ಬಾಗಲಕೋಟೆ ಜಿ.ಪಂ: ಹಂಗಾಮಿ ಅಧ್ಯಕ್ಷರಾಗಿ ಕೃಷ್ಣ ಓಗೆಣ್ಣವರ

7

ಬಾಗಲಕೋಟೆ ಜಿ.ಪಂ: ಹಂಗಾಮಿ ಅಧ್ಯಕ್ಷರಾಗಿ ಕೃಷ್ಣ ಓಗೆಣ್ಣವರ

Published:
Updated:
ಬಾಗಲಕೋಟೆ ಜಿ.ಪಂ: ಹಂಗಾಮಿ ಅಧ್ಯಕ್ಷರಾಗಿ ಕೃಷ್ಣ ಓಗೆಣ್ಣವರ

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಪ್ರಥಮ 20 ತಿಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಮಂಗಳವಾರಕ್ಕೆ ಮುಕ್ತಾಯವಾಗಿದೆ.ಈ ನಡುವೆ ಹಂಗಾಮಿ ಅಧ್ಯಕ್ಷರನ್ನಾಗಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕೃಷ್ಣ ಓಗೆಣ್ಣವರ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜಿ.ಪಾಟೀಲ, ಎರಡನೇ ಅವಧಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂಬಂಧ ಈಗಾಗಲೇ ರಾಜ್ಯ ಸರ್ಕಾರ ಮೀಸಲು ಪ್ರಕಟಿಸಿದ್ದು, ಇದೇ 16 ಅಥವಾ 19ರಂದು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.ಗೊಂದಲದ ಗೂಡು: ಪ್ರಥಮ 20 ತಿಂಗಳ ಅಧಿಕಾರವಧಿಯಲ್ಲಿ ಅಧ್ಯಕ್ಷೆಯಾಗಿ ಕವಿತಾ ದಡ್ಡೇನವರ, ವೀಣಾ ಪ್ರಕಾಶ ಎಮ್ಮಿ ಹಾಗೂ ಉಪಾಧ್ಯಕ್ಷರಾಗಿ ಹೂವಪ್ಪ ರಾಠೋಡ, ದುಂಡಪ್ಪ ಲಿಂಗಪ್ಪ ರೆಡ್ಡಿ ಆಡಳಿತ ನಡೆಸಿದರು.ಈ ನಡುವೆ ಆಡಳಿತ ಪಕ್ಷ ಬಿಜೆಪಿ ಒಳಗೆ ಅಧ್ಯಕ್ಷೆ ಸ್ಥಾನಕ್ಕೆ ಸಂಬಂಧಿಸಿದಂತೆ ಉಂಟಾದ ವಿವಾದ ಹೈಕೋರ್ಟ್ ಸಂಚಾರಿ ಪೀಠದ ಮೆಟ್ಟಿಲೇರಿ ಬಂದತು. ಕೊನೆಯಲ್ಲಿ ಅಧ್ಯಕ್ಷೆ ಕವಿತಾ ಅವರನ್ನು ಅವಿಶ್ವಾಸ ಗೊತ್ತುವಳಿ ಮೂಲಕ ಕೆಳಗಿಳಿಸಲಾಯಿತು. ಈ ಸಂದರ್ಭದಲ್ಲಿ ತೆರವಾದ ಅಧ್ಯಕ್ಷ ಸ್ಥಾನದಲ್ಲಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಮೂರು ತಿಂಗಳ ಕಾಲ ಕಾರ್ಯ ನಿರ್ವಹಿಸಿದರು.ಉಪಾಧ್ಯಕ್ಷ ಸ್ಥಾನವೂ ವಿವಾದದಿಂದ ದೂರ ಉಳಿಯಲಿಲ್ಲ. ಬಿಜೆಪಿ ಒಳಗಿನ ಆಂತರಿಕ ಕಚ್ಚಾಟದ ಲಾಭ ಪಡೆದ ಕಾಂಗ್ರೆಸ್ ಪ್ರಥಮ ಅವಧಿಯ ಕೊನೆಯ ಎರಡು ತಿಂಗಳ ಉಪಾಧ್ಯಕ್ಷ ಸ್ಥಾನದ ರುಚಿ ಸವಿಯಿತು.

ಜಿ.ಪಂ. ಪ್ರಥಮ ಅವಧಿ ರಾಜಕೀಯ ಮೇಲಾಟಕ್ಕೆ ವೇದಿಕೆಯಾಯಿತೇ ಹೊರತು, ಅಭಿವೃದ್ಧಿ ಕಾರ್ಯಗಳು ನಿರ್ಲಕ್ಷ್ಯಕ್ಕೆ ಒಳಗಾದವು.2ನೇ ಅವಧಿಗೆ ಮೀಸಲು ಪ್ರಕಟ: ಎರಡನೇ ಅವಧಿಗೆ ಅಧ್ಯಕ್ಷೆ ಸ್ಥಾನಕ್ಕೆ ಎಸ್.ಟಿ. ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ `ಅ~ ವರ್ಗಕ್ಕೆ ಮೀಸಲುಗೊಳಿಸಿ ಈಗಾಗಲೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಒಟ್ಟು 32 ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡಿರುವ ಜಿ.ಪಂ.ನಲ್ಲಿ 18 ಬಿಜೆಪಿ ಸದಸ್ಯರು ಮತ್ತು 14 ಕಾಂಗ್ರೆಸ್ ಸದಸ್ಯರು ಇದ್ದಾರೆ. ಇವರಲ್ಲಿ ಏಕೈಕ ಎಸ್.ಟಿ.ಮಹಿಳೆ ಮುಧೋಳ ತಾಲ್ಲೂಕಿನ ಮಂಟೂರ ಜಿ.ಪಂ. ಕ್ಷೇತ್ರದ ಸದಸ್ಯೆ ಶಾಂತವ್ವ ಭೂಷಣ್ಣವರ ಆಗಿರುವುದರಿಂದ ಅಧ್ಯಕ್ಷೆ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲದಂತಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ `ಅ~ ವರ್ಗಕ್ಕೆ ಮೀಸಲಿರುವುದರಿಂದ 10 ಸದಸ್ಯರು ಆಕಾಂಕ್ಷಿಗಳಿದ್ದಾರೆ.ಹಿಂದುಳಿದ `ಅ~ ವರ್ಗಕ್ಕೆ ಸೇರಿದ ಬಿಜೆಪಿಯ 3 ಮತ್ತು ಕಾಂಗ್ರೆಸ್‌ನ 7 ಸದಸ್ಯರು ಇರುವುದರಿಂದ ಯಾರು ಉಪಾಧ್ಯಕ್ಷರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿಜೆಪಿಯ ಕೃಷ್ಣ ಓಗೆಣ್ಣವರ, ಸರೋಜಿನ ಅಂಗಡಿ, ಶೋಭಾ ತೋಟಿಗೇರ ಅವರ ನಡುವೆ ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿರುವುದಾಗಿ ತಿಳಿದುಬಂದಿದೆ.ಇನ್ನೂ ಕಾಂಗ್ರೆಸ್‌ನ ಸದಸ್ಯರಾದ ಬಸವಂತಪ್ಪ ಮೇಟಿ, ಡಾ.ಎಂ.ಜಿ.ಕಿತ್ತಲಿ, ರೇಣುಕಾ ಶಾಂತಗೇರಿ, ಯಲ್ಲಕ್ಕ ದೊಡ್ಡಮನಿ, ತುಂಗವ್ವ ಮೊಕಾಸಿ, ಕಾಶವ್ವ ಹೊಸಟ್ಟಿ ಮತ್ತು ಅರ್ಜುನ ದಳವಾಯಿ ಅವರುಗಳು ಹಿಂದುಳಿದ `ಅ~ ವರ್ಗಕ್ಕೆ ಸೇರಿರುವುದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ವ್ಯೆಹ ರಚಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry