ಮಂಗಳವಾರ, ಮೇ 11, 2021
27 °C

ಬಾಂಗ್ಲಾ ಪ್ರವಾಸದಿಂದ ಹಿಂದೆ ಸರಿದ ಮಮತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಮತ್ತು ಬುಧವಾರ ಕೈಗೊಳ್ಳಲಿರುವ ಬಾಂಗ್ಲಾ ಪ್ರವಾಸ ಕಾರ್ಯಕ್ರಮ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಹೊಸ ಭಾಷ್ಯ ಬರೆಯಲಿದೆ.ಬಾಂಗ್ಲಾ ಜತೆಗೆ ಭಾರತದ ಐದು ರಾಜ್ಯಗಳು ಗಡಿಯನ್ನು ಹಂಚಿಕೊಂಡಿವೆ. ಈ ರಾಜ್ಯಗಳಾದ ತ್ರಿಪುರ, ಮಿಜೋರಾಮ್, ಮೇಘಾಲಯ ಮತ್ತು ಅಸ್ಸಾಮ್‌ನ ಮುಖ್ಯಮಂತ್ರಿಗಳು ಪ್ರಧಾನಿಯವರೊಂದಿಗೆ ಇಲ್ಲಿಗೆ ಆಗಮಿಸಲಿದ್ದಾರೆ. ಆದರೆ ಪ್ರಮುಖ ರಾಜ್ಯವಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರಧಾನಿಯವರೊಂದಿಗೆ ಬರುವುದು ಮೊದಲು ನಿಗದಿಯಾಗಿತ್ತಾದರೂ, ಕೊನೆ ಕ್ಷಣದಲ್ಲಿ ಅವರು ಬರುವುದಿಲ್ಲವೆಂದು ಖಚಿತ ಪಡಿಸಿದ್ದಾರೆ. ಮಮತಾ ಅವರ ಈ ನಿಲುವು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ನಿರಾಸೆ ಉಂಟು ಮಾಡಿದೆ ಎಂದರು ಹಸೀನಾ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಗವಾರ್ ರಿಜ್ವಿ ಸೋಮವಾರ ಇಲ್ಲಿ ತಿಳಿಸಿದ್ದಾರೆ.ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸ್ನೇಹ ಹೊಂದಿರುವ ಮಮತಾ ಅವರು ಕೊನೆ ಗಳಿಗೆಯಲ್ಲಿ ಪ್ರವಾಸ ಕಾರ್ಯಕ್ರಮ ಮೊಟಕುಗೊಳಿಸಿರುವುದು ಇಲ್ಲಿ ಎಲ್ಲರಿಗೂ ನಿರಾಸೆ ತಂದಿದೆ.ಆದರೆ, ಶೀಘ್ರದಲ್ಲಿಯೇ ಬಾಂಗ್ಲಾದೇಶಕ್ಕೆ ಅವರು ಬರುತ್ತಾರೆ ಎಂಬ ಭರವಸೆ ಇದ್ದು, ಆ ಸಂದರ್ಭವನ್ನು ಕಾದು ನೋಡುವುದಾಗಿ ಅವರು ತಿಳಿಸಿದ್ದಾರೆ.ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮನ ಮೋಹನ್ ಸಿಂಗ್ ಅವರು ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶದೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಲಿದ್ದು, ಇದರಿಂದ ಅಸಂತುಷ್ಟರಾಗಿರುವ ಮಮತಾ ಬ್ಯಾನರ್ಜಿ ಪ್ರವಾಸದಿಂದ ಹಿಂದೆ ಸರಿಯಲು ಪ್ರಮುಖ ಕಾರಣ ಎನ್ನಲಾಗಿದೆ.ಒಪ್ಪಂದದಲ್ಲಿ ಇರುವ ಕೆಲವು ಅಂಶಗಳು ಪಶ್ಚಿಮ ಬಂಗಾಳದ ಹಿತಾಸಕ್ತಿಗೆ ವಿರುದ್ಧವಾಗಿವೆ.  ಹೀಗಾಗಿ ಮಮತಾ ಈ ಒಪ್ಪಂದಕ್ಕೆ ವಿರುದ್ಧವಾಗಿದ್ದಾರೆ.1999ರ ನಂತರ ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ.

ಇಲ್ಲಿನ ಬಾಂಗ್ಲಾದೇಶ್ ರಾಷ್ಟ್ರೀಯ ಸುದ್ದಿಸಂಸ್ಥೆಯು ಮನಮೋಹನ್ ಸಿಂಗ್ ಅವರ ಸಂದರ್ಶನವನ್ನು ಸೋಮವಾರ ಪ್ರಕಟಿಸಿದ್ದು, ಅದರಲ್ಲಿ ಪ್ರಧಾನಿಯವರು ಉಭಯ ದೇಶಗಳ ನಡುವಣ ಗಡಿವಿವಾದ, ನದಿ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಿಕೊಳ್ಳುವ ಬಗ್ಗೆ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.  ಈ ನಡುವೆ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ರಂಜನ್ ಮಥಾಯ್ ಅವರು ನವದೆಹಲಿಯಲ್ಲಿ ಸೋಮವಾರ ಸುದ್ದಿಸಂಸ್ಥೆ ಯೊಂದಿಗೆ ಮಾತನಾಡುತ್ತಾ `ಭಾರತ ಮತ್ತು ಬಾಂಗ್ಲಾದೇಶ ನಡುವಣ ಗಡಿ ವಿವಾದವನ್ನು 1974ರ ಒಪ್ಪಂದಕ್ಕೆ ಪೂರಕವಾಗಿ ಬಗೆಹರಿಸಿಕೊಳ್ಳಲು ಭಾರತ ಆಸಕ್ತಿ ಹೊಂದಿದೆ~ ಎಂದಿರುವುದು ಇಲ್ಲಿನ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.