ಬಾಂಬ್ ಸ್ಫೋಟ: ನಾಲ್ವರಿಗೆ ಶ್ರವಣ ಶಕ್ತಿ ನಷ್ಟ

7

ಬಾಂಬ್ ಸ್ಫೋಟ: ನಾಲ್ವರಿಗೆ ಶ್ರವಣ ಶಕ್ತಿ ನಷ್ಟ

Published:
Updated:
ಬಾಂಬ್ ಸ್ಫೋಟ: ನಾಲ್ವರಿಗೆ ಶ್ರವಣ ಶಕ್ತಿ ನಷ್ಟ

ಶಿಡ್ಲಘಟ್ಟ: ತಾಲ್ಲೂಕಿನ ದೇವರ­ಮಳ್ಳೂರು ಗ್ರಾಮದಲ್ಲಿ ಬಾಂಬ್‌ ಸ್ಫೋಟ­ಗೊಂಡು ವ್ಯಕ್ತಿಯ ಬೆರಳು ತುಂಡಾಗಿ, ನಾಲ್ವರು ಶ್ರವಣ ಶಕ್ತಿ ಕಳೆದು­ಕೊಂಡ ಘಟನೆ ಬುಧವಾರ ನಡೆದಿದೆ.ಗ್ರಾಮದ ನಿವಾಸಿಗಳಾದ ಶ್ರೀನಾಥ್, ಮೋಹನ್‌, ಅಕ್ಕಲಪ್ಪ ಮತ್ತು ಲಕ್ಷ್ಮಣ್‌ ಕಿವಿ ಕೇಳದ ಸ್ಥಿತಿ ಅನುಭವಿಸುತ್ತಿದ್ದಾರೆ. ಅವರ ಪೈಕಿ ಮೋಹನ್ ಬೆರಳು ತುಂಡಾ­ಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಬಾಂಬ್‌ ಯಾರು ಮತ್ತು ಯಾವ ಉದ್ದೇಶಕ್ಕೆ ಇಟ್ಟಿದ್ದರು ಎಂಬುದು ನಿಗೂಢ­ವಾಗಿದ್ದು, ಪ್ರಕರಣ ದಾಖಲಿಸಿ­ಕೊಂಡಿ­ರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಹಂದಿಗಳನ್ನು ಓಡಿಸಲು ಬಾಂಬ್‌ ಇಟ್ಟಿದ್ದ ಶಂಕೆಯಿದೆ. ಆದರೆ ಗ್ರಾಮಸ್ಥರನ್ನು ವಿಚಾರಣೆಗೆ ಒಳಪ­ಡಿ­ಸಿದ ನಂತರವಷ್ಟೇ ಸತ್ಯಾಂಶ ಬೆಳಕಿಗೆ ಬರುತ್ತದೆ. ಬಾಂಬ್‌ ಸ್ಫೋಟದಂತಹ ಘಟನೆ ಈ ಹಿಂದೆ ಸಂಭವಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ವಿವರ: ತೋಟದಲ್ಲಿ ಕೊಳವೆಬಾವಿ ಕೊರೆ­­ಸಲು ತೋಟದ ಮಾಲೀಕ ಶ್ರೀನಾಥ್ ತಮ್ಮ ಮೂವರು ಸ್ನೇಹಿತ­ರಾದ ಮೋಹನ್‌, ಅಕ್ಕಲಪ್ಪ, ಲಕ್ಷ್ಮಣ್‌ ಅವ­ರನ್ನು ತೋಟಕ್ಕೆ ಕರೆದೊಯ್ದಿದ್ದಾರೆ. ಕೊಳವೆಬಾವಿ ತೋಡಲು ಸ್ಥಳ ನೋಡು­ತ್ತಿದ್ದಾಗ, ಕಾಗದವೊಂದರಲ್ಲಿ ಇಟ್ಟು, ಉಂಡೆ ರೂಪದಲ್ಲಿ ದಾರದಿಂದ ಕಟ್ಟಿದ್ದ ವಸ್ತುವೊಂದು ಸಿಕ್ಕಿದೆ. ಆಟದ ವಸ್ತು ಅಥವಾ ಮಂತ್ರಿಸಿದ ವಸ್ತು ಇರಬಹುದು ಎಂದು ನಾಲ್ವರು ಭಾವಿಸಿದ್ದಾರೆ.

ಬಾಂಬ್‌ ಎಂಬುದನ್ನು ಅರಿಯದ ಮೋಹನ್‌ ಕೈಗೆತ್ತಿಕೊಂಡು ದಾರವನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ನಂತರ ಕೊಡಲಿಯಿಂದ ಕತ್ತರಿಸಲು ಪ್ರಯತ್ನಿಸಿ­ದಾಗ ಸ್ಫೋಟಗೊಂಡು ಮೋಹನ್ ತಮ್ಮ ಕೈಯ ಬೆರಳು ಕಳೆದುಕೊಂಡರು. ಅಷ್ಟೇ ಅಲ್ಲ, ಭಾರಿ ಸ್ಫೋಟಕ್ಕೆ ನಾಲ್ವರು ಶ್ರವಣ ಶಕ್ತಿ ಕಳೆದುಕೊಂಡರು. ನಂತರ ಅವರನ್ನು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯಿತು.‘ಭಾರಿ ಸ್ಫೋಟ ಮತ್ತು ಶಬ್ದಕ್ಕೆ ನಾವೆಲ್ಲ ಬೆಚ್ಚಿ ಬಿದ್ದೆವು. ಇಂತಹ ಘಟನೆ ನಮ್ಮ ಗ್ರಾಮದಲ್ಲಿ ಯಾವತ್ತೂ ನಡೆದಿರಲಿಲ್ಲ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.ಬಾಂಬ್‌ ಇಟ್ಟಿರುವುದು ಶ್ರೀನಾಥ್‌ಗೆ ಮತ್ತು ಸುತ್ತಮುತ್ತಲಿನ ಮನೆಯವ­ರಿಗೂ ಗೊತ್ತಿಲ್ಲ. ನಮ್ಮ ಗ್ರಾಮದಲ್ಲಿ ಹಿಂಸಾತ್ಮಕ ಚಟುವಟಿಕೆಗಳು ನಡೆದಿಲ್ಲ. ಹೀಗಿದ್ದರೂ ಬಾಂಬ್‌ ಇಲ್ಲಿ ಇಟ್ಟಿರುವುದು ಮತ್ತು ಸ್ಫೋಟಗೊಂಡಿ­ರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸಬೇಕು. ಬಾಂಬ್‌ ಯಾರು ಇಟ್ಟಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry