ಬಾಡಿದ ಮೊಗದಲ್ಲಿ `ನವಚೈತನ್ಯ'

7

ಬಾಡಿದ ಮೊಗದಲ್ಲಿ `ನವಚೈತನ್ಯ'

Published:
Updated:

ಒಂದು ಕಾಲಕ್ಕೆ ಬರಡಾಗಿದ್ದ ಭೂಮಿ ಈಗ ಹಸಿರಿನಿಂದ ನಳನಳಿಸುತ್ತಿದೆ. ಈ ಭೂಮಿಯಲ್ಲಿ ಏನನ್ನೂ ಬೆಳೆಯಲು ಸಾಧ್ಯವಿಲ್ಲ ಎಂದು ಊರನ್ನೇ ತೊರೆಯಲು ಮುಂದಾಗಿದ್ದ ಇಲ್ಲಿನ ರೈತರ ಮೊಗದಲ್ಲಿ ಇಂದು ಯಶಸ್ವಿ ಕೃಷಿಯ ಗೆಲುವಿನ ಮಂದಹಾಸವಿದೆ. ತಮ್ಮ ಮೂಲ ನೆಲದಲ್ಲೇ ತಮ್ಮ ಬಾಳು ಹಸನಾದ ಬಗ್ಗೆ ಸಂತಸವಿದೆ.ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ, ಕೆ.ಮುತ್ತುಗದ ಹಳ್ಳಿ, ಜಂಗಮ ಸೀಗೆಹಳ್ಳಿ, ಹಲಸೂರು ದಿಣ್ಣೆ ಮತ್ತು ಚಿಂತತೊಡಪಿ ಹಳ್ಳಿಗಳ ರೈತರು ಹತ್ತು ವರ್ಷಗಳ ಹಿಂದೆ ತಮ್ಮ ಊರನ್ನೇ ತೊರೆಯಲು ನಿರ್ಧರಿಸಿದ್ದರು. ಆಗ ಇವರ ನೆರವಿಗೆ ಬಂದಿದ್ದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್) ಜಲಾನಯನ ಅಭಿವೃದ್ಧಿ ಯೋಜನೆ.ಸ್ವಯಂ ಸೇವಾ ಸಂಸ್ಥೆಯಾದ `ನವಚೈತನ್ಯ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ'ಯು ನಬಾರ್ಡ್‌ನ ಈ ಯೋಜನೆಯ ನೆರವಿನಿಂದ ಐದು ಹಳ್ಳಿಗಳ ಒಂದು ಸಾವಿರ ಹೆಕ್ಟೇರ್ ಜಮೀನನ್ನು ಹಸನಾಗಿಸಿದೆ.`ಮೊದಲು ಹೊಲದಲ್ಲಿ ರಾಗಿ ಮಾತ್ರ ಬೆಳೆಯುತ್ತ್ದ್ದಿದೆವು. ಆದರೆ, ಸರಿಯಾದ ಸಮಯಕ್ಕೆ ಮಳೆಯಾಗದೇ ಅದೂ ಸರಿಯಾಗಿ ಇಳುವರಿ ನೀಡುತ್ತಿರಲಿಲ್ಲ. ರಾಗಿ ಬೆಳೆಯಲು ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದರೆ ಅದರಿಂದ ಮೂರು ಸಾವಿರ ರೂಪಾಯಿ ಆದಾಯ ಬರುತ್ತಿತ್ತು. ಹೀಗಾಗಿ ಜೀವನ ನಿರ್ವಹಣೆಯೇ ಕಷ್ಟವಾಗಿತ್ತು. ಜಲಾನಯನ ಅಭಿವೃದ್ಧಿ ಯೋಜನೆಯ ಅನುಷ್ಠಾನದ ನಂತರ ನಮ್ಮ ಜಮೀನು ಫಲವತ್ತಾಗಿದೆ' ಎನ್ನುವುದು ಕನ್ನಮಂಗಲದ ರಾಜಮ್ಮ  ಅವರ ಹೆಮ್ಮೆಯ ಮಾತು.`ಮೂರು ಎಕರೆ ಜಮೀನಿನಲ್ಲಿ ಕಡಿಮೆ ನೀರಿನಿಂದ ಬೆಳೆಯಬಹುದಾದ ಗೇರು, ಬೆಟ್ಟದನೆಲ್ಲಿ, ಹುಣಸೆ, ನೇರಳೆ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಇದರಿಂದ ವರ್ಷಕ್ಕೆ 50 ರಿಂದ 60 ಸಾವಿರ ರೂಪಾಯಿ ಆದಾಯ ಬರುತ್ತಿದೆ. ಮೊದಲಿದ್ದ ಮಣ್ಣಿನ ಮನೆಯ ಹಿಂದೆ ಈಗ ಸಿಮೆಂಟಿನ ಮನೆಯನ್ನು ಕಟ್ಟಿಕೊಂಡಿದ್ದೇನೆ' ಎಂದು ಬಂಜರು ಭೂಮಿ ಹಸನಾದ ಬಗೆಯನ್ನು ಅವರು ಬಿಚ್ಚಿಟ್ಟರು.`ಮೊದಲು ನೀರಿನ ಕೊರತೆಯಿಂದ ಯಾವುದೇ ಬೆಳೆಯನ್ನು ಬೆಳೆಯಲು ಆಗುತ್ತಿರಲಿಲ್ಲ. ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಆಗ ಊರು ತೊರೆಯಲು ನಿರ್ಧರಿಸಿದ್ದ ಸಂದರ್ಭದಲ್ಲಿ ನಬಾರ್ಡ್‌ನ ಯೋಜನೆ ನಮ್ಮ ಕೈ ಹಿಡಿಯಿತು. ನೀರು ಸಂಗ್ರಹಣೆಗೆ ಬದುಗಳನ್ನು ನಿರ್ಮಿಸಿ, ಜಮೀನಿನ ಸುತ್ತಲೂ ತಗ್ಗುಗಳನ್ನು ತೆಗೆಸಿದ್ದರಿಂದ ಮಳೆ ಬಂದು ನಿಂತ ನೀರು ಇಂಗಿ ನೀರಿನ ತೇವಾಂಶ ಹೆಚ್ಚಾಯಿತು. ಇದರಿಂದ ತೋಟಗಾರಿಕೆ ಗಿಡಗಳನ್ನು ನೆಟ್ಟು ಲಾಭದಾಯಕ ಬೆಳೆಗಳನ್ನು ಬೆಳೆಯುತ್ತಿದ್ದೇನೆ' ಎನ್ನುತ್ತಾರೆ ಜಂಗಮ ಸೀಗೆಹಳ್ಳಿಯ ರೈತ ಚಿಕ್ಕ ವೆಂಟಕರಾಯಪ್ಪ.`ರಾಜ್ಯದಲ್ಲಿ ಕೃಷಿ ಭೂಮಿ ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಕ್ಕೆ ತರಲು 200 ಕೋಟಿ ರೂಪಾಯಿಗಳನ್ನು ನಬಾರ್ಡ್ ಅಂದಾಜು ಮಾಡಿದ್ದು, 134 ಕೋಟಿ ರೂಪಾಯಿ ಈಗಾಗಲೇ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ 25 ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೆ ತರಲು ನಬಾರ್ಡ್ ಉದ್ದೇಶಿಸಿದೆ' ಎಂದು ನಬಾರ್ಡ್‌ನ ಸಹಾಯಕ ವ್ಯವಸ್ಥಾಪಕ ಎಸ್.ಎಸ್.ಥಾಯ್ಡೆ ತಿಳಿಸಿದರು.ಪ್ರಯೋಜನಗಳು

ಬಂಜರು ಭೂಮಿಯಾಗಿದ್ದ ಇಲ್ಲಿನ ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಗೆಸಿದ ಬೋರ್‌ವೆಲ್‌ನಲ್ಲಿನ ನೀರು ಬತ್ತಿ ಹೋಗಿತ್ತು. ಇದರಿಂದ ರೈತರು ಉಳುಮೆಯನ್ನು ಕೂಡ ಮಾಡಲು ಸಾಧ್ಯವಾಗದೆ ಇದ್ದಂತಹ ಪರಿಸ್ಥಿತಿ. ಆಗ ನಬಾರ್ಡ್ ಯೋಜನೆಯನ್ನು ರೂಪಿಸಿ, ಅಲ್ಲಿ ನೀರು ಸಂಗ್ರಹಣೆ ಮಾಡಲು ಕೃಷಿ ಹೊಂಡಗಳ ನಿರ್ಮಾಣ, ಜಮೀನಿನ ಬದಿಯಲ್ಲಿ ತಗ್ಗು ತೆಗೆಯುವುದು, ಬದುಗಳನ್ನು ನಿರ್ಮಿಸಿ ಮಳೆಯ ನೀರನ್ನು ಸಂಗ್ರಹಿಸಲು ಅನುಕೂಲ, ನಾಲೆಗಳ ನಿರ್ಮಾಣ ಮಾಡಿ ಮಳೆ ನೀರನ್ನು ಹಿಡಿದಿಟ್ಟು ಅದು ಇಂಗುವಂತೆ ಮಾಡುವುದು, ಅಲ್ಲಿಯ ಪ್ರದೇಶಗಳಲ್ಲಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಈ ಯೋಜನೆಯನ್ನು ಕೈಗೊಂಡಿದೆ.  ಯೋಜನೆಗೆ 55.70 ಲಕ್ಷ ರೂಪಾಯಿಗಳು ಮತ್ತು ರಾಜ್ಯ ಸರ್ಕಾರವು 23.56 ಲಕ್ಷ ರೂಪಾಯಿಯನ್ನು ನೀಡಿದೆ.`ಕಲ್ಲಿನಿಂದ ಕೂಡಿದ ಪ್ರದೇಶದಲ್ಲಿ ಏನನ್ನೂ ಬೆಳೆಯಲಾಗದೆ ರೈತರು ಊರು ತೊರೆದು ಹೋಗಿದ್ದರು. ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆಯನ್ನು ನಬಾರ್ಡ್ ಕೈಗೊಂಡಿತು. ಆಗ ರೈತರನ್ನೆಲ್ಲ ಒಟ್ಟಾಗಿಸಿ ಈ ಕುರಿತು ಮಾಹಿತಿಯನ್ನು ನೀಡಿ, ಇದರ ಉಪಯೋಗದ ಕುರಿತು ಮನವರಿಕೆ ಮಾಡಿಕೊಡಲಾಯಿತು. ಈ ಯೋಜನೆಯ ಫಲವಾಗಿ ಇಲ್ಲಿನ ರೈತರು ತೋಟದ ಬೆಳೆಗಳನ್ನು ಬೆಳೆದು ಲಕ್ಷಾಂತರ ಹಣವನ್ನು ಗಳಿಸುತ್ತಿದ್ದಾರೆ'

-ಎಂ. ನಾರಾಯಣಸ್ವಾಮಿ

ಕಾರ್ಯದರ್ಶಿ, ನವಚೈತನ್ಯ ಗ್ರಾಮೀಣ  ಅಭಿವೃದ್ಧಿ ಸೊಸೈಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry