ಬಾಗ್-ಇ-ಹಮಾಮ್ ಪತ್ತೆ

7
ಬರೀದ್‌ಶಾಹಿ ರಾಜಮನೆತನದ ಪ್ರವಾಸಿ ತಾಣ?

ಬಾಗ್-ಇ-ಹಮಾಮ್ ಪತ್ತೆ

Published:
Updated:

ಬೀದರ್: ಹದಿನಾರನೇ ಶತಮಾನದ, ಬರೀದ್‌ಶಾಹಿ ಆಡಳಿತದ ಅವಧಿಯಲ್ಲಿ ಇದ್ದ ಬಾಗ್-ಇ-ಹಮಾಮ್ (ಉದ್ಯಾನ ಸ್ನಾನಗೃಹ)ವು ನಗರ ಹೊರವಲಯದ ಅಲಿಯಾಬಾದ್ ಗ್ರಾಮದ ಬಳಿ ಪತ್ತೆಯಾಗಿದ್ದು, ಇದರ ಸ್ವರೂಪವನ್ನು ಗುರುತಿಸುವ ಕಾರ್ಯ ಈಗ ನಡೆದಿದೆ.

ಮೈಸೂರು ಮೂಲದ ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ ಫೌಂಡೇಷನ್‌ನ ಸದಸ್ಯರು ಜಿಲ್ಲಾಡಳಿತದ ಸಹಕಾರದಲ್ಲಿ ಇದರ ಮೂಲಸ್ವರೂಪ ಗುರುತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಕೆಲ ದಿನದ ಹಿಂದೆ ಧಾರವಾಡದಿಂದ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಯೊಬ್ಬರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಾಗ್-ಇ- ಹಮಾಮ್ ಎಂದು ಎನ್ನಲಾದ ಈ ಸ್ಥಳ ಬರೀದ್‌ಶಾಹಿ ರಾಜಮನೆತನದ ಪ್ರವಾಸಿ ತಾಣವು ಆಗಿದ್ದಿರಬಹುದು ಎಂದು ಊಹಿಸಲಾಗಿದೆ.`ಈ ತಾಣವನ್ನು ಬರೀದ್ ಶಾಹಿ ಆಡಳಿತದ ಮೊದಲ ರಾಜ ಅಲಿ ಬರೀದ್ ಅಭಿವೃದ್ಧಿ ಪಡಿಸಿದ್ದರು. ರಾಜ ಸಿಬ್ಬಂದಿಯೊಂದಿಗೆ ಈ ಸ್ಥಳಕ್ಕೆ ಭೇಟಿ ನೀಡಿ ವಿರಮಿಸುತ್ತಿದ್ದಿರಬಹುದು' ಎಂದು ಇತಿಹಾಸಕಾರ ಪ್ರೊ. ಬಿ.ಆರ್.ಕೊಂಡಾ ಅವರು ಅಭಿಪ್ರಾಯಪಡುತ್ತಾರೆ.ಬೀದರ್‌ನ  ಪರಂಪರೆ, ಇತಿಹಾಸದ ಸಂರಕ್ಷಣೆಗೆ ಇಂಥ ಸ್ಥಳಗಳ ರಕ್ಷಣೆ ಅಗತ್ಯ. ಇದನ್ನು ರಕ್ಷಿಸಿ ಉಳಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯ ಪಡುತ್ತಾರೆ. ಪ್ರಸ್ತುತ ಜಿಲ್ಲಾಡಳಿತದ ಸಹಯೋಗದಲ್ಲಿ ಕೆಲ ಸಿಬ್ಬಂದಿ, ಈಚಿನ ದಿನಗಳಲ್ಲಿ ಅಲ್ಲಿದ್ದ ನಿರ್ಮಾಣವನ್ನು ಮುಚ್ಚಿಕೊಂಡಿದ್ದ ಮಣ್ಣು ತೆಗೆಯುವ ಕೆಲಸದಲ್ಲಿ ನಿರತರಾಗಿದ್ದಾರೆ.ಈಜುಕೊಳದಂಥ ಸ್ಥಳ, ಅಲ್ಲಿನ ನೀರು ಪೂರೈಕೆಗೆ ಅಳವಡಿಸಲಾಗಿತ್ತು ಎನ್ನಲಾದ ಕೊಳವೆ, ಸ್ನಾನಗೃಹ ಎಂದು ಊಹಿಸ ಬಹುದಾದ ವಿವಿಧ ಕೆತ್ತನೆಗಳು ಇರುವ  ಕೊಠಡಿ ಕೂಡಾ ಪತ್ತೆಯಾಗಿದೆ.  ಐತಿಹಾಸಿಕ ನಿರ್ಮಾಣಕ್ಕೆ ಧಕ್ಕೆಯಾಗದಂತೆ ಮಣ್ಣು ತೆಗೆಯಲು ಸಲಹೆ, ಮಾರ್ಗದರ್ಶನ ನೀಡುತ್ತಿರುವ ಫೌಂಡೇಷನ್‌ನ ಗೋವಿಂದನ್ ಕುಟ್ಟಿ ಅವರು, ಇಂಥದೇ ನಿರ್ಮಾಣ ವಿಜಾಪುರದಲ್ಲಿ ಇರುವ ಬಗ್ಗೆ ಪುಸ್ತಕವೊಂದರಲ್ಲಿ ಚಿತ್ರ ನೋಡಿದ್ದೇನೆ. ಅಲ್ಲಿ ಅದಿಲ್ ಶಾಹಿ ಆಡಳಿತವಿತ್ತು. ಈ ಎರಡರ ನಡುವೆ ಹೋಲಿಕೆ ಇರಬಹುದು ಎಂದರು.ಸಂಕೀರ್ಣಕ್ಕೆ ಧಕ್ಕೆಯಾಗದಂತೆ ಬಹುಶಃ ಪೂರ್ಣ ಮಣ್ಣು ತೆಗೆದ ಬಳಿಕ ಸ್ವರೂಪ ಮತ್ತು ಈ ಸ್ಥಳದ ಮಹತ್ವ ತಿಳಿಯಬಹುದು.

ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್, ಇತಿಹಾಸಕಾರ ಬಿ.ಆರ್. ಕೊಂಡಾ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಉತ್ಖನನ ಕಾರ್ಯಕ್ಕೆ ಸಲಹೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry