ಬಾಂಬ್ ಸ್ಫೋಟ: ಮೂವರ ಸೆರೆ

7

ಬಾಂಬ್ ಸ್ಫೋಟ: ಮೂವರ ಸೆರೆ

Published:
Updated:

ಬ್ಯಾಂಕಾಕ್ (ಪಿಟಿಐ): ಮಂಗಳವಾರ ಇಲ್ಲಿ ಸಂಭವಿಸಿದ ಮೂರು ಬಾಂಬ್ ಸ್ಫೋಟ ಪ್ರಕರಣ ಕುರಿತಂತೆ ಇಬ್ಬರು ಇರಾನ್ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಕ್ವಾಲಾಲಂಪುರದಲ್ಲಿ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಈ ಮಧ್ಯೆ, ದೆಹಲಿ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ಬಾಂಬ್ ದಾಳಿ ಘಟನೆಗಳ ನಂಟಿನ ಸಾಧ್ಯತೆಗಳ ಬಗ್ಗೆ ಥಾಯ್ಲೆಂಡ್ ಬುಧವಾರ ತನಿಖೆ ಆರಂಭಿಸಿದೆ.ದೆಹಲಿ ಮತ್ತು ಬ್ಯಾಂಕಾಕ್‌ಗಳಲ್ಲಿ ನಡೆದ ಸ್ಫೋಟಗಳಿಗೆ ಅಯಸ್ಕಾಂತೀಯ (ಮ್ಯಾಗ್ನಿಟಿಕ್) ಬಾಂಬ್‌ಗಳನ್ನು ಬಳಕೆ ಮಾಡಿರುವ ಬಗ್ಗೆ ಪುರಾವೆಗಳು ದೊರಕಿವೆ.ಆದರೆ ಬ್ಯಾಂಕಾಕ್, ನವದೆಹಲಿ ಮತ್ತು ಟಿಬಿಲ್ಸಿಗಳಲ್ಲಿ ನಡೆದ ವಿಧ್ವಂಸಕ ಕೃತ್ಯಗಳು ಒಂದಕ್ಕೊಂದು ನಂಟು ಹೊಂದಿವೆಯೇ ಎಂಬ ಬಗ್ಗೆ ಇನ್ನೂ ಖಾತರಿ ಪಡಿಸಿಕೊಳ್ಳಬೇಕಿದೆ ಎಂದು ಥಾಯ್ಲೆಂಡ್ ರಾಷ್ಟ್ರೀಯ ಭದ್ರತಾ ಮಂಡಳಿ ಮುಖ್ಯಸ್ಥರು ತಿಳಿಸಿದ್ದಾರೆ.`ಮಂಗಳವಾರದ ಘಟನೆಗೆ ಮೂವರು ಇರಾನ್ ಪ್ರಜೆಗಳೇ ಕಾರಣ ಎಂದು ಶಂಕಿಸಿದ್ದೆವು. ಭಾರತ ಮತ್ತು ಜಾರ್ಜಿಯಾಗಳಲ್ಲಿ ಇಸ್ರೇಲ್ ದೂತಾವಾಸದ ಸಿಬ್ಬಂದಿ ಮೇಲೆ ನಡೆದ ದಾಳಿಯನ್ನು ನೋಡಿದರೆ ಒಂದೇ ಜಾಲದ ದಾಳಿಕೋರರು ಈ ವಿಧ್ವಂಸಕ ಕೃತ್ಯ ನಡೆಸಿರುವುದರಲ್ಲಿ ಯಾವುದೇ ಸಂಶಯವಿಲ್ಲ~ ಎಂದು ಥಾಯ್ಲೆಂಡ್‌ನಲ್ಲಿರುವ ಇಸ್ರೇಲ್ ರಾಯಭಾರಿ ಇಜ್ಹಾಕ್ ಶೋಹಂ ಹೇಳಿದ್ದಾರೆ.ಪೊಲೀಸರು ಬಂಧಿಸಿರುವ ಇಬ್ಬರು ಇರಾನಿಗಳ ಮೇಲೆ ವಿಧ್ವಂಸಕ ಕೃತ್ಯ ಮತ್ತು ಇನ್ನಿತರ ಅಪರಾಧಗಳ ಆರೋಪವನ್ನು ಹೊರೆಸಲಾಗಿದೆ. ಶಂಕಿತ ಮೂರನೇ ವ್ಯಕ್ತಿ ಮಲೇಷ್ಯಾಕ್ಕೆ ಪರಾರಿಯಾಗಿದ್ದು ಅಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.`ಇದು ಭಯೋತ್ಪಾದಕರ ಕೃತ್ಯ ಎಂಬ ನಿಲುವಿಗೆ ಈಗಲೇ ಬರಲು ಆಗದು. ಆದರೆ, ಭಾರತದಲ್ಲಿ ನಡೆದ ದಾಳಿಗೆ ಈ ಘಟನೆಯನ್ನು ಹೋಲಿಸಿದರೆ ಹತ್ಯೆ ನಡೆಸಲು ನಡೆಸಿದ ಯತ್ನವೇ ಆಗಿದೆ~ ಎಂದು ಥಾಯ್ಲೆಂಡ್ ವಿದೇಶಾಂಗ ಸಚಿವ ಸುರಪಾಂಗ್ ಟೊವಿಚಕ್‌ಚೈಕುಲ್ ಹೇಳಿದ್ದಾರೆ.ಈ ಸ್ಫೋಟವು ಇಸ್ರೇಲ್ ರಾಜತಂತ್ರಜ್ಞರನ್ನು ಗುರಿಯಾಗಿಟ್ಟು ಕೊಂಡು ನಡೆಸಿದ ಕೃತ್ಯ ಎಂದು ಥಾಯ್ಲೆಂಡ್ ಬೇಹುಗಾರಿಕಾ ಮೂಲಗಳು ಹೇಳಿವೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.ಇರಾನ್ ಪ್ರಜೆ ಎಂದು ಶಂಕಿಸಲಾದ ಯುವಕ ಬಾಂಬ್ ಸ್ಫೋಟಿಸಿದ್ದ. ನಾಲ್ವರು ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry