ಶುಕ್ರವಾರ, ಆಗಸ್ಟ್ 12, 2022
23 °C

ಬಹೂಪಯೋಗಿ ಲಾವಂಚ

ಅಮರಜಾ ಹೆಗಡೆ, ಮೈಸೂರು Updated:

ಅಕ್ಷರ ಗಾತ್ರ : | |

ಭಾರತವು ಬಹು ಹಿಂದಿನಿಂದಲೂ ಸುಗಂಧ ತೈಲ ವಸ್ತುಗಳ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಬೂನು, ಅತ್ತರಿನಿಂದ ಹಿಡಿದು ಊದಿನಕಡ್ಡಿ, ಔಷಧಿಗಳು, ಬಟ್ಟೆಬರೆ, ಪೇಯ-ಪಾನೀಯ, ಸಿಹಿ ತಿನಿಸು, ಕ್ರಿಮಿನಾಶಕಗಳು, ಕೀಟನಾಶಕಗಳವರೆಗೆ ಈ ಸುಗಂಧ ತೈಲಗಳ ಬಳಕೆ ಬಲು ವ್ಯಾಪಕವಾಗಿವೆ.ಜನರ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟದ ಸುಧಾರಣೆಯಿಂದಾಗಿ ಸುಗಂಧಿತ ವಸ್ತುಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚುತ್ತಿವೆ.ಆದ್ದರಿಂದ ರೈತರು ದವನ, ಕಾಮಕಸ್ತೂರಿ, ಮರುಗ, ಲಾವಂಚ, ಲ್ಯಾವೆಂಡರ್ ಮೊದಲಾದ ಸುಗಂಧಿತ ಸಸ್ಯಗಳನ್ನು ತಮ್ಮ ತೋಟದ ದೀರ್ಘಾವಧಿ ಬೆಳೆಗಳ ಮಧ್ಯೆ ಅಥವಾ ಖಾಲಿ ಬಿದ್ದ ಪಾಳು ಭೂಮಿಗಳಲ್ಲಿ ವ್ಯವಸ್ಥಿತವಾಗಿ ಬೆಳೆದು ಆರ್ಥಿಕಮಟ್ಟ ಸುಧಾರಿಸಿಕೊಳ್ಳಬಹುದು.ಸುಗಂಧಿತ ತೈಲ ಸಸ್ಯಗಳಲ್ಲಿ ಲಾವಂಚ ಒಂದು ಪ್ರಮುಖ ಬೆಳೆ. ಇದರಲ್ಲಿ ಸುಗಂಧ ತೈಲವು ಬೇರಿನ ಭಾಗದಲ್ಲಿರುತ್ತದೆ. ಪೊದೆಯಂತೆ ಒತ್ತಾಗಿ ಬೆಳೆಯುವ ಈ ಬಹುವಾರ್ಷಿಕ ಬೆಳೆಗೆ `ವೆಟಿವರ್ ಹುಲ್ಲು~ ಎಂದು ಕರೆಯುತ್ತಾರೆ. ಇದರ ಬೇರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ತೆಗೆಯುತ್ತಾರೆ. ಭಾರತದಲ್ಲಿ ಈ ಹುಲ್ಲಿಗೆ  ಖಸ್ ಎಂದೂ ಕರೆಯುತ್ತಾರೆ. ಅಂದರೆ ಸುವಾಸಿತ ಬೇರು ಎಂದು ಅರ್ಥ.ಹಳ್ಳಿಗಳಲ್ಲಿ ನಮ್ಮ ಹಿಂದಿನವರು ರೇಷ್ಮೆ ಸೀರೆ, ಮಗುಟಗಳು ಹಾಗೂ ಕೆಲವು ಮುಖ್ಯ ವಸ್ತುಗಳು ಹಾಳಾಗದಂತೆ, ಜಿರಳೆ-ತಿಗಣೆಗಳು ಒಳ ಹೋಗದಂತೆ ರಕ್ಷಿಸಲು ಮನೆಯ ಕಪಾಟು, ಟ್ರಂಕುಗಳಲ್ಲಿ ಗಂಟುಗಂಟಾಗಿ ಹೆಣೆದುಕೊಂಡಿರುವ ಈ ಬೇರುಗಳನ್ನು ಹಿಡಿಕಟ್ಟಿ ಹಾಕಿಡುತ್ತಿದ್ದರು. ಪೆಟ್ಟಿಗೆ ತೆರೆಯುತ್ತಿದ್ದಂತೆ ಘಂ ಎಂದು ಸುವಾಸನೆ ಬೀರುತ್ತಾ ಮೂಗಿಗೆ ರಾಚುವ ಈ ಬೇರುಗಳೇ ಲಾವಂಚ.ಲಾವಂಚದ ತೈಲವನ್ನು ಸೋಪು, ಅತ್ತರು ಹಾಗೂ ಊದುಬತ್ತಿಯ ತಯಾರಿಕೆಯಲ್ಲಿ ಬಳಸುತ್ತಾರೆ. ಬೇರುಗಳಿಂದ ಗೃಹಾಲಂಕಾರ ವಸ್ತುಗಳು, ಬುಟ್ಟಿ, ಬೀಸಣಿಕೆ, ಚಾಪೆ ಮೊದಲಾವುಗಳನ್ನು ಮಾಡುತ್ತಾರೆ. ಇವುಗಳನ್ನು ಒಮ್ಮೆ ನೀರಿನಲ್ಲಿ ನೆನೆಸಿ ತೆಗೆದರೆ ಸುವಾಸಿತ ತಂಪು ಹವೆ ಮೈ-ಮನೆಯನ್ನೆಲ್ಲಾ ಆವರಿಸಿಕೊಳ್ಳುತ್ತದೆ.ಲಾವಂಚವು ಔಷಧೀಯ ಗುಣಗಳ ಆಗರವೂ ಆಗಿದೆ. ಇದರ ತೈಲದ ಲೇಪನ ಮೈ-ಕೈ ನೋವನ್ನು ಶಮನಗೊಳಿಸುತ್ತದೆ. ಇದರ ಬೇರನ್ನು ನೀರಿನಲ್ಲಿ ಕುದಿಸಿ ನಂತರ ಸೋಸಿ ಕುಡಿದರೆ ವಾತ, ಹೊಟ್ಟೆಶೂಲೆ ಹಾಗೂ ಜಂತುಹುಳಗಳ ತೊಂದರೆಯಿಂದ ಮುಕ್ತರಾಗಬಹುದು. ಕಲುಷಿತ ನೀರನ್ನು ಶುದ್ಧಗೊಳಿಸುವ ಗುಣ ಇದಕ್ಕಿದೆ. ಹೀಗಾಗಿ ಲಾವಂಚವನ್ನು ಕುಡಿಯುವ ನೀರಿನ ಪಾತ್ರೆಗೆ  ಹಾಕುವುದರಿಂದ ಪರಿಮಳಯುಕ್ತವಾದ ಸ್ವಚ್ಛ ನೀರನ್ನು ಕುಡಿಯಬಹುದು.ಸಾಮಾನ್ಯವಾಗಿ ಕೆರೆ-ನದಿಗಳ ತೀರದಲ್ಲಿ, ಹಳ್ಳ-ಕೊಳ್ಳಗಳ ಬುಡದಲ್ಲಿ, ಮೈದಾನ, ಗುಡ್ಡಪ್ರದೇಶಗಳಲ್ಲಿ ಸಹಜವಾಗಿ ಬೆಳೆದ ಲಾವಂಚದ ಹುಲ್ಲಿನ ಪೊದೆಗಳನ್ನು ಕಾಣುತ್ತೇವೆ. ಆದರೆ  ಹಿತ್ತಲ ಗಿಡ ಮದ್ದಲ್ಲ  ಎಂಬ ನಾಣ್ಣುಡಿಯಂತೆ ಲಾವಂಚದ ಹಿರಿಮೆಯನ್ನು ಅರಿಯುವ ಪ್ರಯತ್ನವು ಅಷ್ಟಾಗಿ ಆಗಿಲ್ಲ.ಲಾವಂಚದ ಬೇರುಗಳು ಸುಮಾರು 2-3 ಮೀಟರುಗಳಷ್ಟು ಆಳಕ್ಕೆ ಇಳಿಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯುತ್ತವೆ. ಬಡ ರೈತರು ತಮ್ಮ ಹೊಲದಲ್ಲಿ ನೀರನ್ನು ಇಂಗಿಸಲು ಬಸಿಗಾಲುವೆ ತೋಡುವಿಕೆಯಂತಹ ದುಬಾರಿ ಕೆಲಸದ ಬದಲು ಅಲ್ಲಲ್ಲಿ ನೀರು ಹರಿಯುವಲ್ಲಿ, ಇಳಿಜಾರು ಭೂಮಿಗಳಲ್ಲಿ ಲಾವಂಚದ ಸಸಿಗಳನ್ನು ನೆಡುವುದು ಉತ್ತಮ.ಅವು ಕೆಲವೇ ತಿಂಗಳುಗಳಲ್ಲಿ ಬೃಹತ್ ಪೊದೆಯಾಗಿ ಬೆಳೆದು ಹೊಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಇಂಗಿಸಿಕೊಡುತ್ತವೆ. ಒಂದರ್ಥದಲ್ಲಿ ಇವನ್ನು ಬಡವನ ನೀರಾವರಿ ಎಂದೂ ಹೇಳಬಹುದು. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲದ ಮರುಪೂರಣಕ್ಕೆ ಲಾವಂಚವನ್ನು ಒಂದು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು. ಲಾವಂಚವು ಮೇವು, ಕೃಷಿಭೂಮಿಯ ಹೊದಿಕೆಗೆ ಹುಲ್ಲು ಹಾಗೂ ಉರುವಲಿನಂತಹ ಕಿರು ಉತ್ಪನ್ನಗಳನ್ನೂ ಕೊಡುತ್ತದೆ.ಲಾವಂಚ ಬಹುವಾರ್ಷಿಕ ಬೆಳೆ. ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ.ಇದನ್ನು ಮಳೆಗಾಲದಲ್ಲಿ ಅಂದರೆ ಜುಲೈ ತಿಂಗಳಿನಲ್ಲಿ ನಾಟಿ ಮಾಡಬೇಕು. ನಾಟಿ ಮಾಡಿದ 10 ತಿಂಗಳಿಗೆ ಇದು ಕೊಯ್ಲಿಗೆ ಬರುತ್ತದೆ. ಈ ಬೆಳೆಯನ್ನು ಬಾಧಿಸುವ ರೋಗಗಳು ತೀರಾ ಕಡಿಮೆ.ಇವುಗಳ ಬಿತ್ತನೆ, ಕೃಷಿ, ಮಾರುಕಟ್ಟೆ ಮುಂತಾದ ಅಗತ್ಯ ಮಾಹಿತಿಗಳಿಗೆ ಬೆಂಗಳೂರು ಸಮೀಪದ ಕೇಂದ್ರೀಯ ಔಷಧೀಯ ಮತ್ತು ಸುಗಂಧ ಬೆಳೆಗಳ ಸಂಸ್ಥೆ (080 2846 0563), ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಅಥವಾ ಸ್ಥಳೀಯ ಕೃಷಿ ಹಾಗೂ ತೋಟಗಾರಿಕಾ ಕೇಂದ್ರಗಳನ್ನು ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.