ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಮನವಿ

7
ಮನ್ನೆಕೋಟೆ ಗ್ರಾಮ ಪಂಚಾಯ್ತಿ ವಸತಿ ಫಲಾನುಭವಿಗಳ ಗೋಳು

ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಮನವಿ

Published:
Updated:

ಚಳ್ಳಕೆರೆ: ತಾಲ್ಲೂಕಿನ ತಳಕು ಹೋಬಳಿ ಮನ್ನೆಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದ ಆಶ್ರಯ ಮತ್ತು ಇಂದಿರಾ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ವಸತಿರಹಿತ ಫಲಾನುಭವಿಗಳಿಗೆ ಇದುವರೆಗೂ ಬಿಲ್‌ನ ಹಣ ನೀಡದೇ ಪಂಚಾಯ್ತಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಂಗಳವಾರ ಫಲಾನುಭವಿಗಳು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪಗೆ ಮನವಿ ಸಲ್ಲಿಸಿದರು.ಫಲಾನುಭವಿಗಳು ಮಾತನಾಡಿ, 2008-09ರಲ್ಲಿ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ಹಾಗೂ 2009-10ನೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ ಆಯ್ಕೆಯಾದ ಸುಮಾರು 18 ವಸತಿ ರಹಿತ ಫಲಾನುಭವಿಗಳಿಗೆ ಪ್ರಾರಂಭದ ಎರಡು ಬಿಲ್‌ಗಳ ಹಣವನ್ನು ಮಾತ್ರ ನೀಡಲಾಗಿದೆ. ಉಳಿದ ಬಿಲ್‌ನ ಹಣವನ್ನು ಕೇಳಿದರೆ ಪಂಚಾಯ್ತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಮೂರು-ನಾಲ್ಕು ವರ್ಷಗಳಿಂದ ಪಂಚಾಯ್ತಿ ಕಚೇರಿಗೆ ಅಲೆದರೂ ನಮ್ಮ ಸಂಕಷ್ಟವನ್ನು ಯಾರೊಬ್ಬರೂ ಆಲಿಸುತ್ತಿಲ್ಲ. ಇದೀಗ ಪಂಚಾಯ್ತಿಗೆ ಅಭಿವೃದ್ಧಿ ಅಧಿಕಾರಿಯಾಗಿ ಹೊಸಬರು ಬಂದಿರುವುದರಿಂದ ನಿಮ್ಮ ವಸತಿ ಯೋಜನೆಯ ಹಣ ಬಾಕಿ ಇಲ್ಲ. ಎಲ್ಲವನ್ನೂ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಫಲಾನುಭವಿಗಳು ತಮ್ಮ ಗೋಳು ತೋಡಿಕೊಂಡರು.ಒಬ್ಬ ಫಲಾನುಭವಿಗೆ ವಸತಿ ಯೋಜನೆ ಅಡಿಯಲ್ಲಿ ರೂ 40 ಸಾವಿರ ಹಣ ಮಂಜೂರಾಗಿತ್ತು. ಇದರಲ್ಲಿ ಎರಡು ಬಿಲ್‌ನ ಹಣವನ್ನು ಮಾತ್ರ ನೀಡಲಾಗಿದೆ. ಉಳಿದ ಹಣ ಏನಾಗಿದೆ? ಎಂದು ಯಾರೂ ಹೇಳುತ್ತಿಲ್ಲ. ಸರ್ಕಾರದ ಸಹಾಯಧನಕ್ಕೆ ಕಾಯದೇ ಸಾಲ ಮಾಡಿ ಮನೆ ಕಟ್ಟಿಕೊಂಡವರ ಪಾಡು ಹೇಳತೀರದಾಗಿದೆ. ಸಾಲಗಾರರು ದಿನಬೆಳಗಾದರೆ ಮನೆ ಮುಂದೆ ಬಂದು ನಿಲ್ಲುತ್ತಾರೆ. ಇನ್ನು ಕೆಲವರು ಅರ್ಧಕ್ಕೆ ಮನೆಯನ್ನು ನಿಲ್ಲಿಸಿದ್ದಾರೆ ಎಂದು ವಿವರಿಸಿದರು.ಫಲಾನುಭವಿಗಳ ಅಳಲು ಆಲಿಸಿದ ಅಧ್ಯಕ್ಷ ಚಿದಾನಂದಪ್ಪ ದೂರವಾಣಿ ಮೂಲಕ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಿ, ಕೋಡಿಹಳ್ಳಿ ಗ್ರಾಮದ ಆಶ್ರಯ ಮತ್ತು ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳ ಬಾಕಿ ಬಿಲ್ ಹಣವನ್ನು ನೀಡದೇ ಇರಲು ಕಾರಣ ಏನು ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ, ಎಲ್ಲಾ ಫಲಾನುಭವಿಗಳ ವಿವರ ತರುವಂತೆ ಸೂಚಿಸಿ, ಇನ್ನು ಎರಡು ದಿನಗಳ ಒಳಗಾಗಿ ಈ ಕುರಿತು ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ನಿಮ್ಮ ಸಮಸ್ಯೆ ಬಗೆಹರಿಸಲಾಗುವುದು ಎಂದು ಫಲಾನುಭವಿಗಳಿಗೆ ಭರವಸೆ ನೀಡಿದರು. 

ಕಾಕಿ ತಿಪ್ಪಮ್ಮ, ಭೀಮೇಶ್, ಶಕುಂತಲಮ್ಮ, ತಿಪ್ಪೇಸ್ವಾಮಿ, ಲಕ್ಷ್ಮೀದೇವಿ, ಮಾಳಕ್ಕ, ಪಾಪಕ್ಕ, ಗಂಗಮ್ಮ, ಗೀತಮ್ಮ ಇದ್ದರು.31ರಂದು ಸ್ಪರ್ಧೆ

ಚಳ್ಳಕೆರೆ ಪಟ್ಟಣದ `ಅರುಣ್ ಸೈನ್ ಡ್ಯಾನ್ಸ್ ಸ್ಟೈಲ್ಸ್'  ಡ್ಯಾನ್ಸ್ ಶಾಲೆಯ ವತಿಯಿಂದ ಡಿ. 31ರಂದು ಬಿ.ಎಂ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ `ಡ್ಯಾನ್ಸ್ ಫೆಸ್ಟ್' ಎಂಬ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಮೊದಲ ಬಹುಮಾನವಾಗಿರೂ 10,000 ಹಾಗೂ ದ್ವಿತೀಯ ಬಹುಮಾನ ರೂ 5,000 ಮತ್ತು ಭಾಗವಹಿಸಿದ ಎಲ್ಲಾ ಗುಂಪುಗಳಿಗೂ ಸಮಾಧಾನಕರ ಬಹುಮಾನ ವಿತರಣೆ ಮಾಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಇದೇ 23ರಂದು ಗುಂಪುಗಳ ಆಯ್ಕೆ ಮಾಡಲಾಗುವುದು. ಆಯ್ಕೆ ಆದ ಗುಂಪುಗಳು ಮಾತ್ರ ಡಿ. 31ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ. ಆದ್ದರಿಂದ, ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸತಕ್ಕದ್ದು.ಮಾಹಿತಿಗಾಗಿ ಮೊಬೈಲ್: 80506 66070  ಸಂಪರ್ಕಿಸಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry