ಶನಿವಾರ, ನವೆಂಬರ್ 23, 2019
17 °C

ಬಾಂಗ್ಲಾದಲ್ಲಿ ಕಟ್ಟಡ ಕುಸಿತ: 100 ಸಾವು, 600ಕ್ಕೂ ಹೆಚ್ಚು ಮಂದಿಗೆ ಗಾಯ

Published:
Updated:
ಬಾಂಗ್ಲಾದಲ್ಲಿ ಕಟ್ಟಡ ಕುಸಿತ: 100 ಸಾವು, 600ಕ್ಕೂ ಹೆಚ್ಚು ಮಂದಿಗೆ ಗಾಯ

ಢಾಕಾ (ಐಎಎನ್ಎಸ್): ರಾಜಧಾನಿ ಢಾಕಾದ ಹೊರವಲಯದಲ್ಲಿ ಎಂಟು ಮಹಡಿಯ ಕಟ್ಟಡವೊಂದು ಬುಧವಾರ ಕುಸಿದ ಪರಿಣಾಮವಾಗಿ ಕನಿಷ್ಠ 100 ಮಂದಿ ಮೃತರಾಗಿ 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳ ಆಡಿಯಲ್ಲಿ ಸಿಲುಕಿಕೊಂಡವರು ನೆರವಿಗಾಗಿ ಮೊರೆ ಇಡುತ್ತಿದ್ದು ಅವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.'ರಾಣಾ ಪ್ಲಾಜಾ' ಹೆಸರಿನ ಕಟ್ಟಡ ಈದಿನ ಬೆಳಗ್ಗೆ 8.45ರ ಸುಮಾರಿಗೆ ಕುಸಿದು ಬಿದ್ದಿತು. ಮಾರುಕಟ್ಟೆ ಪ್ರದೇಶದಲ್ಲಿ ಇದ್ದ ಈ ಕಟ್ಟಡದಲ್ಲಿ ಹಲವಾರು ಉಡುಪಿನ ಕಾರ್ಖಾನೆಗಳು ಮತ್ತು ಒಂದು ಬ್ಯಾಂಕ್ ಇತ್ತು.ಮಂಗಳವಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಬುಧವಾರ ಇಸ್ಪೀಟ್ ಎಲೆಗಳ ಕಟ್ಟಡದಂತೆ ಅದು ಕುಸಿದು ಬಿದ್ದಿತು. ಈ ವರೆಗೆ ಸುಮಾರು 100 ಮಂದಿಯನ್ನು ಅವಶೇಷಗಳ ಅಡಿಯಿಂದ ಜೀವಂತವಾಗಿ ಹೊರಕ್ಕೆ ಕರೆತರಲಾಗಿದೆ ಎಂದು ಕಿಟಕಿಯನ್ನು ಮುರಿದು ಹಲವಾರು ಮಂದಿಯನ್ನು ರಕ್ಷಿಸಿದ ಸ್ಥಳೀಯ ನಾಗರಿಕ ಸೊಹೆಲ್ ರಾಣಾ 'ಡೈಲಿ ಸ್ಟಾರ್' ಗೆ ತಿಳಿಸಿದರು.ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡವರ ನೆರವಿಗೆ ಬರುವಂತೆ 'ಡೈಲಿ ಸ್ಟಾರ್' ಮನವಿ ಮಾಡಿದೆ.ಸಾವರ್ ನ ಬೈಪಾಲಿಯಲ್ಲಿ ಸ್ಪೆಕ್ಟ್ರಂ ಉಡುಪಿನ ಕಾರ್ಖಾನೆ ಕಟ್ಟಡ ಕುಸಿತ ಸಂಭವಿಸಿದ ಎಂಟು ವರ್ಷಗಳ ಬಳಿಕ ಈ ದುರಂತ ಸಂಭವಿಸಿದೆ. ಎಂಟು ವರ್ಷಗಳ ಹಿಂದಿನ ಕಟ್ಟಡ ಕುಸಿತದಲ್ಲಿ 64 ಮಂದಿ ಕಾರ್ಮಿಕರು ಅಸು ನೀಗಿದ್ದರು.ಬುಧವಾರ ಬೆಳಗ್ಗೆ ಸಾವರ್ ನಲ್ಲಿ ಸಂಭವಿಸಿದ 8 ಮಹಡಿಗಳ ಕಟ್ಟಡ ಕುಸಿತದಲ್ಲಿ 100 ಮಂದಿ ಮೃತರಾಗಿ 600ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದನ್ನು ಆರೋಗ್ಯ ಸಚಿವ ಎ.ಎಫ್.ಎಂ. ರುಹಾಲ್ ಹಖ್ ದೃಢ ಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)