ಸೋಮವಾರ, ಜನವರಿ 20, 2020
26 °C

ಬಾಗಲಕೋಟೆ ಶಾಸಕರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಹಿನ್ನೀರಿನ ಸಂತ್ರಸ್ತರಿಗಾಗಿ ಮೀಸಲು ಇಟ್ಟ ಜಮೀನು ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇಲೆ ಬಾಗಲಕೋಟೆ ಶಾಸಕ ವೀರಣ್ಣ ಸಿ. ಚರಂತಿಮಠ ಅವರ ವಿರುದ್ಧ ಲೋಕಾಯುಕ್ತದಲ್ಲಿ ಮಂಗಳವಾರ ದೂರು ದಾಖಲು ಮಾಡಲಾಗಿದೆ.ಇವರ ವಿರುದ್ಧ ಅಲ್ಲಿಯ ನಿವಾಸಿ ಅಶೋಕ ವೆಂಕಟರಾವ್ ಲಿಂಬಾವಳಿ ಎನ್ನುವವರು ದೂರು ಸಲ್ಲಿಸಿದ್ದಾರೆ. ತಮ್ಮ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಎಲ್ಲ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರುವ ಮೂಲಕ ಇವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವುದು ಲಿಂಬಾವಳಿ ಅವರ ಆರೋಪ.`ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದ ಚರಂತಿಮಠ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು~ ಎಂದು ದೂರಿನಲ್ಲಿ ಕೋರಲಾಗಿದೆ.ಆರೋಪವೇನು?: ಐದು ಪುಟಗಳ ದೂರಿನಲ್ಲಿ ಇವರ ವಿರುದ್ಧ ಆರೋಪ ಮಾಡಲಾಗಿದೆ. `2007ರ ಫೆ. 15ರಂದು ಇವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಹಿನ್ನೀರಿನಿಂದ ಮುಳುಗಡೆ ಆಗಿರುವ ಜನರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಪ್ರಾಧಿಕಾರವನ್ನು ರಚಿಸಲಾಗಿತ್ತು.ಆಗ ಅಧ್ಯಕ್ಷರಾಗಿದ್ದ ಚರಂತಿಮಠ ಸುಮಾರು ರೂ 20 ಕೋಟಿ ಬೆಲೆಬಾಳುವ 7.39 ಎಕರೆ ಜಮೀನನ್ನು ತಮ್ಮ ಸಹೋದರ ಮಲ್ಲಿಕಾರ್ಜುನ ಅವರಿಗೆ ಕಾನೂನು ಉಲ್ಲಂಘಿಸಿ ಹಂಚಿಕೆ ಮಾಡಿದ್ದಾರೆ. ಹಳೆನಗರ ಮತ್ತು ನವನಗರ ಸಂಕರ್ಪದ ಕೂಡು ರಸ್ತೆ ನಿರ್ಮಾಣಕ್ಕೆ ಈ ಜಮೀನನ್ನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಗಿತ್ತು~ ಎಂದು ತಿಳಿಸಲಾಗಿದೆ.`ಇದೇ ಸಹೋದರನ ಒಡೆತನದಲ್ಲಿದ್ದ `ಚರಂತಿಮಠ ಎಣ್ಣೆ ತಯಾರಿಕಾ ಕೈಗಾರಿಕೆ~ಯನ್ನು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ ಸ್ಥಗಿತಗೊಳಿಸಿದೆ. ಆದರೆ ಅಸ್ತಿತ್ವದಲ್ಲಿ ಇಲ್ಲದ ಈ ಕೈಗಾರಿಕೆಯ ಹೆಸರು ಹೇಳಿಕೊಂಡು ಸುಮಾರು ಆರು ಎಕರೆ ಜಮೀನನ್ನು ಸಹೋದರನಿಗೆ ನೀಡುವ ಮೂಲಕ ಪುನಃ ಇವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.

 

`ಈ ಜಮೀನನ್ನು ಪಡೆದುಕೊಳ್ಳುವುದು ಮಾತ್ರವಲ್ಲದೇ ಹೋಟೆಲ್ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ಇದೇ ಸಹೋದರನಿಗೆ ಸುಮಾರು ಏಳು ಎಕರೆ ಜಮೀನನ್ನು ಅಕ್ರಮವಾಗಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಜಮೀನಿನ ನೀಲನಕ್ಷೆ ತಯಾರಿ ಆಗುತ್ತಿದೆ~ ಎಂದು ದೂರಲಾಗಿದೆ.

ಪ್ರತಿಕ್ರಿಯಿಸಿ (+)