ಬಾಂಗ್ಲಾ ಯುವತಿ ಕೊಲೆ ರಹಸ್ಯ ಬಯಲು

7

ಬಾಂಗ್ಲಾ ಯುವತಿ ಕೊಲೆ ರಹಸ್ಯ ಬಯಲು

Published:
Updated:

ಬೆಂಗಳೂರು: ವರ್ಷದ ಹಿಂದೆ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದ ಬಾಂಗ್ಲಾ ದೇಶ ಮೂಲದ ಯುವತಿಯ ಸಾವಿನ ಪ್ರಕರಣದ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಸುಬ್ರಹ್ಮಣ್ಯನಗರ ಪೊಲೀಸರು, ನಾಲ್ವರು ಆರೋಪಿ ಗಳನ್ನು ಬಂಧಿಸಿದ್ದಾರೆ.ರಾಜಾಜಿನಗರದ ಲಕ್ಷ್ಮೀಶ (29), ಇಂದಿರಾನಗರದ ಮೋಹನ್ (25), ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಮಧು (24) ಹಾಗೂ ತಮಿಳುನಾಡು ಮೂಲದ ವಿನೋದ್‌ ಕುಮಾರ್‌ (28) ಬಂಧಿತರು. ಪ್ರಕರಣದ ಇತರೆ ಆರೋಪಿಗಳಾದ ಅಂಜು ಮತ್ತು ಸುಬ್ರಹ್ಮಣಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.ಆರೋಪಿಗಳು ಇತ್ತೀಚೆಗೆ ರಾಜಾಜಿ ನಗರ ಒಂದನೇ ಹಂತದಲ್ಲಿ ಕಾರು ನಿಲ್ಲಿಸಿಕೊಂಡು ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವರ್ಷದ ಹಿಂದೆ ನಡೆದಿದ್ದ ಆರೋಪಿ ಲಕ್ಷ್ಮೀಶನ ಪ್ರೇಯಸಿ ಅಂಜಲಿ ಕೊಲೆ ಪ್ರಕರಣವೂ ಬೆಳಕಿಗೆ ಬಂದಿದೆ.ರಾಜಾಜಿನಗರದಲ್ಲಿ ಫೈನಾನ್ಸ್‌ ವ್ಯವ ಹಾರ ಮಾಡುತ್ತಿದ್ದ ಲಕ್ಷ್ಮೀಶನಿಗೆ ಸ್ನೇಹಿ ತರ ಮೂಲಕ ಅಂಜಲಿ ಪರಿಚಯವಾ ಗಿತ್ತು. ಅವರ ಗೆಳೆತನ ಕ್ರಮೇಣ ಪ್ರೀತಿಗೆ ತಿರುಗಿತ್ತು. ನಂತರ ಪರಸ್ಪರರ ನಡುವೆ ದೈಹಿಕ ಸಂಪರ್ಕ ನಡೆದು ಅಂಜಲಿ ಗರ್ಭವತಿಯಾಗಿದ್ದರು. ಈ ಸಂಗತಿ ತಿಳಿದ ಆರೋಪಿ ಮದುವೆಯಾಗುವು ದಾಗಿ ನಂಬಿಸಿ ಗರ್ಭಪಾತ ಮಾಡಿಸಿದ್ದ. ನಂತರ ಚಿಕ್ಕಬಿದರುಕಲ್ಲು ಬಳಿ ಪ್ರೇಯ­ಸಿಗೆ ಬಾಡಿಗೆ ಮನೆ ಮಾಡಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಇದಾದ ನಂತರ ಆರೋಪಿ ಪ್ರೇಯಸಿ ಯಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿದ. ಇದರಿಂದ ಅನುಮಾನ ಗೊಂಡ ಅಂಜಲಿ, ಕೂಡಲೇ  ಮದುವೆ ಯಾಗಬೇಕೆಂದು ಪಟ್ಟು ಹಿಡಿದಿದ್ದರು. ಈ ನಡುವೆ ಆತನಿಗೆ ಬೇರೊಬ್ಬ ಯುವತಿಯೊಂದಿಗೆ ವಿವಾಹ ನಿಶ್ಚಯ ವಾಗಿದ್ದರಿಂದ ಕೋಪಗೊಂಡ ಅವರು, ಮದುವೆ ದಿನ ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡುವುದಾಗಿ ಹೆದರಿಸಿದ್ದರು. ಜತೆಗೆ ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿಯೂ ಹೇಳಿದ್ದರು. ಇದರಿಂದ ಕಂಗಾಲದ ಆರೋಪಿ, ಪ್ರೇಯಸಿ ಹತ್ಯೆಗೆ ಸಂಚು ರೂಪಿಸಿದ್ದ. ಇದಕ್ಕೆ ಆತನ ಸ್ನೇಹಿತರೂ ನೆರವು ನೀಡುವುದಾಗಿ ಒಪ್ಪಿ ಕೊಂಡಿದ್ದರು.ಕೊಲೆ ಹೇಗಾಯಿತು?:

ದೂರು ದಾಖಲಿಸದಂತೆ ಪ್ರೇಯಸಿ ಮನ ವೊಲಿಸಿದ ಆರೋಪಿ, ಮದುವೆಯಾಗು ವುದಾಗಿ ಪುನಃ ನಂಬಿಸಿದ್ದ. ಬಳಿಕ ‘ವಿಹಾರದ ನೆಪ’ದಲ್ಲಿ ಅಂಜಲಿಯನ್ನು 2012ರ ಆಗಸ್ಟ್‌ 16ರಂದು ಸ್ನೇಹಿತ ಮಧು ಕಾರಿನಲ್ಲಿ ತಮಿಳುನಾಡಿನ ಕೃಷ್ಣ ಗಿರಿಗೆ ಕರೆದೊಯ್ದ.

ಈ ವೇಳೆಗಾಗಲೇ  ಪೂರ್ವನಿಯೋಜಿತ ಸಂಚಿನಂತೆ ವಿನೋದ್‌ ಕುಮಾರ್‌ ಮತ್ತು ಮೋಹನ್‌ ಅಂಜಲಿಯನ್ನು ಕೊಲ್ಲಲು ಕಾದು ಕುಳಿತಿದ್ದರು. ಪಾನಮತ್ತರಾಗಿದ್ದ ಆರೋಪಿ­ಗಳು, ಮದ್ಯದಲ್ಲಿ ಮತ್ತು ಬರುವ ಮಾತ್ರೆಗಳನ್ನು ಬೆರೆಸಿ ಬಲವಂತ ವಾಗಿ ಅಂಜಲಿ ಕುಡಿಸಿದ್ದರು. ಸ್ವಲ್ಪ ಸಮ ಯದ ನಂತರ ಅವರು ಪ್ರಜ್ಞೆ ಕಳೆದು ಕೊಂಡಾಗ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದರು.ನಂತರ ಕೃಷ್ಣಗಿರಿ ಜಿಲ್ಲೆಯ ಚಿನ್ನ ಕೊಟ್ಟ ಕೂಳಂ ಗ್ರಾಮ ಸಮೀಪದ ಹೊಗೇನಕಲ್‌ ಕಾವೇರಿ ನೀರು ಸರಬ ರಾಜಿಗಾಗಿ ತೆಗೆಯಲಾಗಿದ್ದ ಗುಂಡಿ ಯಲ್ಲಿ ಶವವನ್ನು ಹೂತು ನಗರಕ್ಕೆ ವಾಪಸಾಗಿದ್ದರು. ಆದರೆ, ಅಂಜಲಿ ಕಾಣೆಯಾಗಿರುವ ಬಗ್ಗೆಯಾಗಲೀ, ಅವರು ಕೊಲೆಯಾಗಿರುವ ಬಗ್ಗೆ ಯಾಗಲೀ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.‘ಶವ ಹೂತ ಸ್ಥಳವನ್ನು ತೋರಿಸು ವಂತೆ ಕರೆದೊಯ್ದಾಗ ಆರೋಪಿಗಳು ತಪ್ಪು ಮಾಹಿತಿ ನೀಡಿ ಸಿಬ್ಬಂದಿಯ ದಿಕ್ಕು ತಪ್ಪಿಸಿದ್ದರು. ಬಳಿಕ ನ್ಯಾಯಾಧೀಶರ ಅನುಮತಿ ಪಡೆದು ಮತ್ತೊಮ್ಮೆ ಘಟನಾ ಸ್ಥಳಕ್ಕೆ ಕರೆದೊಯ್ದಾಗ ಶವವನ್ನು ಸುಟ್ಟು ಹಾಕಿರುವು­ದಾಗಿ ಹೇಳಿದರು.ಬಳಿಕ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಚಿನ್ನಕೊಟ್ಟ­ಕೂಳಂನಲ್ಲಿ ಶವ ಹೂತಿದ್ದಾಗಿ ತಿಳಿಸಿದರು. ಈ ಮಾಹಿತಿ ಆಧರಿಸಿ ಅಲ್ಲಿನ ತಹಸೀಲ್ದಾರ್‌ ಸಮ್ಮುಖದಲ್ಲಿ ಶವ ಹೊರತೆಗೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌­ಎಲ್‌) ಕಳುಹಿಸಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಉತ್ತರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್‌ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯನಗರ ಠಾಣೆ ಇನ್‌ಸ್ಪೆಕ್ಟರ್‌ ಜಿ.ಯು.ಸೋಮೇಗೌಡ, ಎಸ್‌ಐ ಕೆಂಪಣ್ಣ ಹಾಗೂ ಸಿಬ್ಬಂದಿ ಪ್ರಕರಣ ಭೇದಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry