ಶುಕ್ರವಾರ, ಫೆಬ್ರವರಿ 26, 2021
18 °C
ಪದೇ ಪದೇ ಸೇತುವೆ ಮುಳುಗಡೆ; ಹೊಲಗಳಿಗೆ ಪ್ರವಾಹ ನುಗ್ಗಿ ಬೆಳೆ ಹಾನಿ

ಬಾಂದಾರ ಗೇಟ್‌ ತೆಗೆಯಿಸದ ಆಡಳಿತ

ಮಲ್ಲಿಕಾರ್ಜುನ ಎಚ್‌. ಮುಡಬೂಳಕರ್‌ Updated:

ಅಕ್ಷರ ಗಾತ್ರ : | |

ಬಾಂದಾರ ಗೇಟ್‌ ತೆಗೆಯಿಸದ ಆಡಳಿತ

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಯಿಂದ ಹೊನಗುಂಟಾ ಗ್ರಾಮದವರೆಗೆ ಮುಡಬೂಳ, ಇವಣಿ, ಭಾಗೋಡಿ, ಕಾಟಮ್ಮದೇವರಹಳ್ಳಿ, ಕದ್ದರ್ಗಿ, ಮುತ್ತಗಾ, ಶಂಕರವಾಡಿ, ಭಂಕೂರ, ಶಹಾಬಾದ, ಇಂಗಳಗಿ ಗ್ರಾಮಗಳ ಹತ್ತಿರದಿಂದ ಕಾಗಿಣಾ ನದಿ ಹರಿಯುತ್ತಿದೆ.ಕಾಗಿಣಾ ನದಿಗೆ ಅಡ್ಡಲಾಗಿ ತಾಲ್ಲೂಕಿನ ಮುಡಬೂಳ, ಭಾಗೋಡಿ, ಕದ್ದರ್ಗಿ, ಶಂಕರವಾಡಿ, ಇಂಗಳಗಿ ಹತ್ತಿರ ಬಾಂದಾರ ಮತ್ತು ಸೇತುವೆ (ಬಿಸಿಬಿ) ಕಟ್ಟಲಾಗಿದೆ. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಆಗದಿರಲಿ ಎಂದು ಬೇಸಿಗೆ ಆರಂಭದಲ್ಲಿ ಈ ಬಾಂದಾರಗಳಿಗೆ ಅಳವಡಿಸಿರುವ ಕಬ್ಬಿಣದ ಗೇಟ್‌ಗಳನ್ನು ಇನ್ನೂ ತೆಗೆಯಿಸಿಲ್ಲ.ಪರಿಣಾಮ ಪ್ರವಾಹದಲ್ಲಿ ಸೇತುವೆಗಳು ಪದೇ ಪದೇ ಮುಳುಗಡೆಯಾಗಿ ಜನರು ತೀವ್ರ ತೊಂದರೆ, ಕಷ್ಟ ಅನುಭವಿಸುವಂತ್ತಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.ಎಲ್ಲ ಬಾಂದಾರಗಳಿಗೆ ಅಳವಡಿಸಿರುವ ಕಬ್ಬಿಣದ ಗೇಟ್‌ಗಳನ್ನು ಮಳೆಗಾಲ ಆರಂಭವಾಗಿ ಎರಡು ತಿಂಗಳು ಗತಿಸಿದರೂ ಇನ್ನೂ ತೆಗೆಸಿಲ್ಲ. ಜುಲೈ 20 ರಿಂದ ಜಲ್ಲೆಯಾದ್ಯಂತ ಮತ್ತು ತಾಲ್ಲೂಕು ಸೇರಿದಂತೆ ಸೇಡಂ, ಚಿಂಚೋಳಿ ತಾಲ್ಲೂಕುಗಳಲ್ಲಿ ಧಾರಾಕಾರ ಮಳೆ ಸುರಿದು ಅನೇಕ ಹಳ್ಳಕೊಳ್ಳಗಳು, ನದಿ, ನಾಲಾಗಳು ಉಕ್ಕಿ ಹರಿಯುತ್ತಿವೆ.ಬಾಂದಾರ ಮೂಲಕ ಪ್ರವಾಹ ನೀರು ಸರಾಗವಾಗಿ ಹರಿದು ಹೋಗದೆ ಪ್ರವಾಹ ನದಿ ದಂಡೆಯ ಹೊಲಗಳಿಗೆ ನುಗ್ಗಿ ನೂರಾರು ಎಕರೆ ಭೂಮಿಯಲ್ಲಿನ ಹೆಸರು, ಉದ್ದು, ತೊಗರಿ ಬೆಳೆ ಹಾನಿಯಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.ಜುಲೈ 21, 22, 29 ಹಾಗೂ 31 ರಂದು ಕಾಗಿಣಾ ನದಿಯಲ್ಲಿ ಭಾರಿ ಪ್ರವಾಹ ಉಕ್ಕಿ ಬಂದು ದಂಡೋತಿ ಸೇತುವೆ ವಾರದಲ್ಲಿ ನಾಲ್ಕು ಸಲ ಮುಳುಗಡೆಯಾಗಿ ಸಾರಿಗೆ ಸಂಚಾರ ಬಂದ್‌ ಆಗಿದೆ.ಅಲ್ಲದೆ ಅನೇಕ ಬ್ಯಾರೇಜ್‌ಗಳ ಮೇಲೆ ಪ್ರವಾಹ ನೀರು ಹರಿದು ನದಿಯ ಒಂದು ದಂಡೆಯಿಂದ ಮತ್ತೊಂದು ದಂಡೆಯಲ್ಲಿರುವ ಗ್ರಾಮಗಳ ಸಂಪರ್ಕಿಸಲು ಸಾಧ್ಯವಾಗದೆ ರೈತರು, ಜನರು ತೀವ್ರ ಸಮಸ್ಯೆ, ಕಷ್ಟ ಅನುಭವಿಸಬೇಕಾಯಿತು ಎಂದು ಮುಡಬೂಳ ಗ್ರಾಮದ ಶರಣಪ್ಪ ಸಿದ್ರಾಮಗೋಳ ಹೇಳಿದ್ದಾರೆ.ಬಾಂದಾರಗಳಿಗೆ ಅಳವಡಿಸಿರುವ ಗೇಟ್‌ಗಳನ್ನು ತೆಗೆಸಿದ್ದರೆ ನದಿಯಲ್ಲಿನ ಪ್ರವಾಹ ನೀರು ರಭಸವಾಗಿ ಹರಿದು ಹೋಗುತ್ತಿತ್ತು. ದಂಡೋತಿ ಸೇತುವೆ ಪದೇ ಪದೇ ಮುಳುಗಡೆಯಾಗುತ್ತಿರಲಿಲ್ಲ. ನದಿ ದಂಡೆಯಲ್ಲಿನ ಹೊಲಗಳಿಗೆ ಪ್ರವಾಹ ನೀರು ನುಗ್ಗುತ್ತಿರಲಿಲ್ಲ. ಹೊಲಗಳಲ್ಲಿನ ಮುಂಗಾರು ಬೆಳೆಗಳು ಹಾನಿಯಾಗಿ ರೈತರು ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಎನ್ನುತ್ತಾರೆ ರೈತ ಮುಖಂಡ ಚಂದ್ರಶೇಖರ ಪಾಟೀಲ ಮಲಕೂಡ.ಬಾಂದಾರ ಗೇಟ್‌ಗಳನ್ನು ತೆಗೆಯಿಸುವಂತೆ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಿಗೆ ಹೇಳಿದ್ದೇವೆ. ಆದರೆ, ಗೇಟ್‌ ಅಳವಡಿಸುವ ಮತ್ತು ತೆಗೆಯುವ ಕೆಲಸದ ಗುತ್ತಿಗೆ ಮುಗಿದಿದೆ. ಹೊಸದಾಗಿ ಗುತ್ತಿಗೆ ನೀಡಿಲ್ಲ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಅವರು  ಹೇಳುತ್ತಿದ್ದಾರೆ ಎನ್ನುತ್ತಾರೆ ದಂಡೋತಿ ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿಯಪ್ಪ ಎಸ್‌. ಕೊಳ್ಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.