ಭಾನುವಾರ, ಡಿಸೆಂಬರ್ 8, 2019
25 °C
ಜಿಲ್ಲೆಯ ಅಭಿವೃದ್ಧಿಗೆ ರಮೇಶ ಹಲಗಲಿ ‘ಮಾಸ್ಟರ್‌ ಪ್ಲಾನ್‌’

ಬಾಗಲ ‘ಕೋಟೆ’ ಕಟ್ಟಲು ಮುಂದಾದ ಸೈನಿಕ

ಪ್ರಜಾವಾಣಿ ವಾರ್ತೆ/ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲ ‘ಕೋಟೆ’ ಕಟ್ಟಲು ಮುಂದಾದ ಸೈನಿಕ

ಬಾಗಲಕೋಟೆ: ಉತ್ತರ ಕರ್ನಾಟಕದಲ್ಲೇ ಸಮೃದ್ಧ ಜಿಲ್ಲೆ ಎನಿಸಿಕೊಂಡಿರುವ ಬಾಗಲಕೋಟೆ ಜಿಲ್ಲೆಯು ಕೃಷಿ, ಕೈಗಾರಿಕೆ, ವಾಣಿಜ್ಯ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ದಾರಿಯಲ್ಲಿ ವೇಗವಾಗಿ ಮುನ್ನಡೆ­ಯುತ್ತಿದೆ.ಅಭಿವೃದ್ಧಿಯಲ್ಲಿ ಬಾಗಲಕೋಟೆಯನ್ನು ರಾಷ್ಟ್ರದಲ್ಲೇ ‘ಮಾದರಿ ಜಿಲ್ಲೆ’ಯನ್ನಾಗಿ ರೂಪಿಸುವ ಕನಸು ಕಂಡಿರುವ  ಈ ನೆಲದವರೇ ಆದ(ಮುಧೋಳ ತಾಲ್ಲೂಕು ಹಲಗಲಿ) ಭಾರತೀಯ ಸೇನೆಯ ನಿವೃತ್ತ ಉಪಮಹಾ ದಂಡನಾಯಕ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಅವರು ತಾವು ಹುಟ್ಟಿಬೆಳೆದ ನೆಲದ ಋಣ ತೀರಿಸಲು ‘ಮಾಸ್ಟರ್‌ ಪ್ಲಾನ್‌’ ರೂಪಿಸಿದ್ದಾರೆ.‘ಕೆಟಲಿಟಿಕ್‌’ ಎಂಬ ತಮ್ಮ ಸಂಸ್ಥೆಯ ಮೂಲಕ ‘ಬಾಗಲಕೋಟೆ ಜಿಲ್ಲಾ ಅಭಿವೃದ್ಧಿ ಯೋಜನೆ –2020’ ಎಂಬ ಮಹಾತ್ವಾಕಾಂಕ್ಷೆಯ ಯೋಜನೆಯೊಂದನ್ನು ರೂಪಿಸಿದ್ದು, ಈ ಯೋಜನೆಯ ರೂಪುರೇಷೆಯ ಕುರಿತು ಈಗಾಗಲೇ ಹಲಗಲಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಪಾಟೀಲ ಸೇರಿದಂತೆ ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ.ಸಿಇಒ, ಮತ್ತಿತರರ ಅಧಿಕಾರಿ­ಗಳೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದಾರೆ.ಜಿಲ್ಲೆಯ ಕೃಷಿ, ಕೈಗಾರಿಕೆ, ತೋಟ­ಗಾರಿಕೆ, ಆರೋಗ್ಯ, ಪ್ರವಾಸೋದ್ಯಮ, ಶೈಕ್ಷಣಿಕ ಮತ್ತಿತರ ಕ್ಷೇತ್ರದಲ್ಲಿ ವಿದೇಶಿ ಬಂಡವಾಳವನ್ನು ಹೂಡಲು ಅನುಕೂಲ ಮಾಡಿಕೊಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶ ಹೊಂದಲಾಗಿದೆ.ರಮೇಶ ಹಲಗಲಿ ಅವರ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಬಹುವಾಗಿ ಮೆಚ್ಚಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌.­ಪಾಟೀಲ ಅವರು ಯೋಜನೆಯ ಅನುಷ್ಠಾನಕ್ಕೆ ಕಾರ್ಯೋನು್ಮಖ­ರಾಗಿದ್ದಾರೆ.ಯೋಜನೆಯ ಅನುಷ್ಠಾನ ಕುರಿತು ಸಚಿವ ಎಸ್‌.ಆರ್‌.ಪಾಟೀಲ ಅಧ್ಯಕ್ಷತೆ­ಯಲ್ಲಿ ಇದೇ 13ರಂದು ಬಾಗಲಕೋಟೆ ನವನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ವಿಶೇಷ  ಕಾರ್ಯಾಗಾರ ನಡೆಯಲಿದೆ.‘ಬಾಗಲಕೋಟೆ ಜಿಲ್ಲಾ ಅಭಿವೃದ್ಧಿ ಯೋಜನೆ –2020’ ರೂಪುರೇಷೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ‘ಜಿಲ್ಲೆಯ ಕೃಷಿ, ಕೈಗಾರಿಕಾ, ಪ್ರವಾಸೋದ್ಯಮ, ಸಾಹಸ ಮತ್ತು ಸಾಂಸ್ಕೃತಿಕ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಮತ್ತು ನಗರ ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿದೇಶಿ ಖಾಸಗಿ ಸಂಸ್ಥೆಗಳಿಂದ ಬಂಡವಾಳವನ್ನು ಆಕರ್ಷಿಸುವ ಮತ್ತು ಬಂಡವಾಳ ಹೂಡಿಕೆ ಮಾಡುವ ಉದ್ದೇಶವನ್ನು ‘ಕೆಟಲಿಟಿಕ್‌’ ಸಂಸ್ಥೆ ಹೊಂದಿದೆ’ ಎಂದರು.‘ಇಸ್ರೇಲ್‌, ಆಸ್ಟ್ರೇಲಿಯಾ, ಯುಕೆ, ಫ್ರಾನ್ಸ್‌, ಶ್ರೀಲಂಕಾ, ಥೈಲ್ಯಾಂಡ್‌ ಮತ್ತು ಇಂಡೋನೇಷ್ಯಾ ದೇಶಗಳ ಪ್ರಮುಖ ಕಂಪೆನಿಗಳು ಹಾಗೂ ದೇಶದ ಇನ್ಫೋಸಿಸ್‌, ವಿಪ್ರೋ, ಮೈಕ್ರೋಸಾಫ್ಟ್‌ ಮತ್ತು ನಾಸ್ಕಾಂ ಕಂಪೆನಿಯ ಪ್ರತಿನಿಧಿ­ಗಳು ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳ­ಲಿದ್ದಾರೆ’ ಎಂದರು.‘ರಾಜ್ಯ ಸರ್ಕಾರದ ಪ್ರವಾಸೋದ್ಯಮ, ತೋಟಗಾರಿಕೆ ಮತ್ತು ಗ್ರಾಮೀಣಾ­ಭಿವೃದ್ಧಿ ಇಲಾಖೆಯ ಕಾರ್ಯದರ್ಶಿ­ಗಳಿಗೆ ಕಾರ್ಯಾ­ಗಾರದಲ್ಲಿ ಪಾಲ್ಗೊಳ್ಳು­ವಂತೆ ವಿಶೇಷ ಆಹ್ವಾನ ನೀಡಲಾಗಿದೆ. ಅಲ್ಲದೇ, ಜಿಲ್ಲೆಯ   ಹಾಲಿ, ಮಾಜಿ ಜನಪ್ರತಿನಿಧಿಗಳು, ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ವಿಶ್ವವಿದ್ಯಾಲಯದ ಕುಲಪತಿ, ಉಪನ್ಯಾಸಕರು, ತಜ್ಞರು, ಚಿಂತಕರು, ರೈತ ಮುಖಂಡರು, ಕೈಗಾರಿಕೋದ್ಯಮಿ­ಗಳಿಗೂ ಆಹ್ವಾನ ನೀಡಲಾಗಿದೆ’ ಎಂದು ಹೇಳಿದರು.ಏನಿದು ಕೆಟಲಿಟಿಕ್‌?: ಭಾರತೀಯ ಸೇನೆಯ ನಿವೃತ್ತ ಉಪಮಹಾ ದಂಡನಾಯಕ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ, ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರರಾದ ಡಾ.ವಿ.ಕೆ. ಸರಸ್ವತ್, ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಅಡಿ್ಮರಲ್‌ ಅರುಣ್‌ ಪ್ರಕಾಶ್‌, ನಿವೃತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಲತಾ ರೆಡ್ಡಿ ಮತ್ತಿತರ ಚಿಂತಕರನ್ನು ಒಳಗೊಂಡ ಬೆಂಗಳೂರು ಮೂಲದ ‘ಕೆಟಲಿಟಿಕ್‌’ ಸಂಸ್ಥೆಯು ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಪ್ರತಿಕ್ರಿಯಿಸಿ (+)