ಭಾನುವಾರ, ಫೆಬ್ರವರಿ 28, 2021
23 °C

ಬಾಗಿಲು ತೆರೆಯದ ಆಸ್ಪತ್ರೆ: ವೈದ್ಯರಿಗೆ ಹುಡುಕಾಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಿಲು ತೆರೆಯದ ಆಸ್ಪತ್ರೆ: ವೈದ್ಯರಿಗೆ ಹುಡುಕಾಟ!

ಚಿತ್ರದುರ್ಗ: ಇಲ್ಲಿ ಎಲ್ಲವೂ ಇದ್ದು ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯ ಮನೋಭಾವಕ್ಕೆ ಚಿತ್ರದುರ್ಗ ತಾಲ್ಲೂಕಿನ ಜಂಪಣ್ಣ ನಾಯಕನಕೋಟೆ (ಜೆ.ಎನ್. ಕೋಟೆ) ಗ್ರಾಮ ಸಾಕ್ಷಿಯಾಗಿದೆ.ಗ್ರಾಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕುಟುಂಬ ಯೋಜನೆ ಉಪ ಕೇಂದ್ರವಿದೆ. ಆದರೆ, ಇಲ್ಲಿ ಕಟ್ಟಡಗಳು ಮಾತ್ರ ನೆಲೆಸಿವೆಯೇ ಹೊರತು ಬಾಗಿಲುಗಳು ತೆರೆದ ಉದಾಹರಣೆಯೇ ಅಪರೂಪ.ಜೆ.ಎನ್. ಕೋಟೆ ಗ್ರಾಮದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಕೇವಲ ನಾಮಕಾವಾಸ್ತೆ ಕೇಂದ್ರವಾಗಿ ಉಳಿದಿದೆ. ಈ ಚಿಕಿತ್ಸಾಲಯಕ್ಕೆ ನೇಮಕವಾಗಿರುವ ವೈದ್ಯರಾದ ಡಾ.ಹನುಮಂತರೆಡ್ಡಿ ಇತ್ತ ಸುಳಿಯುವುದೇ ಇಲ್ಲ. ಬೆಂಗಳೂರಿನಲ್ಲಿ ಕುಳಿತು ಸಂಬಳ ಪಡೆಯುತ್ತಿದ್ದಾರೆಯೇ ಹೊರತು ಗ್ರಾಮಕ್ಕೆ ಆಗಮಿಸುವುದೇ ಇಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ವಾರದಲ್ಲಿ ಒಂದೆರೆಡು ದಿನ ಮಾತ್ರ ಜವಾನ ಆಗಮಿಸಿ ಬಾಗಿಲು ತೆರೆಯುತ್ತಾನೆ. ಉಳಿದ ದಿನಗಳಲ್ಲಿ ಚಿಕಿತ್ಸಾಲಯವನ್ನು ಬಂದ್ ಮಾಡಲಾಗುತ್ತಿದೆ. ಚಿಕಿತ್ಸಾಲಯದಿಂದ ಯಾವುದೇ ರೀತಿ ಸೌಲಭ್ಯ ದೊರೆಯದ ಕಾರಣ ನಾವು ದೊಡ್ಡಸಿದ್ದವ್ವನಹಳ್ಳಿಗೆ ಅಥವಾ ಚಿತ್ರದುರ್ಗಕ್ಕೆ ಚಿಕಿತ್ಸೆ ಪಡೆಯಲು ಹೋಗಬೇಕಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಸುಮಾರು 1,000 ಮನೆಗಳು ಹಾಗೂ 2,500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಉತ್ತಮ ವೈದ್ಯರನ್ನು ನಿಯೋಜಿಸುವಂತೆ ಶಾಸಕರಿಗೆ, ಜಿ.ಪಂ. ಸದಸ್ಯರಿಗೆ, ತಾ.ಪಂ. ಸದಸ್ಯರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂದೆ ಜನಸ್ಪಂದನ ಸಭೆಯಲ್ಲೂ ಈ ವಿಷಯವನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ಆದರೆ, ಶಾಸಕರು ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿದರು.ಗ್ರಾಮದಲ್ಲಿನ ಕುಟುಂಬ ಯೋಜನೆ ಉಪ ಕೇಂದ್ರದ ಬಾಗಿಲು ಸಹ ಮುಚ್ಚಿದೆ. ಕಳೆದ ಹಲವು ತಿಂಗಳಿಂದ ಇಲ್ಲಿನ ಎಎನ್‌ಎಂ ಮಮತಾ ಅವರನ್ನು ತರಬೇತಿಗೆ ಹೋಗಿದ್ದಾರೆ. ಹೀಗಾಗಿ, ಈ ಉಪಕೇಂದ್ರದ ಬಾಗಿಲು ಮುಚ್ಚಿದೆ. ಆದರೆ, ಪರ್ಯಾಯ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಲ್ಲ.ಗ್ರಾಮ ಪಂಚಾಯ್ತಿ ಕಟ್ಟಡದ ಬಳಿಯೇ ಇರುವ ಹೆಣ್ಣು ಮಕ್ಕಳ ಕಲಿಕಾ ಕೇಂದ್ರವಂತೂ ನಿಷ್ಪ್ರಯೋಜಕವಾಗಿದೆ. ಈ ಹಿಂದೆ ಜಿಲ್ಲಾ ಪಂಚಾಯ್ತಿ ವತಿಯಿಂದ ಸಮವಿಕಾಸ ಯೋಜನೆ ಅಡಿ ಈ ಕೇಂದ್ರವನ್ನು ನಿರ್ಮಿಸಲಾಗಿತ್ತು. ಆದರೆ, ಈ ಕಟ್ಟಡ ನಿರ್ಮಿಸಿರುವ ಉದ್ದೇಶ ಮಾತ್ರ ಯಾರಿಗೂ ಗೊತ್ತಿಲ್ಲ. ಸರ್ಕಾರದ ಯೋಜನೆಗಳು ಹೇಗೆ ದುರುಪಯೋಗವಾಗುತ್ತವೆ ಎನ್ನುವುದಕ್ಕೆ ಈ ಕಟ್ಟಡ ಸಾಕ್ಷಿಯಾಗಿದೆ. ಈ  ಕಲಿಕಾ ಕೇಂದ್ರದ ಬಾಗಿಲು ತೆರೆದಿರುವುದನ್ನು ನಾವು ನೋಡಿಯೇ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.ಇನ್ನೂ ಪಶುಚಿಕಿತ್ಸಾ ಕೇಂದ್ರವು ಸಹ ತಾತ್ಕಾಲಿಕವಾಗಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿದೆ. ಇದೀಗ ಹೊಸದಾಗಿ ಪಶುಚಿಕಿತ್ಸಾ ಕೇಂದ್ರದ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿದೆ.ಒಟ್ಟಿನಲ್ಲಿ ಎಲ್ಲವೂ ಅವ್ಯವಸ್ಥೆಯ ಆಗರವಾಗಿರುವಜೆ.ಎನ್. ಕೋಟೆ ಗ್ರಾಮದಲ್ಲಿ ಕಾಯಕಲ್ಪ ನೀಡಬೇಕು ಎನ್ನುವುದು ಗ್ರಾಮಸ್ಥರ ಆಶಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.