ಬಾಗಿಲುಹಳ್ಳ ಸೇತುವೆ ಕಾಮಗಾರಿ ಅಪೂರ್ಣ

7

ಬಾಗಿಲುಹಳ್ಳ ಸೇತುವೆ ಕಾಮಗಾರಿ ಅಪೂರ್ಣ

Published:
Updated:

ತರೀಕೆರೆ: ತಾಲ್ಲೂಕಿನ ಮಾರಿದಿಬ್ಬ ಗ್ರಾಮದಿಂದ ಮಂಡರಹಳ್ಳಿ ಮುಂತಾದ ಗ್ರಾಮ ಸಂಪರ್ಕಿಸುವ ಸೇತುವೆ ಕಾಮಗಾರಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಸೇತುವೆ ನಿರ್ಮಿಸಲು ಮುಂದಾಗುವಂತೆ ಸ್ಥಳೀಯ ಜನಪ್ರತಿನಿಧಿಗಳು ಶನಿವಾರ ಶಾಸಕ ಡಿ.ಎಸ್.ಸುರೇಶ್ ಅವರನ್ನು ಸ್ಥಳಕ್ಕೆ ಆಹ್ವಾನಿಸಿ ಪರಿಸ್ಥಿತಿಯನ್ನು ವಿವರಿಸಿದರು.ಮಾರಿದಿಬ್ಬ, ಲಕ್ಕವಳ್ಳಿ, ಹಳೆ ಲಕ್ಕವಳ್ಳಿ ಗ್ರಾಮದ ರೈತರು ಕಂಚಿನ ಬಾಗಿಲು ಹಳ್ಳದ ಆಚೆ ಕೃಷಿಭೂಮಿಯನ್ನು ಹೊಂದಿದ್ದಾರೆ ರೈತರು ತಮ್ಮ ಜಮೀನುಗಳಿಗೆ ಹೋಗಲು ಸುಮಾರು ಏಳು ಕಿ.ಮೀ. ದೂರದ ಹಾದಿಯನ್ನು ಅನಗತ್ಯವಾಗಿ ಕ್ರಮಿಸಬೇಕಿದೆ ಎಂದು ವಿವರಿಸಿದ ತಾಲ್ಲೂಕು ಪಂಚಾಯಿತಿ ಸದಸ್ಯ ಅನ್ಬು, ಬಹುತೇಕ ಕೂಲಿ ಕಾರ್ಮಿಕರು ವಾಸವಿರುವ ಈ ಪ್ರದೇಶದಲ್ಲಿ ಪ್ರಸ್ತುತ ಸೇತುವೆ ನಿರ್ಮಾಣಗೊಂಡಲ್ಲಿ ಮಂಡರಹಳ್ಳಿ, ಇರಗಾಪುರ, ಅರುವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಮೀಪ ಸಂಪರ್ಕ ರಸ್ತೆಯಾಗಲಿದ್ದು, ಕೃಷಿ ಚಟುವಟಿಕೆ ಹೆಚ್ಚಾಗಲಿದೆ ಎಂದು ವಿವರಿಸಿದರು.ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಡಿ.ಎಸ್.ಸುರೇಶ್ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಕುಮಾರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದೀಪಾ ಉಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್‌ರೆಹಮಾನ್, ಗ್ರಾಮಸ್ಥರಾದ ರಮೇಶ್, ಸಂಜಯ್‌ಕುಮಾರ್, ಸತ್ಯನಾರಾಯಣ್ ಮತ್ತು ಎಪಿಎಂಸಿ ಸದಸ್ಯ ಶಿವಕುಮಾರ್ ಮುಂತಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry