ಶುಕ್ರವಾರ, ನವೆಂಬರ್ 15, 2019
22 °C

ಬಾಗೇಗೌಡ: ಬಸವನಗುಡಿ ಜೆಡಿಎಸ್ ಅಭ್ಯರ್ಥಿ?

Published:
Updated:

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಬಾಗೇಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡಲು ತೀರ್ಮಾನಿಸಿರುವುದಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಬುಧವಾರ ಪರೋಕ್ಷ ಸುಳಿವು ನೀಡಿದರು.ಈ ಕ್ಷೇತ್ರದ ಜೆಡಿಎಸ್ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, `ಬಸವನಗುಡಿ ಕ್ಷೇತ್ರಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲಾಗಿದೆ. ಇನ್ನು ಮುಂದೆ ಈ ಕ್ಷೇತ್ರದಲ್ಲಿ ಪಕ್ಷದ ಎಲ್ಲಾ ಕೆಲಸ ಕಾರ್ಯಗಳು ಬಾಗೇಗೌಡ ಅವರ ನೇತೃತ್ವದಲ್ಲೇ ನಡೆಯುತ್ತವೆ' ಎಂದು ಪ್ರಕಟಿಸಿದರು.`ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎ. ಶರವಣ ಹಾಗೂ ಅವರ ಸಮಾಜದ ಬೆಂಬಲ ಪಕ್ಷಕ್ಕೆ ಅಗತ್ಯವಿದೆ.

ಪಕ್ಷದಲ್ಲಿ ಶರವಣ ಅವರಿಗೆ ವಿಧಾನ ಪರಿಷತ್ ಅಥವಾ ಬೇರೆ ಕಡೆ ಉನ್ನತ ಸ್ಥಾನಮಾನ ನೀಡುವ ಜವಾಬ್ದಾರಿ ನನ್ನ ಮೇಲಿದೆ' ಎಂದು ಇದೇ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಬಯಸಿರುವ ಶರವಣ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು.ಜೆಡಿಎಸ್ ಸಂಸದೀಯ ಮಂಡಳಿ ಅಧ್ಯಕ್ಷ ಬಸವರಾಜ ಹೊರಟ್ಟಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಅಭ್ಯರ್ಥಿಗಳ ಪಟ್ಟಿ ತಯಾರಿಸಿದ್ದಾರೆ. ಇನ್ನು ಎರಡು ಅಥವಾ ಮೂರು ದಿನಗಳಲ್ಲಿ  ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದರು.ಜೆಡಿಎಸ್ ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಲಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ, ಶರವಣ, ಪಕ್ಷದ ಬೃಹತ್ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಂ.ಎಸ್.ನಾರಾಯಣ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)