ಗುರುವಾರ , ನವೆಂಬರ್ 14, 2019
18 °C

ಬಾಡು ರೋಗಕ್ಕೆ ಇಲ್ಲಿದೆ ಮದ್ದು

Published:
Updated:
ಬಾಡು ರೋಗಕ್ಕೆ ಇಲ್ಲಿದೆ ಮದ್ದು

ಟೊಮೆಟೊ ಗಿಡದಲ್ಲಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಕಂದು ಬಣ್ಣದ್ದಾಗುತ್ತಿದೆಯೇ, ಸೌತೆಕಾಯಿ, ಕರಬೂಜ, ಕಲ್ಲಂಗಡಿ ಅಥವಾ ಇನ್ನಾವುದೇ ಬಳ್ಳಿಗಳು ಮಧ್ಯಾಹ್ನದ ಅವಧಿಯಲ್ಲಿ ಸೊರಗಿದಂತೆ ಕಂಡು ಸಂಜೆ ಹೊತ್ತಿಗೆ ಪುನಃ ಆರೋಗ್ಯವಾದಂತೆ ಕಾಣಿಸುತ್ತಿದೆಯೇ...

ಹಾಗಿದ್ದಲ್ಲಿ ಈ ಬೆಳೆಗಳು ಫ್ಯುಸೇರಿಯಂ ಸೊರಗು ರೋಗ (ಬಾಡು ರೋಗ)ಕ್ಕೆ ತುತ್ತಾಗಿವೆ ಎಂದೇ ಅರ್ಥ.ಹೌದು. ಬೇಸಿಗೆ ಕಾಲದಲ್ಲಿ ತರಕಾರಿ ಬೆಳೆಗಳನ್ನು ಕಾಡುವ ಈ ರೋಗ ಬೆಳೆಗಳಿಗೆ ಬಹಳ ಅಪಾಯಕ. ಈ ರೋಗಕ್ಕೆ ತುತ್ತಾದ ಪ್ರದೇಶಗಳಲ್ಲಿ ಶೇ. 70-80ರಷ್ಟು ಬೆಳೆ ಹಾನಿಯಾಗುತ್ತದೆ. ರೈತರು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಸಂಪೂರ್ಣ ನಷ್ಟವೇ ಗತಿ. ರೈತರು ಈ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲೇಬೇಕಾದ ಅವಶ್ಯಕತೆ ಇದೆ.ಏನಿದು ರೋಗ?

ಈ ಬಾಡುರೋಗವು ಬೇರೆ ಬೇರೆ ರೀತಿಯ ಫ್ಯುಸೇರಿಯಂ ಪ್ರಬೇಧಗಳಿಂದ ಬರುತ್ತವೆ. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಫ್ಯುಸೇರಿಯಂ ಆಕ್ಸಿಸ್ಪೋರಮ್. ಇವು ಅತ್ಯಂತ ಪರಿಣಾಮಕಾರಿಯಾದಂತಹ ಶೀಲಿಂಧ್ರ. ಇವು ರೋಗ ತಗುಲಿದ ಕಾಯಿ ಮತ್ತು ಹಣ್ಣುಗಳಲ್ಲಿ ಮತ್ತು ಮಣ್ಣಿನ ಒಳಪದರ ಮತ್ತು ಹೊರಪದರದಲ್ಲಿ ಬದುಕಿರುತ್ತವೆ. ಈ ಸೂಕ್ಷ್ಮಜೀವಿಯು ಮಳೆ ಹನಿ ಹಾಗೂ ಪ್ರತಿನಿತ್ಯ ಬಳಸುವ ಸಲಕರಣೆಗಳಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತವೆ. ಈ ಜೀವಿಗಳು ಸಾಮಾನ್ಯವಾಗಿ ಹೆಚ್ಚು ಉಷ್ಣಾಂಶದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಜೀವಿಗಳು ಹುಳಿ ಅಥವಾ ಕ್ಷಾರ, ಮರಳು ಮಿಶ್ರಿತ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಹಲವು ವರ್ಷಗಳವರೆಗೆ ಮಣ್ಣಿನಲ್ಲಿ ಜೀವಿಸುವ ಸಾಮರ್ಥ್ಯ ಹೊಂದಿವೆ.ಇದರ ಪ್ರಮುಖ ಗುಣ ಎಂದರೆ ಗಿಡಗಳು ಬೆಳಗಿನ/ಮಧ್ಯಾಹ್ನದ ಸಮಯದಲ್ಲಿ ಸೊರಗಿದಂತೆ ಕಾಣುವುದು ಮತ್ತು ರಾತ್ರಿ ಸಮಯದಲ್ಲಿ ಗುಣಮುಖವಾದಂತೆ ಕಾಣಿಸುವುದು. ಈ ತರಹದ ಲಕ್ಷಣಗಳು, ಗಿಡಗಳು ಪೂರ್ತಿಯಾಗಿ ಸೊರಗಿ ಹೋಗುವ ತನಕ ಕಂಡು ಬರುತ್ತವೆ.ನಿಯಂತ್ರಣಕ್ಕೆ ಕ್ರಮ

ಈ ರೋಗ ಬಾರದಂತೆ ಮುಂಜಾಗ್ರತಾ ಕ್ರಮದ ಅಗತ್ಯವಿದೆ. ಅವೆಂದರೆ* ಸಸಿ ಮಡಿಗಳನ್ನು ರೋಗವಿಲ್ಲದ ಮಣ್ಣಿನಲ್ಲಿ ಬೆಳೆಯಬೇಕು ಮತ್ತು ರೋಗರಹಿತ ಬೀಜಗಳಿಂದ ಸಸಿ ಮಡಿಗಳನ್ನು ಬೆಳೆಸಬೇಕು.

* ರೋಗಪೀಡಿತ ಗಿಡಗಳಿಂದ ನೀರನ್ನು ಇತರೆ ಆರೋಗ್ಯಕರ ಗಿಡಗಳಿಗೆ ಹರಿಯದಂತೆ ತಡೆಗಟ್ಟುವುದು.

* ಬೆಳೆ ಬದಲಾವಣೆಗೆ ಜೋಳ ಅಥವಾ ರಾಗಿಯನ್ನು ಬೆಳೆಯಬೇಕು ಮತ್ತು ಕನಿಷ್ಠ 5 ರಿಂದ 6 ವರ್ಷಗಳ ಕಾಲ ಆ ಭೂಮಿಯಲ್ಲಿ ಬೇರೆ ಬೆಳೆಯನ್ನು ಬೆಳೆಯಬೇಕು.

* ರೋಗಾಣು ಮಣ್ಣಿನ ಮೇಲ್ಪದರದಲ್ಲಿ ಬದುಕುವುದರಿಂದ ಹೆಚ್ಚು ತೇವಾಂಶ ಇಲ್ಲದಂತೆ ಮಣ್ಣನ್ನು ನೋಡಿಕೊಳ್ಳಬೇಕು.

* ಬೇಸಿಗೆ ಕಾಲದಲ್ಲಿ ಪಾಲಿಥಿನ್ ಹೊದಿಕೆಯನ್ನು ಮಣ್ಣಿಗೆ ಹೊದಿಸುವುದರಿಂದ ಈ ರೋಗ ತಡೆಗಟ್ಟಬಹುದು.

 

ಪ್ರತಿಕ್ರಿಯಿಸಿ (+)