ಬಾಗೇಪಲ್ಲಿ ಮುಖ್ಯರಸ್ತೆ ಸಂಚಾರ ನರಕ ಸದೃಶ

7

ಬಾಗೇಪಲ್ಲಿ ಮುಖ್ಯರಸ್ತೆ ಸಂಚಾರ ನರಕ ಸದೃಶ

Published:
Updated:
ಬಾಗೇಪಲ್ಲಿ ಮುಖ್ಯರಸ್ತೆ ಸಂಚಾರ ನರಕ ಸದೃಶ

ಬಾಗೇಪಲ್ಲಿ: ಪಟ್ಟಣದ ಮುಖ್ಯ ರಸ್ತೆಗಳಲ್ಲೆಗ ಕೆಸರು, ಕೊಚ್ಚೆ ಕಾಲಿಗೆ ಅಂಟದಂತೆ ನಾಜೂಕಾಗಿ ಓಡಾಡುವ ಸಾರ್ವಜನಿಕರು. ತಲೆ ಮೇಲಿದ್ದ ಮರದ ನೆರಳೂ ಇಲ್ಲದೆ ಬಿರು ಬಿಸಿಲಲ್ಲೆ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಕಿರಿಕಿರಿ ಮಾಡುವ ಸಾರಿಗೆ ಸಂಸ್ಥೆ ಬಸ್ ಚಾಲಕರು. ಇನ್ನು ಆಟೊದವರ ಕಿರಿಕಿರಿ... ಹೇಳತೀರದು.ರಸ್ತೆ ಇಕ್ಕೆಲಗಳಲ್ಲಿ ಚರಂಡಿ ಕಾಮಗಾರಿಗಾಗಿ ಬೆಳೆದಿದ್ದ ಮರಗಳನ್ನು ಕಡಿದು ಹಾಕಲಾಗಿದೆ. ಇದರ ನೆರಳಲ್ಲೆ ವ್ಯಾಪಾರ ಮಾಡುತ್ತಿದ್ದವರ ಪಾಡಂತೂ ಹೇಳತೀರದು. ಇನ್ನೂ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸುವ, ಇಳಿಸುವ ಸಾರಿಗೆ ಸಂಸ್ಥೆ ಬಸ್ ಸಿಬ್ಬಂದಿ, ಆಟೊದವರನ್ನು ಪ್ರಶ್ನಿಸುವರು ಯಾರು ಎಂಬ ಅಳಲು ಜನಸಾಮಾನ್ಯರದ್ದು.

ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ತಮ್ಮ ಕೆಲಸಗಳಿಗೆ ತೆರಳುವವರಿಗೆ ಸಮಸ್ಯೆ ಬಗ್ಗೆ ಕಿಂಚಿತ್ ಕಾಳಜಿಯಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಅದಾಗಲೇ ನಿಲ್ಲಿಸಿರುವ ವಾಹನಗಳನ್ನು ತೋರಿಸಿ `ಇವರನ್ನು ಕೇಳುವವರು ಯಾರು?~ ಎಂಬಂತೆ ನೋಡುತ್ತಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿ ಸಂಚಾರ ಸಮಸ್ಯೆ ತೀವ್ರವಾಗಿದೆ. ರಸ್ತೆಯಲ್ಲಿನ ಮೊಳಕಾಲುದ್ದದ ಗುಂಡಿಗಳು, ದೂಳು, ಚರಂಡಿ ತುಂಬಿ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರು... ಒಟ್ಟಿನಲ್ಲಿ ಬಾಗೇಪಲ್ಲಿ ಪಟ್ಟಣ `ಗೊಂದಲಪುರ~ವಾಗಿ ಮಾರ್ಪಟ್ಟಿದೆ.

ತಾಲ್ಲೂಕು ಪಂಚಾಯಿತಿ ಕಚೇರಿ, ಸರ್ಕಾರಿ ಆಸ್ಪತ್ರೆ, ಪಶುವೈದ್ಯ ಇಲಾಖೆ, ತಾಲ್ಲೂಕು ಕಚೇರಿ, ಸಾರಿಗೆ ಹಾಗೂ ಖಾಸಗಿ ಬಸ್ ನಿಲ್ದಾಣ, ಬಾಲಕಿಯರ ಸರ್ಕಾರಿ ಕಾಲೇಜು, ಬಾಲಕರ ಕಾಲೇಜು, ಸರ್ಕಾರಿ ಶಾಲೆಗಳು ಹೀಗೆ ಎಲ್ಲವೂ ತುಂಬಿ ಹೋಗಿ ಮುಖ್ಯ ರಸ್ತೆಯಲ್ಲಿ ಜನದಟ್ಟಣೆ ಹೆಚ್ಚುತ್ತಿದೆ.

ಅದರಲ್ಲೂ ಮುಂಜಾನೆ-ಮುಸ್ಸಂಜೆ ಸಮಯದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಒಮ್ಮೆಲೇ ರಸ್ತೆಗೆ ಇಳಿಯುವುದರಿಂದ ಕಾಲಿಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ.

`ಅಭಿವೃದ್ಧಿ, ಪ್ರಗತಿ ಎಂಬ ಭರವಸೆ ಕೇಳಿ ಕಿವಿ ಕಿವುಡಾಗಿವೆ. ಎಲ್ಲಾದರೂ ಈ ಶಬ್ದ ಮತ್ತೆ ಕೇಳಿದರೆ ಬೇಸರವಾಗುತ್ತದೆ. ಕನಿಷ್ಠ ತಾಲ್ಲೂಕಿನ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ~ ಎಂದು ರಸ್ತೆಬದಿ ವ್ಯಾಪಾರಿ ನಂಜುಂಡಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಸಂಚಾರ ನಿಯಮ ಇಲ್ಲ: ಸಾರಿಗೆ, ಖಾಸಗಿ ಬಸ್, ಆಟೊದವರು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರಿದ್ದರೂ ಸಂಚಾರ ಸಮಸ್ಯೆಯಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಒಂದೆಡೆ ಫುಟ್‌ಪಾತ್ ಅತಿಕ್ರಮಣ, ಮತ್ತೊಂದೆಡೆ ವಾಹನ ದಟ್ಟಣೆ. ಸಂಚಾರ ನಿಯಮ ಪಾಲಿಸುವರೇ ಇಲ್ಲ ಎಂಬ ಆಕ್ರೋಶ ಸಾಮಾನ್ಯವಾಗಿದೆ. ಪ್ರತಿ ಮೂರು ದಿನಕ್ಕೊಮ್ಮೆ ಅಪಘಾತ ಮಾಮೂಲಿ ಎಂಬಂತಾಗಿದೆ.

ಚರಂಡಿ ಕಾಮಗಾರಿ: ಸದ್ಯ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಲ್ಲು, ಮರಳು, ಮಣ್ಣನ್ನು ರಸ್ತೆಗೆ ಹಾಕಲಾಗಿದೆ. ಚರಂಡಿ ನೀರು, ಹೂಳು, ಪ್ಲಾಸ್ಟಿಕ್, ಕಲ್ಲು, ತ್ಯಾಜ್ಯ ಎಲ್ಲ ರಸ್ತೆಯಲ್ಲಿ ಬಿದ್ದಿದೆ.

ಕಾಮಗಾರಿ ನೆಪದಲ್ಲಿ ರಸ್ತೆ ಅಕ್ಕಪಕ್ಕದ ಬೃಹದಾಕಾರ ಮರಗಳನ್ನು ಕೆಡವಿರುವುದರಿಂದ ರಸ್ತೆ ಬದಿ ವ್ಯಾಪಾರಸ್ಥರು ದೂಳು, ಗಾಳಿ, ಬಿಸಿಲಿನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ.

`ಪಟ್ಟಣದಲ್ಲಿ ಸಾರ್ವಜನಿಕರು, ವಾಹನ ಸಂಚಾರ ದಿನೇ ದಿನೇ ಹೆಚ್ಚುತ್ತಿದೆ. ಚರಂಡಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸಂಚಾರ ವ್ಯವಸ್ಥೆ ಸುಧಾರಣೆಗೆ ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನೇಮಿಸಬೇಕು. ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚಿಸಬೇಕು. ಮಣ್ಣು, ದೂಳು ಸ್ವಚ್ಛಗೊಳಿಸಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು~ ಎಂದು ನಿವೃತ್ತ ನೌಕರ ವೀರಾಚಾರಿ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry