ಬಾಂಧವ್ಯಕ್ಕೆ ಹೊಸ ಭಾಷ್ಯ

6
ಭಾರತ -ಬಾಂಗ್ಲಾದೇಶ ಗಡಿವಿವಾದ ಪರಿಹಾರಕ್ಕೆ ಮಹತ್ವದ ಹೆಜ್ಜೆ

ಬಾಂಧವ್ಯಕ್ಕೆ ಹೊಸ ಭಾಷ್ಯ

Published:
Updated:

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಭೂ ಗಡಿ ಬಿಕ್ಕಟ್ಟನ್ನು ನಿವಾರಿಸಲು ತಂದಿರುವ ಸಂವಿಧಾನ ತಿದ್ದುಪಡಿಯು ಉಭಯ ದೇಶಗಳು ಇನ್ನಷ್ಟು ಮಹತ್ವದ ವಿಚಾರಗಳತ್ತ  ಗಮನ ಕೇಂದ್ರೀಕರಿಸಲು ಅನುವಾಗಿಸಿದೆ.119ನೇ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಎರಡೂ ಸದನಗಳು ಸರ್ವಾನುಮತದಿಂದ ಅಂಗೀಕರಿಸಿದ್ದು, ರಾಷ್ಟ್ರಪತಿ ಅವರ ಒಪ್ಪಿಗೆ ಪಡೆದರೆ, ಇದು ಸಂವಿಧಾನದ 100ನೇ ತಿದ್ದುಪಡಿ ಆಗಲಿದೆ. 2011ರಲ್ಲಿ ಎರಡೂ ದೇಶಗಳ ಪ್ರಧಾನಿಗಳು ಸಹಿ ಮಾಡಿದ ರಾಜತಾಂತ್ರಿಕ ತಿಳಿವಳಿಕೆಯಂತೆ 1974ರಲ್ಲಿ ಮಾಡಿಕೊಂಡ ಭೂ ಗಡಿ ಒಪ್ಪಂದವು ಜಾರಿಗೆ ಬರಲಿದೆ. ಈ ಮಸೂದೆ ತಿದ್ದುಪಡಿಯಾದ ಬಳಿಕ ಭಾರತ-ಬಾಂಗ್ಲಾ ದ್ವಿಪಕ್ಷೀಯ ಸಂಬಂಧದಲ್ಲಿ ಎದುರಾಗಿದ್ದ ಪ್ರಮುಖ ಕಿರಿಕಿರಿಯೊಂದು ತಪ್ಪಲಿದೆ.2011ರ ರಾಜತಾಂತ್ರಿಕ ಸಹಮತವು 1974ರ ಒಪ್ಪಂದದ ನಂತರ ಬಗೆಹರಿಯದೆ ಉಳಿದ ಪ್ರಮುಖ ಮೂರು ವಿಷಯಗಳನ್ನು ಇತ್ಯರ್ಥಪಡಿಸಲು ಪ್ರಯತ್ನಿಸುತ್ತದೆ. ಮೊದಲನೆಯದಾಗಿ ಸುಮಾರು 6.1 ಕಿ.ಮೀ. ಗಡಿಗುರುತು ಮಾಡದೆ ಉಳಿದಿರುವ ಪ್ರದೇಶದ ಬಿಕ್ಕಟ್ಟು ನಿವಾರಿಸುವುದು, ಎರಡನೆಯದಾಗಿ ಇನ್ನೊಂದು ದೇಶದಿಂದ ಸುತ್ತುವರಿದಿರುವ ಭೂ ಪ್ರದೇಶಗಳ (ಪರಾವೃತ್ತ) ಹಸ್ತಾಂತರ ಹಾಗೂ ಮೂರನೆಯದಾಗಿ ಒಂದು ದೇಶದ ನೆಲದಲ್ಲಿ ಇನ್ನೊಂದು ದೇಶದ ಜನ ನೆಲೆಸಿರುವುದರಿಂದ ಆಗಿರುವ ವ್ಯತಿರಿಕ್ತ ಪರಿಣಾಮಗಳನ್ನು ನಿವಾರಿಸುವುದು.ಈ ಮೂರು ವಿಚಾರಗಳನ್ನು ಬಗೆಹರಿಸುವ ಬಗೆಯನ್ನು ವಿದೇಶಾಂಗ ವ್ಯವಹಾರ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ. ರಾಜತಾಂತ್ರಿಕ ಒಪ್ಪಂದದ ಪ್ರಮುಖ ಅಂಶಗಳು ಹೀಗಿವೆ.

1. ರಾಜತಾಂತ್ರಿಕ ಒಪ್ಪಂದದ ಜಾರಿಯಿಂದಾಗಿ ಎಲ್ಲೆಲ್ಲಿ ಗುಡಿ ಗುರುತು ಮಾಡಿಲ್ಲವೋ ಅಲ್ಲೆಲ್ಲ ನಿಶ್ಚಿತ ಗಡಿ ಗುರುತು ದಾಖಲಾಗುತ್ತದೆ.

2.  ಬಾಂಗ್ಲಾದೇಶದಲ್ಲಿರುವ ಭಾರತದ 11 ಪರಾವೃತ್ತ ಪ್ರದೇಶ ಮತ್ತು ಭಾರತದಲ್ಲಿರುವ ಬಾಂಗ್ಲಾದೇಶದ 51 ಪರಾವೃತ್ತ ಪ್ರದೇಶಗಳ ವಿನಿಮಯ ನಡೆಯುತ್ತದೆ.  ಬಾಂಗ್ಲಾದೇಶದಲ್ಲಿರುವ ಭಾರತದ 111 ಪರಾವೃತ್ತ ಪ್ರದೇಶಗಳ ವ್ಯಾಪ್ತಿ 17,160 ಎಕರೆಯಷ್ಟಿದ್ದು, ಅದನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕು. ಭಾರತದಲ್ಲಿರುವ ಬಾಂಗ್ಲಾದ 51 ಪರಾವೃತ್ತ ಪ್ರದೇಶಗಳ ವ್ಯಾಪ್ತಿ 7,110 ಎಕರೆಯಷ್ಟಿದ್ದು, ಅದನ್ನು ಭಾರತಕ್ಕೆ ಹಸ್ತಾಂತರಿಸಬೇಕು.

3. ಇನ್ನೊಂದು ದೇಶದ ನೆಲದಲ್ಲಿ ಅಕ್ರಮವಾಗಿ ನೆಲೆಸಿರುವ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವುದು. ಅಂದರೆ ಜನರು ವಾಸಿಸುವ ಪ್ರದೇಶವನ್ನು ಆಯಾ ದೇಶಕ್ಕೆ ಹಸ್ತಾಂತರಿಸುವುದು. ಇದರಿಂದ ಭಾರತ 2,777 ಎಕರೆ ಪ್ರದೇಶವನ್ನು ಪಡೆಯಲಿದ್ದರೆ, 2,267 ಎಕರೆ ಪ್ರದೇಶವನ್ನು ಬಾಂಗ್ಲಾಕ್ಕೆ ಹಸ್ತಾಂತರಿಸಬೇಕಾಗುತ್ತದೆ.ಈ ರಾಜತಾಂತ್ರಿಕ ಒಪ್ಪಂದವು ವಿವಾದಿತ ಪ್ರದೇಶಗಳಲ್ಲಿ ನೆಲೆಸಿರುವ ಜನರ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಒದಗಿಸುತ್ತದೆ. ಇಲ್ಲಿ ಜನರನ್ನು ಒಕ್ಕಲೆಬ್ಬಿಸುವಿಕೆ ಕನಿಷ್ಠವಾಗಿರುತ್ತದೆ.ವಾಸ್ತವದಲ್ಲಿ ಪರಾವೃತ್ತ ಪ್ರದೇಶಗಳನ್ನು ವಿನಿಮಯ ಮಾಡಿಕೊಳ್ಳುವುದು ಎಂದರೆ ಒಂದು ಕಾಲ್ಪನಿಕ ಪರಿಕಲ್ಪನೆಯಷ್ಟೇ.  ಏಕೆಂದರೆ ಈ ಭೂ ಪ್ರದೇಶಗಳು ಇನ್ನೊಂದು ದೇಶದ ಗಡಿಯೊಳಗೆ ಇವೆ. ಬಾಂಗ್ಲಾದ ಪರಾವೃತ್ತ ಪ್ರದೇಶಗಳಿಗೆ ಬಾಂಗ್ಲಾದ ಭೌತಿಕ ಸಂಪರ್ಕವೇ ಇಲ್ಲ, ಅದೇ ರೀತಿ ಭಾರತದ ಪರಾವೃತ್ತ ಪ್ರದೇಶಗಳಿಗೆ ಭಾರತದ ಭೌತಿಕ ಸಂಪರ್ಕವೇ ಇಲ್ಲ. ಹೀಗಾಗಿ ಈಗಾಗಲೇ ಅನೌಪಚಾರಿಕವಾಗಿ ಇರುವ ವ್ಯವಸ್ಥೆಯನ್ನು ಒಪ್ಪಂದ ಕಾನೂನುಬದ್ಧಗೊಳಿಸುತ್ತದೆ.ಅಕ್ರಮವಾಗಿ ನೆಲೆಸಿರುವವರ ಭೂಪ್ರದೇಶಗಳನ್ನು ಅಧಿಕೃತವಾಗಿಯೇ ಪರಿಗಣಿಸುವುದರಿಂದ ಅವರನ್ನು ಒಕ್ಕಲೆಬ್ಬಿಸುವ ಪ್ರಸಂಗ ಎದುರಾಗುವುದಿಲ್ಲ. ಸರಳವಾಗಿ ಹೇಳುವುದಾದರೆ ಬಾಂಗ್ಲಾ ಜನ ವಾಸಿಸುವ ಸ್ಥಳ ಕಾನೂನುಬದ್ಧವಾಗಿ ಬಾಂಗ್ಲಾ ನೆಲವಾಗಿ ಬದಲಾದರೆ, ಭಾರತೀಯರು ನೆಲೆಸಿರುವ ಪ್ರದೇಶ ಕಾನೂನುಬದ್ಧವಾಗಿ ಭಾರತದ ನೆಲವಾಗಿಬಿಡುತ್ತದೆ.ಮೂರು ಕಾರಣಕ್ಕೆ ಇದನ್ನು ಅತ್ಯಂತ ಉತ್ತಮ ಬೆಳವಣಿಗೆ ಎನ್ನಬೇಕು.

1. ಪರಾವೃತ್ತ ಪ್ರದೇಶವನ್ನು ನಿರ್ವಹಿಸುವುದು ಜನಹಿತಕ್ಕೆ ವಿರುದ್ಧ ಮತ್ತು ಅನ್ಯಾಯ ಎಂಬಂತೆ ಕಾಣಿಸುತ್ತದೆ. ಏಕೆಂದರೆ ಈ ಪ್ರದೇಶಗಳ ನಿವಾಸಿಗಳು ಭಾರತ ಅಥವಾ ಬಾಂಗ್ಲಾದ ಪ್ರಜೆಗಳೆಂಬ ಹಕ್ಕನ್ನು  ಕಾನೂನು ರೀತ್ಯಾ ಪೂರ್ಣಪ್ರಮಾಣದಲ್ಲಿ ಹೊಂದಿರುವುದಿಲ್ಲ. ಪರಾವೃತ್ತ ಪ್ರದೇಶವನ್ನು ತಲುಪಬೇಕಿದ್ದರೆ ಇನ್ನೊಂದು ದೇಶವನ್ನು ಬಳಸಿಯೇ ತೆರಳಬೇಕು. ಈ ಪ್ರದೇಶಗಳಲ್ಲಿ ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಸೇವೆ ಒದಗಿಸುವುದು ಸಾಧ್ಯವಿಲ್ಲ. ಜಗತ್ತಿನ ಏಕೈಕ 3ನೇ ಹಂತದ ಪರಾವೃತ್ತ ಪ್ರದೇಶ (ಥರ್ಡ್ ಆರ್ಡರ್ ಎನ್‌ಕ್ಲೇವ್) ಎಂಬ ಖ್ಯಾತಿಯ ದಹಾಲಾ ಖಗ್ರಬರಿ ನಂ.51 ಇರುವುದು ಇಲ್ಲಿ. ಇಲ್ಲಿ ಬಾಂಗ್ಲಾದೇಶದೊಳಗೆ ಭಾರತದ ಭೂ ಪ್ರದೇಶ ಇದೆ. ಅದು ಮತ್ತೆ ಭಾರತದ ಭೂಪ್ರದೇಶದೊಳಗೆ ಮತ್ತು ಬಾಂಗ್ಲಾದೇಶದ ಭೂಪ್ರದೇಶದೊಳಗೆ ಬರುತ್ತದೆ. ಅಂದರೆ ಒಂದು ದೇಶವನ್ನು ಇನ್ನೊಂದು ದೇಶ ಸುತ್ತುವರಿದುಕೊಂಡು ಮೂರು ಹಂತದ ಬಳಿಕ ಉಳಿಯುವ ಭೂ ಪ್ರದೇಶ. ಈ ಭೂಪ್ರದೇಶಗಳನ್ನು ಆಯಾ ದೇಶಗಳಿಗೆ ಹಸ್ತಾಂತರಿಸುವ ಮೂಲಕ ಗಡಿ ವಿಚಾರ ತರ್ಕಬದ್ಧವಾಗುವುದು ಮತ್ತು ಜನ ತಮ್ಮ ಹಕ್ಕುಗಳನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ.

2. ಅಭಿವೃದ್ಧಿ ಮತ್ತು ಪ್ರಜೆಗಳ ಹಿತ ಕಾಪಾಡುವ ನಿಟ್ಟಿನಲ್ಲಿ ದೇಶದ ಗಡಿ ಏಕತೆ ಇರಬೇಕು ಎಂಬ ಆರೋಗ್ಯಕರ ಸಂಪ್ರದಾಯವನ್ನು ಹುಟ್ಟು ಹಾಕಿದಂತಾಗುತ್ತದೆ. ಇಲ್ಲಿ ಸಣ್ಣ ತುಂಡು ನೆಲ ಜನರ ಬದುಕಿಗೆ ಅಡ್ಡಿಯಾಗಿ ಪರಿಣಮಿಸಿತ್ತು. ಇದರಿಂದ ಜನ ದ್ವಿತೀಯ ದರ್ಜೆ ನಾಗರಿಕರಾಗಿ ಬದುಕಬೇಕಿತ್ತು. ಈ ವಿವಾದ ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಪರಸ್ಪರ ಅನುಕೂಲಕರ ಒಪ್ಪಂದಗಳಿಗೆ ಅಡ್ಡಿ ಆಗಿತ್ತು.

3. ಈಶಾನ್ಯ ಭಾರತವನ್ನು ದೇಶದ ಇತರ ಭಾಗಕ್ಕೆ ಹಲವಾರು ರಸ್ತೆ, ರೈಲು ಮಾರ್ಗಗಳ ಮೂಲಕ ಸಂಪರ್ಕಿಸುವುದಕ್ಕೆ ಬಾಂಗ್ಲಾದೇಶ ಅವಕಾಶ ನೀಡಬೇಕು ಎಂಬುದು ಭಾರತದ ದೀರ್ಘ ಕಾಲದ ಬೇಡಿಕೆ. ಇದಕ್ಕೆ ಪ್ರತಿಯಾಗಿ ನದಿ ನೀರು ಹಂಚಿಕೆ ವಿವಾದವನ್ನು ತನ್ನ ಪರವಾಗಿ ಬಗೆಹರಿಸಬೇಕು ಎಂಬುದು ಬಾಂಗ್ಲಾದ ಬೇಡಿಕೆ. ಈ ಎರಡು ಹಿತಾಸಕ್ತಿಗಳಿಗೆ ಭಾರತ-ಬಾಂಗ್ಲಾ ನಡುವಿನ ಭೂ ಮತ್ತು ಜಲ ಗಡಿ ವಿವಾದ ದೊಡ್ಡ ತಲೆನೋವಾಗಿತ್ತು. ಈ ವಿವಾದದಿಂದಾಗಿ ಎರಡೂ ದೇಶಗಳಿಗೆ ಅಗತ್ಯವಾದ ಅದೆಷ್ಟೋ ಪ್ರಮುಖ ವಿಷಯಗಳನ್ನು ಬಗೆಹರಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಇದೀಗ  ಕಿರಿಕಿರಿ ಉಂಟುಮಾಡುವ ಎರಡು ಪ್ರಮುಖ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಂಡಿರುವುದರಿಂದ ಎರಡೂ ದೇಶಗಳ ಬಾಂಧವ್ಯದಲ್ಲಿ ಅಭಿವೃದ್ಧಿ ನಿರೀಕ್ಷಿಸುವುದು ಸಾಧ್ಯ.ಭಾರತ ಮಾಡುತ್ತಿರುವ ಈ ಸಂವಿಧಾನ ತಿದ್ದುಪಡಿ ಒಂದು ರಚನಾತ್ಮಕ ಕ್ರಮವಾಗಿದ್ದು, ದ್ವಿಪಕ್ಷೀಯ ಸಂಬಂಧವನ್ನು ನೂತನ ಎತ್ತರಕ್ಕೆ ಕೊಂಡೊಯ್ಯಬಲ್ಲದು.ಲೇಖಕ ಬೆಂಗಳೂರಿನ ಸಾರ್ವಜನಿಕ ನೀತಿ ನಿರೂಪಣಾ ಸಂಸ್ಥೆ ‘ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌’ನಲ್ಲಿ ರಿಸರ್ಚ್‌ ಫೆಲೊ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry