ಬಾಗಲಕೋಟೆಗೆ ಉಚಿತ ವೈಫೈ

ಬಾಗಲಕೋಟೆ: ಮೈಸೂರು ಮತ್ತು ಬಾಗಲಕೋಟೆ ನಗರಗಳ ಆಯ್ದ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶೀಘ್ರದಲ್ಲೇ ಉಚಿತವಾಗಿ ವೈಫೈ (wi-fi) ನೆಟ್ವರ್ಕ್ ಸೌಲಭ್ಯ ಲಭಿಸಲಿದೆ.
ಈಗಾಗಲೇ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಶಾಂತಿನಗರ, ಕೋರಮಂಗಲ, ಯಶವಂತಪುರ ಮತ್ತು ಇಂದಿರಾನಗರ ವ್ಯಾಪ್ತಿಯಲ್ಲಿ ಉಚಿತ ವೈಫೈ ನೆಟ್ವರ್ಕ್ ಸೇವೆ ಜಾರಿಯಲ್ಲಿದೆ.
ಅಂತರ್ಜಾಲ ಬಳಕೆ ಸುಲಭ ಸಾಧ್ಯವಾಗಿಸುವ ಉದ್ದೇಶದಿಂದ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ನಗರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರ ತವರು ಬಾಗಲಕೋಟೆ ನಗರಗಳನ್ನು ಆಯ್ಕೆ ಮಾಡಿಕೊಂಡು ವೈಫೈ ನೆಟ್ವರ್ಕ್ ಸೇವೆಯನ್ನು ಪ್ರಾಯೋಗಿಕವಾಗಿ (ಫೈಲಟ್ ಪ್ರಾಜೆಕ್ಟ್) ವಿಸ್ತರಿಸಲಾಗುತ್ತಿದೆ.
ಬಾಗಲಕೋಟೆ ನವನಗರದ ಜಿಲ್ಲಾಡಳಿತ ಭವನ ವ್ಯಾಪ್ತಿ ಮತ್ತು ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ವ್ಯಾಪ್ತಿಯಲ್ಲಿ ಹಾಗೂ ಮೈಸೂರಿನ ದೇವರಾಜ ಅರಸು ರಸ್ತೆ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಉಚಿತ ವೈಫೈ ನೆಟ್ವರ್ಕ್ ಸೌಲಭ್ಯ ಅಂತರ್ಜಾಲ ಬಳಕೆದಾರರಿಗೆ ಲಭಿಸಲಿದೆ. ವೈಫೈ ನೆಟ್ವರ್ಕ್ ಸೌಲಭ್ಯವನ್ನು ಎರಡು ನಗರಗಳಿಗೆ ವಿಸ್ತರಿಸುತ್ತಿರುವ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಡಿ–ವೈಸ್ (D-vois) ಕಂಪೆನಿ ಮುಖ್ಯ ಯೋಜನಾಧಿಕಾರಿ ಅಜಿತ್, ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ಮೈಸೂರು ಮತ್ತು ಬಾಗಲಕೋಟೆ ನಗರದಲ್ಲಿ 512 ಕೆಬಿ ಪಿಎಸ್ ಸ್ಪೀಡ್ ಸಾಮರ್ಥ್ಯದ ವೈಫೈ ನೆಟ್ವರ್ಕ್ ಸೌಲಭ್ಯ ಕಲ್ಪಿಸುತ್ತಿದೆ ಎಂದರು.
ಉಚಿತ ವೈಫೈ ನೆಟ್ವರ್ಕ್ ಸೌಲಭ್ಯದಿಂದ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಒಬ್ಬರಿಗೆ ಪ್ರತಿದಿನ ಮೂರು ಗಂಟೆ ಮಾತ್ರ ಉಚಿತ ವೈಫೈ ನೆಟ್ವರ್ಕ್ ಸೇವೆ ಸಿಗುತ್ತದೆ. ಮೂರು ಗಂಟೆ ಬಳಿಕ ವೈಫೈ ನೆಟ್ವರ್ಕ್ ಸಂಪರ್ಕ ಸ್ವಯಂ ಕಡಿತಗೊಳ್ಳುವಂತೆ (ಡಿಸ್ಕನೆಕ್ಟ್) ಮಾಡಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.