೂ ಸ್ವೀಕರಿಸುತ್ತದೆ. ಸೃಜನಶೀಲ ಬರವಣಿಗೆಗೆ ಸಾಕಷ್ಟು ಅವಕಾಶ ಕಲ್ಪಿಸಿದ ನಗರ. ಬರಹಗಾರರಿಗೆ ಹೊಸ ಕಲ್ಪನೆ ನೀಡುವ ಮಾಯಾನಗರಿ. ಅನಾಮಧೇಯ ಗುಣ ಬರವಣಿಗೆಗೆ ಸ್ಫೂರ್ತಿ...ಟೊಟೊ ಫಂಡ್ಸ್ ಆಫ್ ಆರ್ಟ್ಸ್, ಸಂಗಮ್ ಹೌಸ್, `ದೇಶಕಾಲ~ ಹಾಗೂ `ರೀಡಿಂಗ್ ಅವರ್ಸ್‌~ ಸಂಸ್ಥೆಗಳು ಜಂಟಿಯಾಗಿ ನಗರದ ಅರಮನೆ ರಸ್ತೆಯಲ್ಲಿರುವ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯಲ್ಲಿ (ಎನ್‌ಜಿಎಂಎ) ಶುಕ್ರವಾರ ಹಮ್ಮಿಕೊಂಡಿದ್ದ `ಲೇಖನ~ ಕಾರ್ಯಕ್ರಮದಲ್ಲಿ ಬರಹಗಾರರು ವ್ಯಕ್ತಪಡಿಸಿದ ಅಭಿಪ್ರಾಯಗಳಿವು.`ನಗರ ಸಾಹಿತ್ಯ~ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ವಿಮರ್ಶಕ ಎಂ.ಕೆ. ರಾಘವೇಂದ್ರ, `ಬೆಂಗಳೂರನ್ನು ಸಮಗ್ರವಾಗಿ ಪರಿಶೀಲಿಸಿದರೆ ಎರಡು ಭಾಗಗಳಾಗಿ ವಿಭಜನೆಯಾದಂತೆ ಕಾಣುತ್ತದೆ. ಒಂದು ನಗರ ಪ್ರದೇಶ, ಮತ್ತೊಂದು ಕಂಟೋನ್ಮೆಂಟ್ ಪ್ರದೇಶ. ಈ ಎರಡೂ ಪ್ರದೇಶಗಳನ್ನು ಕಬ್ಬನ್ ಉದ್ಯಾನ ಇಬ್ಭಾಗ ಮಾಡಿದಂತೆ ಕಾಣುತ್ತದೆ~ ಎಂದರು.`ಬೆಂಗಳೂರಿನಲ್ಲಿ ಪ್ರಾದೇಶಿಕತೆಗಿಂತಲೂ ರಾಷ್ಟ್ರೀಯತೆಯೇ ಪ್ರಭಾವಿ ಎನಿಸಿದೆ. ಹಾಗಾಗಿ ಕನ್ನಡ ಸಿನಿಮಾಗಳು ನಗರದ ಕೆಲವು ಭಾಗಗಳನ್ನು ತಲುಪುವುದೇ ಇಲ್ಲ. ನಗರಕ್ಕೆ ಒಂದು ಹೆಗ್ಗುರುತು ಎಂಬುದೇ ಇಲ್ಲ. ಮುಂಬೈ, ಚೆನ್ನೈ, ಕೊಲ್ಕತ್ತಾ ನಗರದ ಜನರಂತೆ ಬೆಂಗಳೂರಿನ ಜನತೆ ತಮ್ಮ ನಗರಕ್ಕೆ ಋಣಿಯಾಗಿದ್ದಾರೆ ಎನಿಸುವುದಿಲ್ಲ~ ಎಂದು ಅಭಿಪ್ರಾಯಪಟ್ಟರು.ಅನಾಮಿಕ ಗುಣ: ಮರಾಠಿ ಬರಹಗಾರ್ತಿ ಸಾನಿಯಾ, `ಬಹುಸಂಸ್ಕೃತಿಯ ಬೆಂಗಳೂರು ನಗರ ಎಲ್ಲರನ್ನೂ ಸ್ವೀಕರಿಸುತ್ತದೆ. ನನ್ನನ್ನೂ ನಾನಿರುವಂತೆಯೇ ಸ್ವೀಕರಿಸಿದೆ. ಇಲ್ಲಿನ `ಅನಾಮಿಕ~ ವಾತಾವರಣ ನನ್ನ ಬರವಣಿಗೆಗೆ ಸ್ಫೂರ್ತಿ ನೀಡಿದೆ. ಏಕೆಂದರೆ ನಾನು ಬರೆಯುವುದನ್ನು ನನ್ನ ಸುತ್ತಮುತ್ತಲಿನವರು ಓದುವುದಿಲ್ಲ. ಹಾಗೆಯೇ ಇನ್ನಷ್ಟು ಬರೆಯಬೇಕೆನಿಸುತ್ತದೆ~ ಎಂದರು.ಶಿಲ್ಲಾಂಗ್ ಮೂಲದ ಅಂಜುಮ್ ಹಸನ್, `ಬೆಂಗಳೂರಿನಲ್ಲಿ ಬರವಣಿಗೆಗೆ ಮುಕ್ತ ಅವಕಾಶವಿದೆ. ಯಾವುದೇ ವಿಷಯದ ಕುರಿತಾದರೂ ಬರೆಯಲು ಪ್ರೋತ್ಸಾಹವಿದೆ. ಲೇಖಕರ ಹೊಸ ಬರಹಕ್ಕೆ ಸ್ಫೂರ್ತಿದಾಯಕವೆನಿಸಿದೆ~ ಎಂದು ಹೇಳಿದರು.ಸ್ವೀಡನ್ನಿನ ಜಾಕ್ ಒಯಾ`ಪ್ರವಾಸಿ ಬರಹಗಾರನಾಗಿ ನಾನು ಬೆಂಗಳೂರನ್ನು ಸಾಕಷ್ಟು ಸುತ್ತಾಡಿದ್ದೇನೆ. ಒಂದೊಂದು ಪ್ರದೇಶವೂ ವಿಭಿನ್ನವಾಗಿ ಕಾಣುತ್ತದೆ. ಕಾಲ್ಪನಿಕ ವಿಷಯಗಳ ಕುರಿತು ಬರೆಯುವವರಿಗೆ ಸೂಕ್ತ ವಾತಾವರಣವಿದೆ~ ಎಂದು ಬಣ್ಣಿಸಿದರು.ಬೆಂಗಳೂರಿನ ಕೆ.ಆರ್. ಉಷಾ, `ಬೆಂಗಳೂರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ಹಾಗೆಯೇ ಬರಹಗಾರರಿಗೆ ಸಾಕಷ್ಟು ಅವಕಾಶವನ್ನು ಕಲ್ಪಿಸುತ್ತಿದೆ~ ಎಂದರು.`ಲೇಖನ~ಕ್ಕೆ ಚಾಲನೆ:  ಬೆಂಗಳೂರಿನಲ್ಲಿರುವ ವಿವಿಧ ಭಾಷೆಯ ಬರಹಗಾರರನ್ನು ಮುಖಾಮುಖಿ ಮಾಡುವ ಹಾಗೂ ಸಾಹಿತ್ಯ ಕುರಿತು ಚರ್ಚಿಸುವ ಸಲುವಾಗಿ ವಿವೇಕ ಶಾನಭಾಗ ಅವರು ಹಮ್ಮಿಕೊಂಡಿರುವ ವಾರಾಂತ್ಯ `ಲೇಖನ~ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು.ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖಲೀಲ್ ಉರ್ ರೆಹಮಾನ್ ಅವರು ಕೆಲವು ಕವನಗಳನ್ನು ವಾಚಿಸಿದರೆ, ಗೋಪಾಲಕೃಷ್ಣ ಪೈ ಅವರು `ಸ್ವಪ್ನ ಸಾರಸ್ವತ~ ಕಾದಂಬರಿಯ ಕೆಲವು ಸಾಲುಗಳನ್ನು ವಾಚಿಸಿದರು. ಕೆಲ ಯುವ ಬರಹಗಾರರು ಕವನ, ಸಾಹಿತ್ಯ ವಾಚನ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ ಶಾನಭಾಗ, `ವಿವಿಧ ಭಾಷೆಯ ಬರಹಗಾರರನ್ನು ಒಂದೇ ವೇದಿಕೆಯಡಿ ತಂದು ಸದ್ಯದ ಬರಹ ಕುರಿತು ಚರ್ಚೆ ನಡೆಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಬರವಣಿಗೆಗೆ ಪ್ರೋತ್ಸಾಹ ನೀಡುವ ಕುರಿತು ಸಂವಾದ ನಡೆಯಲಿದೆ. ಆ ಮೂಲಕ ಪರಸ್ಪರರನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry