ಬಾಗೇಪಲ್ಲಿ: ವಿವಿಧೆಡೆ ಪ್ರತಿಭಟನೆ

7

ಬಾಗೇಪಲ್ಲಿ: ವಿವಿಧೆಡೆ ಪ್ರತಿಭಟನೆ

Published:
Updated:

ಬಾಗೇಪಲ್ಲಿ: ತಾಲ್ಲೂಕು ವ್ಯಾಪ್ತಿಯಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ಮಾಸಾಶನ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ನೇತೃತ್ವದಲ್ಲಿ ವೃದ್ಧರು, ಅಂಗವಿಕಲರು ಸೋಮವಾರ ತಾಲ್ಲೂಕು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.  ಜಿಲ್ಲಾ ಪಂಚಾಯಿತಿ ಸದಸ್ಯ ಹರಿನಾಥರೆಡ್ಡಿ ನೇತೃತ್ವದಲ್ಲಿ ಪಟ್ಟಣದ ಎಚ್.ಎನ್.ವೃತ್ತದಿಂದ ಮೆರವಣಿಗೆಯಲ್ಲಿ ಸಾಗಿ, ತಾಲ್ಲೂಕು ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಹರಿನಾಥರೆಡ್ಡಿ ಮಾತನಾಡಿ, ಸಕಾಲಕ್ಕೆ ಮಳೆಯಾಗದೆ ಬೆಳೆಗಳು ಸಂಪೂರ್ಣ ನೆಲ ಕಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಮಾಸಾಶನಗಳನ್ನೂ ರದ್ದು ಪಡಿಸಿರುವುದು ಖಂಡನಾರ್ಹ.ಇದರಿಂದ ತಾಲ್ಲೂಕಿನ ವೃದ್ಧರು, ಅಂಗವಿಕಲರಿಗೆ ಅನಾನುಕೂಲವಾಗಿದೆ. ಸ್ಥಗಿತಗೊಂಡಿರುವ ಮಾಸಿಕ ವೇತನಗಳನ್ನು ಕೂಡಲೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.  ಜೆಡಿಎಸ್ ಮುಖಂಡ ಸಿ.ಡಿ.ಗಂಗುಲಪ್ಪ ಮಾತನಾಡಿದರು.ಸ್ಥಳಕ್ಕೆ ತಹಶೀಲ್ದಾರ್ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ತಹಶೀಲ್ದಾರ್ ಟಿ.ಎನ್.ಕೃಷ್ಣಮೂರ್ತಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರು. ನಂತರ, ತಾಲ್ಲೂಕಿನ ಗೂಳೂರು ಹೋಬಳಿಯಲ್ಲಿ 275 ವೃದ್ಧರಿಗೆ ಮಾಸಿಕ ವೇತನ ನೇರವಾಗಿ ಸಂದರ್ಶನ ಮೂಲಕ ಕಲ್ಪಿಸಲಾಗಿದೆ.

 

ಕಸಬಾ ಹೋಬಳಿಯಲ್ಲಿ ಕೇವಲ 75 ಅರ್ಜಿಗಳು ಬಂದಿವೆ. ಮಿಟ್ಟೇಮರಿ ಹೋಬಳಿಯಲ್ಲಿ 197 ಅರ್ಹ ಫಲಾನುಭವಿಗಳಿಗೆ ವೇತನ ಮಂಜೂರು ಮಾಡಲಾಗುವುದು. ಚೇಳೂರು ಹೋಬಳಿಯಲ್ಲಿ ಕೆಲ ತಾಂತ್ರಿಕ ಕಾರಣಗಳಿಂದ ವೃದ್ಧಾಪ್ಯ ವೇತನ ನೀಡಿಲ್ಲ. ಮುಂದಿನ 15 ದಿನದೊಳಗೆ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಿ,  ವೃದ್ಧಾಪ್ಯ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟರವಣರೆಡ್ಡಿ, ಜೆಡಿಎಸ್ ಮುಖಂಡರಾದ ಚಿನ್ನರಾಮರೆಡ್ಡಿ, ವೆಂಕಟಸುಬ್ಬಾರೆಡ್ಡಿ, ಕೆ.ಎಂ.ರಾಮಕೃಷ್ಣಾರೆಡ್ಡಿ, ದೇವಿಕುಂಟೆ ಶ್ರೀನಿವಾಸ್, ಜೆ.ಪಿ.ಚಂದ್ರಶೇಖರರೆಡ್ಡಿ, ವೆಂಕಟಸ್ವಾಮಿರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕಾವೇರಿ ನೀರು: ರಸ್ತೆ ತಡೆ

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸಿದ ಸರ್ಕಾರದ ಧೋರಣೆ ಖಂಡಿಸಿ ಕನ್ನಡ ಸೇನೆ-ಕರ್ನಾಟಕ ಸದಸ್ಯರು ಬಾಗೇಪಲ್ಲಿ ಪಟ್ಟಣದ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಮುಂಭಾಗದ ಮುಖ್ಯರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು.ಕಾವೇರಿ ನದಿ ಹರಿಸಲು ಸೂಚಿಸಿದ ಕೇಂದ್ರ ಹಾಗೂ ಹರಿಸಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಸ್ತೆ ತಡೆ ನಡೆಸಿದ್ದರಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಘಟಕ ಅಧ್ಯಕ್ಷ ಬಾಬಾಜಾನ್,  ರಾಜ್ಯ ಸರ್ಕಾರ ಹಾಗೂ ನದಿ ಪ್ರಾಧಿಕಾರ ಕಾವೇರಿ ನದಿ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿವೆ. ಇದರಿಂದ ಕಾವೇರಿ ನೀರು ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದರು.ರಸ್ತೆ ತಡೆಯಲ್ಲಿ ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಘಟಕ ಕಾರ್ಯದರ್ಶಿ ವೆಂಕಟೇಶ್, ಮುಖಂಡರಾದ ವೆಂಕಟರವಣಪ್ಪ, ಅಥಾವುಲ್ಲಾ, ಆಲ್ತಾಫ್, ಶ್ರೀನಿವಾಸ್, ಮೂರ್ತಿ, ದೇವ ಮತ್ತಿತರರು ಪಾಲ್ಗೊಂಡಿದ್ದರು.ಸಿಪಿಎಂ ಪ್ರತಿಭಟನೆ

ಬಸ್ ಪ್ರಯಾಣ ದರ ಏರಿಸಿರುವ ಏರಿಸಿರುವ ಕ್ರಮ ಖಂಡಿಸಿ ಸಿಪಿಎಂ ಕಾರ್ಯಕರ್ತರು ಬಾಗೇಪಲ್ಲಿ ಪಟ್ಟಣದ ಸಾರಿಗೆ ನಿಲ್ದಾಣದ ಮುಂಭಾಗ ಕೆಲಕಾಲ ರಸ್ತೆ ತಡೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಡೀಸೆಲ್, ಪೆಟ್ರೋಲ್ ಏರಿಸಿರುವ ಕೇಂದ್ರ ಸರ್ಕಾರ ಹಾಗೂ ಬಸ್ ಪ್ರಯಾಣ ದರ ಏರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.ಸಿಪಿಎಂ ಜಿಲ್ಲಾ ಘಟಕ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರಗಳನ್ನು ಏರಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕ್ರಮ ಖಂಡನಾರ್ಹ. ಇದರಿಂದ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಬಿದ್ದಿದೆ. ಬಸ್ ಪ್ರಯಾಣ ದರ ಏರಿಕೆಯನ್ನು ಕೂಡಲೆ ಹಿಂಪಡೆಯ ಬೇಕು ಎಂದು ಆಗ್ರಹಿಸಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ, ಸಿಪಿಎಂ ತಾಲ್ಲೂಕು ಘಟಕ ಕಾರ್ಯದರ್ಶಿ ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ರಾಮಲಿಂಗಪ್ಪ, ಆಂಜನೇಯರೆಡ್ಡಿ, ಮಂಜುನಾಥರೆಡ್ಡಿ, ಗೋವರ್ಧನಚಾರಿ, ಶ್ರೀನಿವಾಸರೆಡ್ಡಿ, ಚಂದ್ರಶೇಖರರೆಡ್ಡಿ, ಪ್ರಸಾದ್, ಲೋಕೇಶ್‌ಕುಮಾರ್, ನಾಗಿರೆಡ್ಡಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry