ಗುರುವಾರ , ಮೇ 26, 2022
29 °C

ಬಾಡುತ್ತಿರುವ ತೊಗರಿ ಬೆಳೆ: ನೀರಿದ್ದರೂ ರೈತರಿಗೆ ತಪ್ಪದ ಬರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಜಿಲ್ಲೆಯ ಮಧ್ಯಮ ನೀರಾವರಿ ಯೋಜನೆಗಳಲ್ಲಿ ಒಂದಾಗಿರುವ ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ್ ಜಲಾಶಯದಲ್ಲಿ ನೀರಿನ ಸಂಗ್ರಹವಿದ್ದರೂ ಕೂಡ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿನಲ್ಲಿರುವ ಬೆಳೆಗಳು ನೀರಿಲ್ಲದೇ ಬರಕ್ಕೆ ತುತ್ತಾಗುತ್ತಿವೆ.ಸೆಪ್ಟೆಂಬರ್ ತಿಂಗಳಲ್ಲಿ ಬರಬೇಕಾಗಿದ್ದ ಮಳೆ ಸುರಿಯದ ಕಾರಣ ತಾಲ್ಲೂಕಿನಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಭೂಮಿಯಲ್ಲಿ ತೇವಾಂಶ ಕ್ಷೀಣಿಸಿದ್ದು ತೊಗರಿ ಬೆಳೆ ಬಾಡಲಾರಂಭಿಸಿದೆ.ಕೆಳದಂಡೆ ಮುಲ್ಲಾಮಾರಿ ಯೋಜನೆ ಸುಮಾರು 80 ಕೀ.ಮೀ ಉದ್ದದ ಮುಖ್ಯ ಕಾಲುವೆ ಹೊಂದಿದ್ದು, ವಾರ್ಷಿಕ 2.5 ಟಿಎಂಸಿ ನೀರು ಕೃಷಿ ಉದ್ದೇಶಕ್ಕೆ ಬಳಕೆ ಮಾಡಬಹುದಾಗಿದೆ. ಅಗಸ್ಟ್ ತಿಂಗಳ ಮೊದಲ ವಾರವೇ ಜಲಾಶಯ ಭರ್ತಿಯಾದರೂ ಕೂಡ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನೀರಿದ್ದರೂ ಅಚ್ಚುಕಟ್ಟು ಪ್ರದೇಶದ ರೈತರು ಬರದಿಂದ ಗರ ಬಡಿದವರಾಗಿದ್ದಾರೆ.ಜಲಾಶಯದಿಂದ ಸುಮಾರು 40 ಕೀ.ಮೀವರೆಗೆ ಈಗಾಗಲೇ ಮುಖ್ಯ ಕಾಲುವೆ ಪುನಶ್ಚೇತನ  ಕಾಮಗಾರಿ ಕೈಗೊಳ್ಳಲಾಗಿದೆ. ವಿತರಣಾ ನಾಲೆ ಹಾಗೂ ಮರಿ ಗಾಲುವೆಗಳು ಅಲ್ಲಲಿ ಕಾಣಸಿಗುತ್ತವೆ. ಮುಖ್ಯ ಕಾಲುವೆಯ ಕೀ.ಮೀ. 40ರಿಂದ 80ವರೆಗೆ ಪುನಶ್ಚೇತನ ಕಾಮಗಾರಿ ಪ್ರಗತಿಯಲ್ಲಿದೆ. ಕೆಲವೆಡೆ ವಿತರಣಾ ನಾಲೆ ಹಾಗೂ ಹೊಲ ಗಾಲುವೆಗಳು ಇಲ್ಲ ಎಂಬ ಆರೋಪಗಳಿವೆ. ಆದರೆ ಇಲ್ಲಿನ ರೈತರು ನೀರು ಸಮಪರ್ಕವಾಗಿ ಬಳಸಿಕೊಳ್ಳುವ ಬಗ್ಗೆ ಹೆಚ್ಚಿನ ಮುತುವರ್ಜಿ ತೋರುವುದಿಲ್ಲ. ಹೀಗಾಗಿ ಅವರು ನೀರಿಗಾಗಿ ಎಂದು ಹಾತೊರೆದಿಲ್ಲ. ಇದು ಅಧಿಕಾರಿಗಳಿಗೆ ವರವಾಗಿ ಪರಿಣಮಿಸಿದೆ.ಸಧ್ಯ ಅಲ್ಲಲ್ಲಿ ತೊಗರಿ ಬೆಳೆ ತೇವಾಂಶದ ಕೊರತೆಯಿಂದ ಬಾಡುತ್ತಿರುವುದರಿಂದ ನೀರಿನ ಅಗತ್ಯ ರೈತರಿಗಿದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದು ರೈತರ ಜಮೀನಿಗೆ ನೀರು ಹರಿಸುವ ತೀರ್ಮಾನ ಕೈಗೊಂಡರೆ ವಿತರಣಾ ನಾಲೆ ಹಾಗೂ ಹೊಲ ಗಾಲುವೆಗಳು ಇಲ್ಲದಿದ್ದರೂ ರೈತರು ಹರ ಸಾಹಸ ಮಾಡಿ ನೀರನ್ನು ತಮ್ಮ ಹೊಲಗಳಿಗೆ ಹರಿಸಿಕೊಂಡು ಬೆಳೆಯನ್ನು ರಕ್ಷಿಸಿಕೊಳ್ಳಲು ಅವಕಾಶ ಮಾಡಿ ಕೊಟ್ಟಂತಾಗುತ್ತದೆ.ಬರಗಾಲದ ಕರಾಳ ಛಾಯೆ ಆವರಿಸಿದ ಈ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆವಹಿಸಿ ಜಲಾಶಯದ ನೀರು ಕೀ.ಮೀ 40ವರೆಗಿನ ಅಚ್ಚುಕಟ್ಟು ಪ್ರದೇಶದ ಹೊಲಗಳಿಗೆ ಹರಿಸಿದರೆ ತೊಗರಿ ಬೆಳೆಗಾರರು ಬಳಸಿಕೊಳ್ಳುತ್ತಾರೆ. ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಹರಿದಾಡುವುದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ಮೇವಿನ ಬರ ನೀಗಿಸಲು ನೆರವಾಗುತ್ತದೆ.1991ರಲ್ಲಿಯೇ ಜಲಾಶಯದಲ್ಲಿ ನೀರು ನಿಲ್ಲಿಸುವುದು ಪ್ರಾರಂಭವಾಗಿದ್ದು, ಸಣ್ಣಪುಟ್ಟ ಕಾಮಗಾರಿಗಳು ಇಂದಿಗೂ ಬಾಕಿ ಉಳಿದಿವೆ. ಕಳೆದ 40 ವರ್ಷಗಳಿಂದ ಯೋಜನೆ ಇಲ್ಲಿನ ರೈತರಿಗೆ ನೆರವಾಗಿಲ್ಲ.ಪ್ರಸಕ್ತ ವರ್ಷವಾದರೂ ಜನಪ್ರತಿನಿಧಿಗಳು ಸಂಭಾವ್ಯ ಬರಗಾಲ ಹಗುರವಾಗಿ ಪರಿಗಣಿಸದೇ ರೈತರ ಜಮೀನಿಗೆ ನೀರು ಹರಿಸಲು ಪ್ರಯತ್ನಿಸಬೇಕಾಗಿದೆ ಅಲ್ಲಿವರೆಗೆ ಕಾದು ನೋಡೋಣ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.