ಗುರುವಾರ , ಜೂನ್ 24, 2021
27 °C
ಹಳೇ ದಾವಣಗೆರೆ ಭಾಗದಲ್ಲಿ ಗಡಿಬಿಡಿ, ನೆಂಟರಿಷ್ಟರ ಆಗಮನ

ಬಾಡೂಟಕ್ಕೆ ತಯಾರಿ: ಕುರಿನಾ... ಕೋಳಿನಾ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರ ದೇವತೆ ದುಗ್ಗಮ್ಮನ ಜಾತ್ರೆಯ ‘ಮಹಾಪೂಜೆ’ಗೆ ಅಂತಿಮ ಸುತ್ತಿನ ತಯಾರಿಗಳು ಮುಕ್ತಾಯಗೊಂಡಿವೆ. ಸುಣ್ಣಬಣ್ಣ ಬಳಿದುಕೊಂಡ ಮನೆಗಳಿಗೆ ನೆಂಟರಿಷ್ಟರ ಆಗಮನವಾಗಿದೆ. ಭರ್ಜರಿ ಬಾಡೂಟಕ್ಕೆ ಪಾತ್ರೆಗಳ ಸಿದ್ಧತೆಗಳೂ ನಡೆದಿವೆ. ದಾವಣಗೆರೆಗೆ ಬರುವ ರೈಲು, ಬಸ್‌ಗಳು ಸೋಮವಾರ ಭರ್ತಿಯಾಗಿ ಇದ್ದವು. ಎಲ್ಲೆಡೆ ಗಡಿಬಿಡಿ, ಸಂಭ್ರಮದ ವಾತಾವರಣ ಕಂಡುಬರುತ್ತಿದೆ...ಸೋಮವಾರ ದೇವಸ್ಥಾನದಲ್ಲಿ ಜಾತ್ರೆಯ ಅಂಗವಾಗಿ ಎರಡನೇ ದಿನದ ಕಾರ್ಯಕ್ರಮಗಳು ನಡೆದವು. ದೂರದ ಊರಿಂದ ಬಂದಿದ್ದ ಭಕ್ತರು, ದೇವಿಯ ದರ್ಶನ ಪಡೆದು ಪುನೀತರಾದರು. ದೇವಿಗೆ ಉಡಿ ತುಂಬುವುದು, ಮಹಾಪೂಜೆ ಹಾಗೂ ಮಂಗಳಾರತಿ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು. ದೇಗುಲದ ಮುಂಭಾಗದಲ್ಲಿ ನಿರ್ಮಿಸಿರುವ ಮಹಾಮಂಟಪದ ಅಡಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ಮನೆಯಲ್ಲಿ ನೆಂಟರು...: ಎರಡು ವರ್ಷಗಳಿಗೊಮ್ಮೆ ನಡೆಯುವ ದುರ್ಗಾಂಬಿಕಾ ದೇವಿಯ ಜಾತ್ರೆಗೆ ರಾಜ್ಯದ ನಾನಾ ಮೂಲೆಗಳಿಂದ ನೆಂಟರು ಬಂದಿದ್ದಾರೆ. ಮನೆಯಲ್ಲಿ ಸಂಭ್ರಮ ಮೇರೆ ಮೀರಿದೆ. ಬೇವಿನುಡುಗೆ ಸೇವೆ ಹರಕೆ ಹೊತ್ತವರೂ ಮಂಗಳವಾರ ರಾತ್ರಿ ಹರಿಕೆ ತೀರಿಸಲು ಕಾತರರಾಗಿದ್ದಾರೆ. ಇನ್ನೂ ಮನೆಗೆ ಬಂದಿರುವ ನೆಂಟರನ್ನು ಸಂತೃಪ್ತಿಗೊಳಿಸಲು ಕುರಿ, ಟಗರುಗಳು ಮನೆಯ ಮುಂದೆ ಬೀಡುಬಿಟ್ಟಿವೆ. ಅವುಗಳಿಗೆ ಹುಲ್ಲು– ಸೊಪ್ಪು ಹಾಕಿ ಕೊಬ್ಬಿಸಲಾಗುತ್ತಿದೆ. ಜತೆಗೆ, ಬಾಡೂಟಕ್ಕೆ ಪಾತ್ರೆ, ಒಲೆ, ಚಾಕು ಹೊಂದಿಸುವ ತಯಾರಿಯೂ ನಡೆಯುತ್ತಿದೆ.ಬಡವರು, ಶ್ರೀಮಂತರ ಸಮಾನಾಂತರವಾಗಿ ಖರ್ಚು ಮಾಡುವ ಹಬ್ಬ ಇದಾಗಿದೆ. ಪ್ರತಿ ಕುಟುಂಬದಲ್ಲೂ ಕನಿಷ್ಠ ₨ 50 ಸಾವಿರ ಖರ್ಚು ಮಾಡುತ್ತಾರೆ. ಉಳಿದವರು ತಮ್ಮ ಅಂತಸ್ತಿಗೆ ಅನುಗುಣವಾಗಿ ಅದರ ಖರ್ಚು ಏರಿಕೆಯಾಗುತ್ತದೆ. ಅದು ₨ 1 ಲಕ್ಷವನ್ನೂ ಮುಟ್ಟಬಹುದು! ₨ 15, ₨ 20 ಹಾಗೂ ₨ 25 ಸಾವಿರವರೆಗೂ ಕುರಿ, ಟಗರು ಕೊಂಡು ತಂದಿದ್ದಾರೆ. ಕುರಿ– ಕೋಳಿಗಳ ಬಲಿ ಮಂಗಳವಾರ ರಾತ್ರಿಯಿಂದಲೇ ನಡೆಯಲಿದ್ದು, ಬುಧವಾರ ಮಧ್ಯಾಹ್ನ ಬಾಡೂಟ ಎಲ್ಲೆಡೆ ಕಂಡುಬರಲಿದೆ.ಮಾಂಸದ ಅಂಗಡಿಗಳು ಬಂದ್‌: ಹಳೇ ದಾವಣಗೆರೆ ಭಾಗದಲ್ಲಿ ಇರುವ ಮಟನ್‌ ಸ್ಟಾಲ್‌ ಹಾಗೂ ಕೋಳಿ ಮಾಂಸದ ಮಾರಾಟದ ಅಂಗಡಿಗಳಿಗೆ ಸೋಮವಾರ ವ್ಯಾಪಾರ ಇರಲಿಲ್ಲ. ಬುಧವಾರ ಪ್ರತಿ ಮನೆಯಲ್ಲೂ ಮಾಂಸದೂಟ ಇರುವ ಕಾರಣಕ್ಕೆ ಯಾರೂ ಕೊಳ್ಳಲು ಮನಸ್ಸು ಮಾಡಲಿಲ್ಲ! ಕೋಳಿ– ಮಟನ್‌ ವಹಿವಾಟು ಬಹುತೇಕ ಬಂದ್‌

ಆಗಿತ್ತು.ದೇಗುಲದ ಸುತ್ತ...

ದೇವಸ್ಥಾನದ ಸುತ್ತಮುತ್ತ ಈಗಾಗಲೇ ಹಣ್ಣು ಕಾಯಿ ಅಂಗಡಿ, ಹೂವಿನ ವ್ಯಾಪಾರ, ಬಳೆ ವ್ಯಾಪಾರ, ಖಾರ ಮಂಡಕ್ಕಿ, ಸಿಹಿ ತಿನಿಸುಗಳ ಅಂಗಡಿಗಳು ಬೀಡುಬಿಟ್ಟಿವೆ.ಪೊಲೀಸ್‌ ಬಂದೋಬಸ್ತ್‌: ದೇಗುಲದ ಮುಂಭಾಗದಲ್ಲಿ ತಾತ್ಕಾಲಿಕ ಪೊಲೀಸ್‌ ಠಾಣೆ ತೆರೆಯಲಾಗಿದೆ. ಎಲ್ಲೆಡೆ ಬಂದೋಬಸ್ತ್‌ ಕಲ್ಪಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.