ಬಾಣಂತಿ-ಮಗುವಿಗೆ `ಹ್ಯಾಪಿ ಡ್ರಾಪ್'

7

ಬಾಣಂತಿ-ಮಗುವಿಗೆ `ಹ್ಯಾಪಿ ಡ್ರಾಪ್'

Published:
Updated:

ದಾವಣಗೆರೆ: ಹೆರಿಗೆ ನೋವು ಕಾಣಿಸಿಕೊಂಡವರನ್ನು ಆಸ್ಪತ್ರೆಗೆ ಕರೆತರಲು ಇರುವ `108' ಸೇವೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಬಾಣಂತಿ ಹಾಗೂ ಮಗುವನ್ನು ಮನೆಗೆ ಸುರಕ್ಷಿತವಾಗಿ ತಲುಪಿಸಲು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿಯೂ `ಹ್ಯಾಪಿ ಡ್ರಾಪ್' ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.ನಗರದ ಸಿ.ಜಿ. ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಪ್ರಸ್ತುತ, ಹೆರಿಗೆಗಾಗಿ ಆಸ್ಪತ್ರೆಗೆ ಕರೆತರಲು `108' ಸೇವೆ ನೀಡಲಾಗುತ್ತಿದೆ. ಹೆರಿಗೆ ನಂತರ, ಅವರೇ ವಾಹನದ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಇದನ್ನು ತಪ್ಪಿಸಲು, ತಾಯಿ ಹಾಗೂ ಮಗುವನ್ನು ಗಾಳಿ, ಮಳೆಯಿಂದ ರಕ್ಷಿಸಿ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಮನೆಗೆ ಬಿಡಲಾಗುವುದು. ಈ ವ್ಯವಸ್ಥೆ ಗುಜರಾತ್‌ನಲ್ಲಿ ಜಾರಿಯಲ್ಲಿದೆ ಎಂದು ಹೇಳಿದರು.ಆನ್‌ಲೈನ್‌ನಲ್ಲಿ ಔಷಧಿ ಮಾಹಿತಿ

ರಕ್ತನಿಧಿಯಲ್ಲಿ ಎಷ್ಟು ಲಭ್ಯತೆ-ಕೊರತೆ ಇದೆ ಎಂಬ ಮಾಹಿತಿಯುಳ್ಳ ವ್ಯವಸ್ಥೆಯನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ. ಇದೇ ಮಾದರಿ, ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಷ್ಟು ಔಷಧಿ ಲಭ್ಯತೆ ಇದೆ, ಕೊರತೆ ಎಷ್ಟಿದೆ? ಎಂಬುದನ್ನು ವೀಕ್ಷಿಸುವ ವ್ಯವಸ್ಥೆ ಜಾರಿಗೊಳಿಸಲಾಗುವುದು. ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸುವುದರಿಂದ, ಕೊರತೆಯನ್ನು ಶೀಘ್ರವೇ ನಿವಾರಿಸಬಹುದು. ಈ ವ್ಯವಸ್ಥೆ ಶೀಘ್ರವೇ ಆರಂಭವಾಗಲಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.ನರ್ಸ್ ಮತ್ತು `ಡಿ' ಗ್ರೂಪ್ ನೌಕರರ ಹುದ್ದೆಗಳನ್ನು ಶೀಘ್ರವೇ ತುಂಬಿಕೊಳ್ಳಲಾಗುವುದು. ರಾಜ್ಯದ ಆಸ್ಪತ್ರೆಗಳಲ್ಲಿ 155 ಎಂಬಿಬಿಎಸ್ ಹಾಗೂ 1,111 ತಜ್ಞ ವೈದ್ಯರ ಕೊರತೆ ಇದೆ. ವೈದ್ಯರನ್ನು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವೈದ್ಯರು ವಿದೇಶಕ್ಕೋ ಅಥವಾ ಖಾಸಗಿ ನರ್ಸಿಂಗ್ ಹೋಂಗಳನ್ನು ಮಾಡುವುದಕ್ಕೋ ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ. ಇದರಿಂದ ಕೊರತೆ ಉಂಟಾಗುತ್ತಿದೆ ಎಂದರು.ಲಕ್ಷ ಕೊಡ್ತೀವಿ ಎಂದರೂ ಬಾರದ ವೈದ್ಯರು!

ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವಷ್ಟು ವೇತನವನ್ನು ಕೊಡಲು ಸಾಧ್ಯವಿಲ್ಲ. ಗೌರವಯುತ ವೇತನ ನೀಡಲಾಗುವುದು. ಉಪನ್ಯಾಸಕರಿಗೆ ಯುಜಿಸಿ ವೇತನದ ಮಾದರಿಯಲ್ಲಿ ವೈದ್ಯರಿಗೂ ವೇತನ ಕೊಡಿಸಬೇಕು ಎಂಬ ಉದ್ದೇಶ ಇದೆ. ಎಂದು ತಿಳಿಸಿದರು.ಹೊಸದಾಗಿ ವೈದ್ಯ ಕೋರ್ಸ್ ಮುಗಿಸಿದವರು ಕಡ್ಡಾಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತು ಜಾರಿಗೊಳಿಸಿರುವುದರಿಂದ, ವೈದ್ಯರ ಕೊರತೆ ಸ್ವಲ್ಪಪ್ರಮಾಣದಲ್ಲಿ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸರ್ಕಾರಿ ವೈದ್ಯ ಕಾಲೇಜು ಶುರು ಮಾಡುವುದಾದರೆ, ಜಿಲ್ಲಾಸ್ಪತ್ರೆಯ ವೈದ್ಯಕೀಯ ಸೇವೆ ಪಡೆದುಕೊಂಡರೆ ಸಾಕು. ಆಸ್ಪತ್ರೆಯನ್ನೇ ಕಾಲೇಜಿಗೆ ಹಸ್ತಾಂತರ ಮಾಡುವ ಅಗತ್ಯವಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ತಿಳಿಸಿದೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry