ಮಂಗಳವಾರ, ಜೂನ್ 22, 2021
27 °C

ಬಾಡಿಯಾಳ, ವಡಗೇರಾ ಗ್ರಾಪಂನಲ್ಲಿ ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ವಸತಿ ಯೋಜನೆಗಳಲ್ಲಿ ಆಗುತ್ತಿರುವ ವಿಳಂಬ ಒಂದೆಡೆಯಾದರೆ, ಕೊಟ್ಟಿರುವ ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡದೇ, ಭಾರಿ ಅವ್ಯವಹಾರ ಎಸಗಿದ ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ. ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವಿಶೇಷಾಧಿಕಾರಿಗಳೇ ಈ ವಿಷಯವನ್ನು ಬಯಲಿಗೆ ತಂದಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ.ತಾಲ್ಲೂಕಿನ ಗಡಿಭಾಗದಲ್ಲಿರುವ ಬಾಡಿಯಾಳ ಗ್ರಾಮ ಪಂಚಾಯಿತಿಯಲ್ಲಿ ಕಳೆದ 5 ವರ್ಷಗಳಿಂದ ರಾಜೀವಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ ಸರ್ಕಾರ ನೀಡಿರುವ ನೂರಾರು ಮನೆಗಳನ್ನು ನಿರ್ಮಿಸದೇ ಫಲಾನುಭವಿಗಳ ಹೆಸರಿನ ಮೇಲೆ ಲಕ್ಷಾಂತರ ಹಣ ಎತ್ತಿಹಾಕಲಾಗಿದೆ ಎಂಬುದನ್ನು ಸ್ವರ್ತ ವಿಶೇಷಾಧಿಕಾರಿ ಉಸ್ಮಾನ ಪಾಷಾ `ಪ್ರಜಾವಾಣಿ~ಗೆ ತಿಳಿಸಿದರು.ಬುಧವಾರ ಬೆಳಿಗ್ಗೆ ಬಾಡಿಯಾಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮನೆಗಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಬಾಡಿಯಾಳ ಗ್ರಾಮದ ಸುಮಾರು 33 ಮನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಕೇವಲ 3 ಮನೆಗಳು ಮಾತ್ರ ನಿರ್ಮಾಣ ಆಗಿವೆ. ಇದೇ ರೀತಿ ಒಟ್ಟು 221 ಮನೆಗಳಲ್ಲಿ ಶೇ. 80 ಮನೆಗಳೇ ನಿರ್ಮಾಣವಾಗಿಲ್ಲ. ಅಲ್ಲದೇ ತಮಗೊಂದು ಮನೆ ಹಂಚಿಕೆಯಾಗಿದೆ ಎಂಬುದೇ ಬಹುತೇಕ ಫಲಾನುಭವಿಗಳಿಗೆ ತಿಳಿದಿಲ್ಲ.

 

ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ 2005-06 ರಿಂದ 2009-10 ರವರೆಗೆ ಬಾಡಿಯಾಳ ಗ್ರಾಂ ಪಂಚಾಯಿತಿಗೆ 221 ಮನೆಗಳು ಮಂಜೂರಾಗಿದ್ದು, ಇದುವರೆಗೆ ಕೇವಲ 8-10 ಮನೆಗಳು ಮಾತ್ರ ನಿರ್ಮಾಣ ಆಗಿವೆ ಎಂದು ತಿಳಿಸಿದರು.ಕಾರ್ಯದರ್ಶಿಯಾಗಿದ್ದ ಇಮಾಮ್‌ಸಾಬ ಎಂಬುವವರ ಅವಧಿಯಲ್ಲಿಯೇ ಈ ಅವ್ಯವಹಾರ ಆಗಿರುವುದು ಸ್ಪಷ್ಟವಾಗಿದೆ. ತಾವು 2008-09 ನೇ ಸಾಲಿನ ಮನೆಗಳನ್ನು ಮಾತ್ರ ಪರಿಶೀಲಿಸಿದ್ದು, ಉಳಿದ ಮನೆಗಳ ಬಗ್ಗೆ ಗ್ರಾಮದಲ್ಲಿ ವಿಚಾರಣೆ ಮಾಡಿದಾಗ, ಸುಮಾರು ರೂ. 65 ಲಕ್ಷದಷ್ಟು ಅವ್ಯವಹಾರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.ಇದರಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಾತ್ರವಲ್ಲ, ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳೂ ಶಾಮೀಲಾಗಿದ್ದು, ಈ ಬಗ್ಗೆ ಸಮಗ್ರ ವರದಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೀಡಲಾಗುವುದು ಎಂದು ತಿಳಿಸಿದರು.ಇನ್ನು ವಡಗೇರಾ ಗ್ರಾಮ ಪಂಚಾಯಿತಿ ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ. ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಗ್ರಾಮ ಪಂಚಾಯಿತಿಗೆ ಒಟ್ಟು 248 ಮನೆಗಳು ಮಂಜೂರಾಗಿದ್ದು, ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ 50 ಮನೆಗಳ ಪರಿಶೀಲನೆ ನಡೆಸಲಾಯಿತು. ಆದರೆ ಕೇವಲ 5 ಮನೆಗಳು ನಿರ್ಮಾಣವಾಗಿರುವುದು ಕಂಡು ಬಂದಿದೆ ಎಂದು ಹೇಳಿದರು.ಈ ಗ್ರಾಮ ಪಂಚಾಯಿತಿಯಲ್ಲೂ ಶೇ. 80 ರಷ್ಟು ಮನೆಗಳು ನಿರ್ಮಾಣ ಆಗಿಯೇ ಇಲ್ಲ. ಪಂಚಾಯಿತಿಗಳಲ್ಲಿ ಫಲಾನುಭವಿಗಳ ಪಟ್ಟಿಯೂ ಇಲ್ಲ. ಜೊತೆಗೆ ಫಲಾನುಭವಿಗಳಿಗೆ ಹಣ ನೀಡಿದ ಬಗ್ಗೆ ಯಾವುದೇ ದಾಖಲೆಗಳೂ ಲಭ್ಯವಿಲ್ಲ.  ವಡಗೇರಾ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯದರ್ಶಿ ಚನ್ನಬಸವ ಹಾಗೂ ಬಿಲ್ ಕಲೆಕ್ಟರ್ ಈ ಅವ್ಯವಹಾರ ನಡೆಸಿದ್ದು, ಇಲ್ಲಿಯೂ ರೂ. 85 ಲಕ್ಷದಷ್ಟು ಅವ್ಯವಹಾರ ಆಗಿದೆ ಎಂದು ತಿಳಿಸಿದರು.ವಸತಿ ಯೋಜನೆಗೆ ಆಯ್ಕೆಯಾದ ಅನೇಕ ಫಲಾನುಭವಿಗಳನ್ನು ಭೇಟಿಯಾದಾಗ ಅವರಿಗೆ ಮನೆ ಮಂಜೂರಿಯಾದ ವಿಷಯ ಕೂಡ ತಿಳಿದಿಲ್ಲ ಫಲಾನುಭವಿಗಳ ಹೆಸರಿನಲ್ಲಿ ಪಂಚಾಯಿತಿಯ ಚುನಾಯಿತಿ ಪ್ರತಿನಿಧಿಗಳು, ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಶಾಮೀಲಾಗಿದ್ದು, ಅವ್ಯವಹಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸುವ ವರದಿಯಲ್ಲಿ ಶಿಫಾರಸು ಮಾಡುವುದಾಗಿ ಹೇಳಿದರು.ಪತ್ತೆ ಆಗಿದ್ದು ಹೇಗೆ?: ಗ್ರಾಮೀಣ ವಸತಿ ಯೋಜನೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಜಿಲ್ಲೆಗೆ ಸುಮಾರು 38,285 ಮನೆಗಳು ಮಂಜೂರಾಗಿವೆ. ಆದರೂ ವಸತಿ ಯೋಜನೆಗಳಲ್ಲಿ ಜಿಲ್ಲೆಯ ಪ್ರಗತಿ ತೀರ ಕೆಳಮಟ್ಟದಲ್ಲಿದೆ. ಈ ಬಗ್ಗೆ ಪರಿಶೀಲನೆ ಮಾಡುವುದಕ್ಕಾಗಿ ತಾವು ಯಾದಗಿರಿಗೆ ಬಂದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ ಪರಿಶೀಲಿಸಿದಾಗ ಸಂದೇಹ ಉಂಟಾಯಿತು. ಅದಕ್ಕಾಗಿ ಪಂಚಾಯಿತಿಗಳಿಗೆ ತೆರಳಿ ವಾಸ್ತವಾಂಶವನ್ನು ನೋಡಿದಾಗ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ ಎಂದು ಉಸ್ಮಾನ ಪಾಷಾ ಹೇಳಿದರು.ಜಿಲ್ಲೆಯಲ್ಲಿ ವಸತಿ ಯೋಜನೆಗಳ ಪ್ರಗತಿ ಸಾಕಷ್ಟು ಕೆಳಮಟ್ಟದಲ್ಲಿದೆ. ಈ ರೀತಿ ಅವ್ಯವಹಾರ ಮಾಡುವುದರಿಂದ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿಲ್ಲ. ಒಂದೆರೆಡು ಪಂಚಾಯಿತಿ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ಮೇಲೆ ಕ್ರಮ ಜರುಗಿಸಿದಲ್ಲಿ, ಉಳಿದ ಪಂಚಾಯಿತಿಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪರಿಶೀಲನೆಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ವಿರುಪಾಕ್ಷಪ್ಪ ಕರಣಗಿ, ನಿಗಮದ ಜಿಲ್ಲಾ ವ್ಯವಸ್ಥಾಪಕ ಲಿಂಗಾರೆಡ್ಡಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.