ಭಾನುವಾರ, ಮೇ 22, 2022
22 °C

ಬಾಕಿ ಹಣ ಬಿಡುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ನಾಲ್ಕು ವರ್ಷದಿಂದ ಬಾಕಿಯಿರುವ ತಮ್ಮ  ಭವಿಷ್ಯ ನಿಧಿ ಹಣದ ಬಿಡುಗಡೆಗೆ ಒತ್ತಾಯಿಸಿ ಸೋಮವಾರದಿಂದ ದಿನಗೂಲಿ ಪೌರ ಕಾರ್ಮಿಕರು ಪುರಸಭೆಯ ಮುಂದೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದರು.ಇಲ್ಲಿನ ಪುರಸಭೆಯ ನೀರು, ನೈರ್ಮಲ್ಯ ಹಾಗೂ ವಿದ್ಯುತ್ ಕಾಮಗಾರಿಗಳನ್ನು ಪ್ರತಿದಿನ ನಿರ್ವಹಿಸಲು ಇರುವ ಸುಮಾರು 48 ದಿನಗೂಲಿ ಗುತ್ತಿಗೆ ನೌಕರರು ತಮ್ಮ ನಾಲ್ಕು ವರ್ಷದ ಭವಿಷ್ಯ ನಿಧಿ ಹಣ ಇಲ್ಲಿಯವರೆಗೆ ತಮ್ಮ ಖಾತೆಗೆ ಜಮೆಯಾಗಿಲ್ಲ ಎಂದು ದೂರಿದರು.ಹೋರಾಟಕ್ಕೆ ಬೆಂಬಲವ್ಯಕ್ತಪಡಿಸಿದ ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್ ಹಾಗೂ ಸಿ.ಪಿ.ಮಹೇಶ್ ಮಾತನಾಡಿ, ಕಳೆದ ನಾಲ್ಕು ವರ್ಷದ ಹಿಂದೆ ಪುರಸಭೆಗೆ ಕಸ ವಿಲೇವಾರಿ, ನೀರು ಹಾಗೂ ವಿದ್ಯುತ್ ಕೆಲಸಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದಲ್ಲಿ ದಿನಗೂಲಿ ನೌಕರರನ್ನು ನೇಮಿಸಲಾಗಿತ್ತು.ಗುತ್ತಿಗೆದಾರರು ದಿನಗೂಲಿ ನೌಕರರಿಗೆ ಸಲ್ಲಬೇಕಾದ ಭವಿಷ್ಯ ನಿಧಿ ಹಣವನ್ನು ಆಯಾ ನೌಕರರ ಸ್ವಂತಖಾತೆಗೆ ಜಮಾ ಮಾಡಬೇಕಿತ್ತು. ಆದರೆ ನಾಲ್ಕು ವರ್ಷದಿಂದ ಗುತ್ತಿಗೆದಾರರು ಹಣ ಜಮಾ ಮಾಡದೆ ವಂಚಿಸಿದ್ದಾರೆ.ನೌಕರರ ಪ್ರತಿ ತಿಂಗಳ ವೇತನದಲ್ಲಿ ಶೇ 12ರಷ್ಟು ಮೊತ್ತವನ್ನು ಗುತ್ತಿಗೆದಾರರು ಮತ್ತು ಶೇ 13ರಷ್ಟು ಸರಕಾರ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡಬೇಕು. ಗುತ್ತಿಗೆದಾರನ ಖಾತೆಗೆ ಸರ್ಕಾರದ ಹಣ ಜಮೆಯಾದರೂ ದಿನಗೂಲಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಹಣ ಜಮೆಯಾಗಿಲ್ಲ ಎಂದು ದೂರಿದರು.ಈ ಕುರಿತು ಹಲವು ಬಾರಿ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗಿತ್ತು. ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.ಕಳೆದ ನಾಲ್ಕು ವರ್ಷದಿಂದ ಈ ಕೆಲಸಗಳ ಗುತ್ತಿಗೆ ಪಡೆದಿರುವ ಮಾತಾ ಏಜೆನ್ಸಿ, ಮೈ ಅಸೋಸಿಯೇಟ್ ಹಾಗೂ ಮಂಜುನಾಥ ಕಂಪನಿಯ ಗುತ್ತಿಗೆದಾರರು ಸ್ಥಳಕ್ಕೆ ಬಂದು ಬಗೆಹರಿಸುವವರೆಗೂ ಕದಲುವುದಿಲ್ಲವೆಂದು ನೌಕರರು ತಿಳಿಸಿದರು.ದಲಿತ ಸಂಘದ ಲಿಂಗದೇವರು ಹಾಗೂ ಕಂಟಲಗೆರೆ ಸತೀಶ್ ನೌಕರರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಸಮಸ್ಯೆಯ ನಿವಾರಣೆಗಾಗಿ ನಗರಸಭೆ ಅಧಿಕಾರಿಯೊಬ್ಬರನ್ನು ಭವಿಷ್ಯ ನಿಧಿ ಕಚೇರಿಗೆ ಕಳುಹಿಸಲಾಗಿದ್ದು.ನೌಕರರ ಹಣವು ಸಂಬಂಧಿಸಿದ ಗುತ್ತಿಗೆದಾರರ ಖಾತೆಯಲ್ಲಿ ಇರುವುದರಿಂದ ಶೀಘ್ರ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲಿಯವರೆಗೂ ನೈರ್ಮಲ್ಯ ಹಾಗೂ ನೀರಿನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.