ಮಂಗಳವಾರ, ಮೇ 17, 2022
26 °C

ಬಾಂಗ್ಲಾದೇಶ ವಿಶ್ವ ಕಪ್ ಗೆಲ್ಲುತ್ತದೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ‘ಬಾಂಗ್ಲಾದೇಶ ಶನಿವಾರ ಭಾರತ ವಿರುದ್ಧವಷ್ಟೇ ಅಲ್ಲ, ವಿಶ್ವ ಕಪ್ ಗೆಲ್ಲುತ್ತದೆ’ ಎಂದು ಹೇಳಿದವರು ಬೇರೆ ಯಾರೂ ಅಲ್ಲ, ಭಾರತ ತಂಡದ ನಾಯಕ ಮಹೇಂದ್ರಸಿಂಗ್ ದೋನಿ.ಆಶ್ಚರ್ಯಪಡಬೇಡಿ. ದೋನಿಯ ದನಿಯಲ್ಲಿ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರನ್ನು ಛೇಡಿಸುವ ಧಾಟಿಯಿತ್ತು. ಪತ್ರಿಕಾಗೋಷ್ಠಿಗೆ ಜೀವ ತುಂಬುವ ಮನಸ್ಸಿತ್ತು. ಗುರುವಾರ ಹತ್ತನೇ ವಿಶ್ವ ಕಪ್ ಟೂರ್ನಿಯ ಉದ್ಘಾಟನಾ ಸಮಾರಂಭ ಆರಂಭವಾಗುವ ಎರಡು ಗಂಟೆ ಮೊದಲು ಢಾಕಾ ಶೆರೆಟನ್ ಹೊಟೆಲ್‌ನಲ್ಲಿ ನಡೆದ ತಂಡಗಳ ನಾಯಕರ ಪತ್ರಿಕಾಗೋಷ್ಠಿಯಲ್ಲಿ ನಗುನಗುತ್ತ ಮಾತನಾಡಿದವರು ದೋನಿ ಒಬ್ಬರೇ.ವಿಶ್ವ ಕಪ್ ಟೂರ್ನಿಯ ಮೊದಲ ಅಧಿಕೃತ ಪತ್ರಿಕಾಗೋಷ್ಠಿ ಇದಾಗಿತ್ತು. ಎಲ್ಲ 14 ತಂಡಗಳ ನಾಯಕರು ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದರು. ಆಸ್ಟ್ರೇಲಿಯ ತಂಡದ ನಾಯಕ ರಿಕಿ ಪಾಂಟಿಂಗ್ ಬಲಕ್ಕೆ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕರ ಹಾಗೂ ಎಡಕ್ಕೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಕುಳಿತಿದ್ದರು. ಹಿಂದಿನ ಸಾಲಿನಲ್ಲಿ ಮಧ್ಯದಲ್ಲಿ ಮಹೇಂದ್ರಸಿಂಗ್ ದೋನಿ, ಅವರ ಬಲಕ್ಕೆ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಎಡಕ್ಕೆ ದಕ್ಷಿಣ ಆಫ್ರಿಕ ತಂಡದ ನಾಯಕ ಗ್ರೇಮ್ ಸ್ಮಿತ್ ಆಸೀನರಾಗಿದ್ದರು. ಆದರೆ 14 ಮಂದಿ ನಾಯಕರಲ್ಲಿ ಎಲ್ಲರ ಗಮನ ಸೆಳೆದವರು ದೋನಿ ಮತ್ತು ಪಾಂಟಿಂಗ್ ಮಾತ್ರ.ಚಾಂಪಿಯನ್ ನಾಯಕನಾಗಿ ಮಾತು ಆರಂಭಿಸಿದ ರಿಕಿ ಪಾಂಟಿಂಗ್, ‘ವಿಶ್ವ ಕಪ್ ಎಂದರೆ ಕ್ರಿಕೆಟ್‌ನ ಎವ ರೆಸ್ಟ್. ನಾವೆಲ್ಲ ಉತ್ತಮ ಕ್ರಿಕೆಟ್ ಆಡಲು ಬಂದಿದ್ದೇವೆ. ಎಲ್ಲರೂ ಆನಂದಿಸಿರಿ’ ಎಂದು ಪ್ರಶ್ನೋತ್ತರಕ್ಕೆ ಚಾಲನೆ ನೀಡಿದರು. “ಟೂರ್ನಿಗೆ ಮೊದಲು ಎರಡು ಅಭ್ಯಾಸ ಪಂದ್ಯಗಳಲ್ಲಿ-ಭಾರತ ಮತ್ತು ದಕ್ಷಿಣ ಆಫ್ರಿಕ ವಿರುದ್ಧ- ಸೋತಿದ್ದು ಹಿನ್ನಡೆಯೇನಲ್ಲ ಅಥವಾ ಕೆಟ್ಟ ಆರಂಭವೇನೂ ಅಲ್ಲ. ಎರಡೂ ತಂಡಗಳು ನಮಗಿಂತ ಚೆನ್ನಾಗಿ ಆಡಿದವು. ಉಪಖಂಡದಲ್ಲಿ ಆಸ್ಟ್ರೇಲಿಯದ ಸಾಧನೆ ಚೆನ್ನಾಗಿಯೇ ಇದೆ. ಮುಂದಿನ ನಿಜವಾದ ಹೋರಾಟದಲ್ಲಿ ಆಸ್ಟ್ರೇಲಿಯ ಪುಟಿದೇಳುವುದು” ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.‘ಎಲ್ಲರಿಗೂ ಶುಭ ಸಂಜೆ’ ಎಂದೇ ಮಾತು ಆರಂಭಿಸಿದ ದೋನಿ, “ಮುಂದಿನ ದಿನಗಳಲ್ಲಿ ರೋಚಕ ಕ್ರಿಕೆಟ್ ಹೊರಹೊಮ್ಮಲಿದೆ. ಎಲ್ಲ ತಂಡಗಳು ಉಪಖಂಡದ ಆತಿಥ್ಯವನ್ನು ಸಂತೋಷದಿಂದ ಸ್ವೀಕರಿಸಬೇಕು. ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ನೋಡಬೇಕಾದ ಐತಿಹಾಸಿಕ ಸ್ಥಳಗಳು ಬೇಕಾದಷ್ಟಿವೆ. ಪಂದ್ಯಗಳ ನಡುವಿನ ವಿರಾಮದ ದಿನಗಳಲ್ಲಿ ಆಟಗಾರರು ಭಾರತದ ಐತಿಹಾಸಿಕ ಶ್ರೀಮಂತಿಕೆಯನ್ನು ನೋಡಬೇಕು” ಎಂದು ಆತಿಥೇಯರ ಪರವಾಗಿ ಆಮಂತ್ರಿಸಿದರು.‘ಭಾರತದ ಪ್ರೇಕ್ಷಕರು ಒಮ್ಮೊಮ್ಮೆ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ’ ಎಂದು ಯುವರಾಜ್ ಸಿಂಗ್ ಅವರ ತಾಯಿ ಹೇಳಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ದೋನಿ ನಸುನಕ್ಕರು. “ನಾವು ಚೆನ್ನಾಗಿ ಆಡಿದಾಗ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಸೋತಾಗ ತೆಗಳಿ ಪಾತಾಳಕ್ಕೆ ತಳ್ಳುತ್ತಾರೆ. ನಮ್ಮ ಆಟಗಾರರಿಗೆ ಇದು ಅಭ್ಯಾಸವಾಗಿ ಹೋಗಿದೆ. ಪ್ರಶಂಸೆ ಹಾಗೂ ಟೀಕೆ ಎರಡೂ ಆಟದ ಭಾಗವಾಗಿಬಿಟ್ಟಿದೆ” ಎಂದು ಅವರು ಹೇಳಿದರು.ಇಡೀ ದೇಶದ ಕೇಂದ್ರಬಿಂದುವಾಗಿರುವ ಶಕೀಬ್ ಅಲ್ ಹಸನ್ ನರ್ವಸ್ ಆಗಿದ್ದಂತೆ ಕಂಡುಬಂತು. ‘ಭಾರತ ವಿರುದ್ಧದ ಮೊದಲ ಪಂದ್ಯವನ್ನು ಬಾಂಗ್ಲಾ ಗೆಲ್ಲುತ್ತದೆಯೇ?’ ಎಂಬ ಪ್ರಶ್ನೆ ಬಂದಾಗ ತಡವರಿಸಿದರು. ಆದರೆ ಅವರ ಹಿಂದೆಯೇ ಕುಳಿತಿದ್ದ ದೋನಿ, ‘ಬಾಂಗ್ಲಾದೇಶ ವಿಶ್ವ ಕಪ್‌ಅನ್ನೇ ಗೆಲ್ಲುತ್ತದೆ’ ಎಂದು ಛೇಡಿಸಿದಾಗ ಶಕೀಬ್ ಮುಖದಲ್ಲೂ ನಗು ಮೂಡಿತು. “ನಾವು ಉತ್ತಮ ಅಭ್ಯಾಸ ನಡೆಸಿದ್ದೇವೆ. ಎಲ್ಲ ಆಟಗಾರರೂ ಚೆನ್ನಾಗಿ ಆಡುವ ವಿಶ್ವಾಸದಿಂದ ತಯಾರಾಗಿದ್ದಾರೆ” ಎಂದು ಅವರು ನುಡಿದರು.

ಯಾಕೀ ಅವ್ಯವಸ್ಥೆ?

ಢಾಕಾ: ಭಾರತವೇ ಆಗಿರಲಿ ಬಾಂಗ್ಲಾದೇಶವೇ ಇರಲಿ, ಒಂದು ದೊಡ್ಡ ಕ್ರೀಡಾಕೂಟ ನಡೆಯುವುದೆಂದರೆ ಜನರಿಗೆ ಎಲ್ಲ ರೀತಿಯ ಕಿರಿಕಿರಿ ಕಾದಿರುತ್ತದೆ. ಕ್ರೀಡಾಂಗಣದೊಳಗೆ ಪ್ರವೇಶಿಸಲು ಜನಸಾಮಾನ್ಯರನ್ನು ಬಿಡಿ, ಅಧಿಕೃತ ಮಾನ್ಯತಾ ಪತ್ರ ಹೊಂದಿರುವ ಪತ್ರಕರ್ತರು ಎಲ್ಲ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.ಢಾಕಾದ ಬಂಗಬಂಧು ರಾಷ್ಟ್ರೀ5ು ಕ್ರೀಡಾಂಗಣದಲ್ಲಿ ಮಧ್ಯಾಹ್ನದಿಂದಲೇ ಜನ ತುಂಬಿ ತುಳುಕಿದ್ದರು. ಒಳಗೆ ಹೋಗಲು ನೂಕುನುಗ್ಗಲಿತ್ತು. ಒಂದು ಗೇಟ್‌ನಲ್ಲಿ ಪತ್ರಕರ್ತರನ್ನು ಬಿಡಲಿಲ್ಲ. ಮತ್ತೊಂದು ಗೇಟ್‌ನಲ್ಲಿ ಬಿಟ್ಟರೂ ಜನರ ಮಧ್ಯೆ ನುಸುಳಲು ಹರಸಾಹಸ ಮಾಡಬೇಕಾಯಿತು. ಇಂಥ ಅವ್ಯವಸ್ಥೆ ಭಾರತದ ಎಲ್ಲ ಕ್ರೀಡಾಂಗಣಗಳಲ್ಲೂ ಇರುತ್ತದೆ.ಪೊಲೀಸರಿಗೂ ಜನರನ್ನು ನಿಯಂತ್ರಿಸುವಲ್ಲಿ ಸಾಕುಸಾಕಾಗಿರುತ್ತದೆ. ಜೊತೆಗೆ ಇದರಲ್ಲಿ ಅವರ ದರ್ಪವೂ ಸೇರಿಕೊಂಡು ಅವ್ಯವಸ್ಥೆ ತಾಂಡವವಾಡುತ್ತದೆ. ಗೇಟುಗಳ ಹೊರಗೆ ನೀರಿನ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ನೀರಿನ ಬಾಟಲಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಮೊದಲೇ ಪ್ರಕಟಿಸಿದ್ದರೂ ಜನ ಅವುಗಳನ್ನು ತಂದಿದ್ದರು. ‘ಇಂಗ್ಲೆಂಡ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ ಅಥವಾ ವೆಸ್ಟ್‌ಇಂಡೀಸ್‌ನಲ್ಲಿ ಇಂಥ ಪರಿಸ್ಥಿತಿ ಎದುರಾಗದೇ ಇಲ್ಲ. ಜನರೂ ಶಿಸ್ತಿನಿಂದ ವರ್ತಿಸುತ್ತಾರೆ. ಪೊಲೀಸರು ಅನಗತ್ಯ ಕಿರುಕುಳ ಕೊಡುವುದಿಲ್ಲ’ ಎಂದು ಅಲ್ಲೆಲ್ಲ ಕ್ರಿಕೆಟ್ ಪಂದ್ಯಗಳಿಗೆ ಹೋಗಿ ಬಂದಿರುವ ವರದಿಗಾರರು ಹೇಳಿದರು.

ಬಸ್ ತಪ್ಪಿಸಿಕೊಂಡ ಸುರೇಶ್ ರೈನಾ!

ಢಾಕಾ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಟಗಾರ ಸುರೇಶ್ ರೈನಾ ಗುರುವಾರ ಚೆನ್ನೈ-ಢಾಕಾ ವಿಮಾನ ತಪ್ಪಿಸಿಕೊಳ್ಳುವ ಹಂತದಲ್ಲಿದ್ದರು. ಕಾರಣ ಅವರು ಹೋಟೆಲ್‌ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ತೆರಳಿದ ತಂಡದ ಬಸ್ ತಪ್ಪಿಸಿ ಕೊಂಡಿದ್ದರು.ಸಮಯಕ್ಕೆ ಸರಿಯಾಗಿ ಬಾರದ ಕಾರಣ ರೈನಾ ಅವರನ್ನು ಬಿಟ್ಟು ಬಸ್ ತೆರಳಿತ್ತು. ಆದರೆ ತಕ್ಷಣವೇ ಟ್ಯಾಕ್ಸಿಯೊಂದರಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಿದರು.

ಢಾಕಾದಲ್ಲಿ ನೆದ ತಂಡಗಳ ಎಲ್ಲಾ ನಾಯಕರ ಪತ್ರಿಕಾಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಎಂ.ಎಸ್. ದೋನಿಗೆ ಈ ಸಂಬಂಧ ಪ್ರಶ್ನೆ ಕೂಡ ಎದುರಾಯಿತು.  ‘ಕೆಲವೊಮ್ಮೆ ಈ ರೀತಿಆಗು ತ್ತದೆ ಎಂದು ದೋನಿ ಚುಟುಕಾಗಿ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.