ಬುಧವಾರ, ನವೆಂಬರ್ 20, 2019
20 °C

ಬಾಗಲೂರು ಬಳಿ ಮಹಿಳೆಯ ಅನುಮಾನಾಸ್ಪದ ಸಾವು

Published:
Updated:

ಬೆಂಗಳೂರು: ಬಾಗಲೂರು ಸಮೀಪದ ಕಣ್ಣೂರು ಗ್ರಾಮದ ನಿವಾಸಿ ಸೆಲ್ವಂ ಎಂಬುವರ ಪತ್ನಿ ಬಾಲಮ್ಮ (30) ಅವರು ಶನಿವಾರ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.ಅವರ ವಿವಾಹವಾಗಿ ಹತ್ತು ವರ್ಷವಾಗಿತ್ತು ಮತ್ತು ಅವರಿಗೆ ಸುಧಾ ಎಂಬ ಎಂಟು ವರ್ಷದ ಮಗಳಿದ್ದಾಳೆ. ತಮಿಳುನಾಡು ಮೂಲದ ಸೆಲ್ವಂ, ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಬಾಲಮ್ಮ, ಮನೆಯ ಸಮೀಪದ ಖಾಸಗಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು.ಸೆಲ್ವಂ, ಶನಿವಾರ ಸಂಜೆ ತಮಿಳುನಾಡಿಗೆ ಹೋಗಿದ್ದರು. ಇದರಿಂದಾಗಿ ಬಾಲಮ್ಮ ಮತ್ತು ಸುಧಾ ಮಾತ್ರ ಮನೆಯಲ್ದ್ದ್‌ದರು. ರಾತ್ರಿ ಹತ್ತು ಗಂಟೆ ಸುಮಾರಿಗೆ ಅವರ ಮನೆಯ ಒಳ ಭಾಗದಿಂದ ಹೊಗೆ ಬರುತ್ತಿದ್ದನ್ನು ನೋಡಿದ ನೆರೆಹೊರೆಯವರು ಠಾಣೆಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಬಾಲಮ್ಮ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿ ಮೃತಪಟ್ಟಿರುವುದು ಗೊತ್ತಾಯಿತು ಎಂದು ಬಾಗಲೂರು ಪೊಲೀಸರು ಹೇಳಿದ್ದಾರೆ.ಅವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಘಟನೆ ವೇಳೆ ಸುಧಾ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಳು. ಇದರಿಂದಾಗಿ ಆಕೆಗೆ ಘಟನೆಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.`ಅಳಿಯ ಮತ್ತು ಮಗಳು ಅನ್ಯೋನ್ಯವಾಗಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಅವಳನ್ನು ಕೊಲೆ ಮಾಡಲಾಗಿದೆ ಎಂದು ಬಾಲಮ್ಮ ಅವರ ತಂದೆ ರಾಜೇಂದ್ರ ಅವರು ದೂರು ಕೊಟ್ಟಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ' ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.ಸೀರೆ ಜಪ್ತಿ: ಸಿಟಿ ಮಾರುಕಟ್ಟೆ ಬಳಿಯ ವಾಲ್ಮೀಕಿ ಆಂಜನೇಯ ದೇವಸ್ಥಾನದ ಮೇಲೆ ಭಾನುವಾರ ಬೆಳಿಗ್ಗೆ ದಾಳಿ ನಡೆಸಿದ ಸೆಂಟ್ರಲ್ ಠಾಣೆ ಪೊಲೀಸರು, ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಸುಮಾರು ರೂ30 ಸಾವಿರ ಮೌಲ್ಯದ ಸೀರೆ ಹಾಗೂ ಪಂಚೆಗಳನ್ನು ಜಪ್ತಿ ಮಾಡಿದ್ದಾರೆ.ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಮತದಾರರಿಗೆ ಹಂಚಲು ವಾಲ್ಮೀಕಿ ಆಂಜನೇಯ ದೇವಸ್ಥಾನದ ಕೊಠಡಿಯಲ್ಲಿ ಸೀರೆ ಮತ್ತು ಪಂಚೆಗಳನ್ನು ಸಂಗ್ರಹಿಸಿಟ್ಟಿದ್ದಾರೆ ಎಂದು ಠಾಣೆಗೆ ಮಾಹಿತಿ ಬಂತು. ಈ ಮಾಹಿತಿ ಆಧರಿಸಿ ದೇವಸ್ಥಾನಕ್ಕೆ ಹೋಗಿ ಪರಿಶೀಲಿಸಿದಾಗ 350 ಸೀರೆ ಮತ್ತು 150 ಪಂಚೆಗಳು ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೇವಸ್ಥಾನದಲ್ಲಿ ಸೀರೆ ಮತ್ತು ಪಂಚೆಗಳನ್ನು ಸಂಗ್ರಹಿಸಿಟ್ಟಿದ್ದವರು ಯಾರು ಎಂಬುದು ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)