ಭಾನುವಾರ, ಮೇ 9, 2021
17 °C

ಬಾಂಡ್! ಡೈಮಂಡ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಣ್ಣಾ ಬಾಂಡ್~ ಕನ್ನಡ ಚಿತ್ರರಂಗದಲ್ಲಿ ಎಲ್ಲರ ಕಣ್ಣನ್ನು ತನ್ನತ್ತ ಸೆಳೆದುಕೊಂಡಿರುವ ಚಿತ್ರ. ಸೂರಿ ನಿರ್ದೇಶನ, ಪುನೀತ್ ಅಭಿನಯ ಎರಡರಿಂದಲೂ ಚಿತ್ರದ ಬಗ್ಗೆ ಜನ ಕಾತರರಾಗಿದ್ದಾರೆ. ಚಿತ್ರದಷ್ಟೇ ಕುತೂಹಲ ಕೆರಳಿಸಿರುವುದು ಹಾಡುಗಳು.ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಮತ್ತು ಜಯಂತ ಕಾಯ್ಕಿಣಿ ಪದಗಳ ಸಮಾಗಮವೆಂದರೆ ಹೊಸ ಅಲೆಯೊಂದು ಹುಟ್ಟುಹಾಕುತ್ತದೆ ಎಂದೇ ಅರ್ಥ. ಹಲವು ಕುತೂಹಲಗಳ `ಅಣ್ಣಾ ಬಾಂಡ್~ನ ಮೊದಲ ಕುತೂಹಲಕ್ಕೆ ತೆರೆಬಿದ್ದಿದೆ. ಹಾಡುಗಳ ಧ್ವನಿಮುದ್ರಿಕೆ ಜನರ ಬಳಿ ಬಂದಿದೆ.ಅದ್ದೂರಿತನದಿಂದ ಸಮಾರಂಭ ಕಳೆಗಟ್ಟಿದ್ದರೂ ವೇದಿಕೆ ಮೇಲಿದ್ದವರಲ್ಲಿ ಮಾತುಗಳಿಗೆ ಹೆಚ್ಚಿನ ಕೆಲಸವಿರಲಿಲ್ಲ. ಪರಸ್ಪರ ಹೊಗಳಿಕೆ, ಕೃತಜ್ಞತೆ ಅರ್ಪಣೆಗಳಲ್ಲಿ ಚಿತ್ರತಂಡ ಸಂಭ್ರಮದಿಂದ ತೋಯ್ದಿತ್ತು. `ಅಣ್ಣಾ ಬಾಂಡ್~ ಎಲ್ಲರೂ ಮೆಚ್ಚುವಂತಹ ಸಿನಿಮಾ ಆಗಲಿ ಎಂಬ ಹಾರೈಕೆ ಪಾರ್ವತಮ್ಮ ರಾಜ್‌ಕುಮಾರ್ ಅವರದು.ನಿರ್ದೇಶಕ ಸೂರಿ ನುಡಿಗಳು ಚಿತ್ರತಂಡದ ಹೊಗಳಿಕೆಗೆ ಸೀಮಿತವಾಗಿತ್ತು. ಹಾಡುಗಳು ತಮ್ಮ ಚಿತ್ರದ ಪ್ರಧಾನ ಆಕರ್ಷಣೆ ಎಂದ ಸೂರಿ ಇಡೀ ಚಿತ್ರವನ್ನು ಆ್ಯಕ್ಷನ್‌ಮಯ ಆಗಿಸಿರುವುದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಸತ್ಯ ಹೆಗಡೆ ಕ್ಯಾಮೆರಾ ಮತ್ತು ಪುನೀತ್ ಅಭಿನಯ ಚಿತ್ರದ ಮೂಲ ಬಂಡವಾಳ ಎಂಬುದು ಸೂರಿ ಅಭಿಮತ.ಸೂರಿ ನಿರ್ದೇಶನದಲ್ಲಿ ಕೆಲಸ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದರು ಶಿವರಾಜ್‌ಕುಮಾರ್. ಸೂರಿ ಸಿನಿಮಾ ಮಾಡುವ ಬಗೆ ಅವರಿಗೆ ತುಂಬಾ ಇಷ್ಟವಾಗಿದೆಯಂತೆ. ಜಾಕಿ ಚಿತ್ರದ್ದು ಚಿಕ್ಕ ಎಳೆಯಾದರೂ ಸೂರಿ ಅದ್ಭುತವಾಗಿ ಪ್ರಸ್ತುತಪಡಿಸಿದ್ದಾರೆ ಎಂಬ ಮೆಚ್ಚುಗೆ ಅವರದು.ಬಳಿಕ ಮಾತು ಪುನೀತ್ ಕಡೆ ತಿರುಗಿತು. ಅಪ್ಪುವಿನಲ್ಲಿ ಅದ್ಭುತ ಅಭಿನಯ ಕಲೆ ಇದೆ. ಅದರಲ್ಲೂ ಅರಸು ಚಿತ್ರದ ಅಭಿನಯ ಅಪ್ಪಾಜಿ ಅವರನ್ನು ಮತ್ತೆ ತೆರೆ ಮೇಲೆ ನೋಡಿದಂತಾಯಿತು ಎಂದು ಭಾವುಕರಾದರು.ಅವಸರದಲ್ಲಿ ಮಾಡಿದ ಅವಲಕ್ಕಿ ರುಚಿಯಾಗಿರುತ್ತದೆ ಎಂದರು ಜಯಂತ್ ಕಾಯ್ಕಿಣಿ. ಕೊನೇ ಕ್ಷಣದಲ್ಲಿ ಅವಸರದಲ್ಲಿ ಹಾಡು ಬರೆಯುವಂತಾಯಿತು. ಹಾಡಿನ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ ಎಂದರು.ಹರಿಕೃಷ್ಣ ಕಿರೀಟಕ್ಕೆ ಮತ್ತೊಂದು ಗರಿ ಸೇರಿದೆ ಎಂದು ಮಾತು ಆರಂಭಿಸಿದರು ನಟಿ ಪ್ರಿಯಾಮಣಿ. ಚಿತ್ರದ ಮತ್ತೊಬ್ಬ ನಾಯಕಿ ನಿಧಿ ಸುಬ್ಬಯ್ಯ ಅನುಪಸ್ಥಿತಿ ನಡುವೆ ಅವರು ಹೆಚ್ಚು ಮಿಂಚುತ್ತಿದ್ದರು.ಹಾಡುಗಳನ್ನು ಹೊಸ ಬಗೆಯಲ್ಲಿ ನೀಡುವ ಪ್ರಯತ್ನ ಮಾಡಿರುವುದಾಗಿ ಹೇಳಿಕೊಂಡರು ಹರಿಕೃಷ್ಣ. ಚಿ.ಉದಯಶಂಕರ್ ಬರೆದ `ಕಾಣದಂತೆ ಮಾಯವಾದನು~ ಹಾಡಿಗೆ ಆಧುನಿಕ ಸಂಗೀತದ ಸ್ಪರ್ಶ ನೀಡಿ ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಡು ಹಳೆಯದಾದರೂ ಹೊಸತಾಗಿ ತರುವ ಪ್ರಯತ್ನ ತಮ್ಮದು ಎಂದರು.ನೃತ್ಯ ನಿರ್ದೇಶಕ ಇಮ್ರಾನ್, ಸಾಹಸ ನಿರ್ದೇಶಕ ರವಿವರ್ಮ, ಛಾಯಾಗ್ರಾಹಕ ಸತ್ಯ ಹೆಗಡೆ ಮುಂತಾದವರ ಮಾತುಗಳು ಚಿಕ್ಕದಾಗಿದ್ದವು.ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ. ಅದಕ್ಕಾಗಿ ಚಿತ್ರತಂಡ ಶೀಘ್ರವೇ ಮಲೇಷ್ಯಾಕ್ಕೆ ತೆರಳಲಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.