ಗುರುವಾರ , ಮೇ 13, 2021
18 °C

ಬಾಣಾವರಕ್ಕೆ ವರುಣನ ಅವಕೃಪೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಣಾವರ: ಹೋಬಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಾರಿ ಸಕಾಲದಲ್ಲಿ ಮಳೆಯಾಗದೇ ಇದ್ದರಿಂದ ಸಂಪೂರ್ಣ ಬರ ಪೀಡಿತ ಪ್ರದೇಶವಾಗಿದೆ.ಬಾಣಾವರ ಹೋಬಳಿಯಲ್ಲಿ 90 ಕಂದಾಯ ಗ್ರಾಮಗಳಿದ್ದು, ಈ ಭಾಗಗಳ ಕಂದಾಯ ಜಮೀನು 65 ಸಾವಿರದಿಂದ 70 ಸಾವಿರ ಎಕರೆಗಳಷ್ಟಿದೆ. ಇಲ್ಲಿನ ರೈತರು ಈ ಜಮೀನುಗಳಲ್ಲಿ ಅನಾದಿ ಕಾಲದಿಂದಲೂ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡುತ್ತಿದ್ದಾರೆ.ಆದರೆ, ಈ ಭಾಗದ ರೈತರ ದುರಾದೃಷ್ಟ ದಶಕಗಳಿಂದಲೂ ಮುಂದುವರಿದೇ ಇದೆ. ಇಲ್ಲಿ ಸಕಾಲಕ್ಕೆ ಮಳೆ ಬಾರದೆ, ಬೆಳೆಯೂ ಆಗದೆ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮಳೆಯಿಲ್ಲದೇ ಇದ್ದರಿಂದ ವಾಣಿಜ್ಯ ಬೆಳೆಗಳಾದ ಸೂರ್ಯಕಾಂತಿ, ಎಳ್ಳು, ತೊಗರಿ ಬೆಳೆಯಲು ರೈತರಿಗೆ ಸಾಧ್ಯ ವಾಗಿಲ್ಲ. ಇಲ್ಲಿನ ಜಮೀನುಗಳಲ್ಲಿ ಈಗ ರಾಗಿ ಬಿಟ್ಟು ಮತ್ಯಾವ ಬೆಳೆಯು ಬೆಳೆಯದಂತ ಪರಿಸ್ಥಿತಿ ಇದೆ.ಸಕಾಲಕ್ಕೆ ಮಳೆ ಬಾರದ ಪರಿಣಾಮ ಇಲ್ಲಿರುವ ಕೆರೆ-ಕಟ್ಟೆಗಳು ಸರಿಯಾಗಿ ತುಂಬದೇ ಪಶು ಪಕ್ಷಿಗಳಿಗೂ ನೀರು ಆಹಾರ ದೊರೆಯದೆ ಈ ಪ್ರದೇಶವು ಬರಗಾಲ ಪೀಡಿತವೆಂಬ ಹಣೆಪಟ್ಟಿ ಹೊಂದಿ ದಶಕಗಳೇ ಕಳೆದಿದೆ.ಸರಿಯಾಗಿ ಮಳೆ ಬಾರದ ಹಿನ್ನಲೆಯಲ್ಲಿ ಇಲ್ಲಿನ ಅಂತರ್ಜಲದ ಮಟ್ಟ ಕುಸಿದು ಕೊಳವೆ ಬಾವಿಗಳಲ್ಲೂ ನೀರು ಬರುತ್ತಿಲ್ಲ. ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. ಇಂತಹ ಸ್ಥಿತಿ ಇರುವಾಗ ರೈತರು ಕೃಷಿ ಮಾಡುವುದನ್ನೇ ಬಿಟ್ಟು ದೂರದ ಬೆಂಗಳೂರು, ಹುಬ್ಬಳಿ, ದಾವಣಗೆರೆ, ಶಿವಮೊಗ್ಗ ಮುಂತಾದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.ಬಾಣಾವರ ಹೋಬಳಿಗೆ ಯಗಚಿ ಅಣೆಕಟ್ಟೆ ಹತ್ತಿರವಿರುವುದರಿಂದ ಇಲ್ಲಿಂದ ನೀರು ಒದಗಿಸಿಕೊಡುವ ಬಗ್ಗೆ 1980ರಲ್ಲಿಯೇ ತಿರ್ಮಾನಿಸಲಾಗಿತ್ತು.ಬೇಲೂರು ಎಡದಂಡೆ ನಾಲೆಯಿಂದ ಹೆಬ್ಬಾಳು, ಬಸವನಕುಂದ, ಹಳೇಬೀಡು, ಕುರುಬರಬೂದಿಹಾಳ್, ಜಾವಗಲ್, ನೇರ‌್ಲಿಗೆ, ಹೀರೆಕಟ್ಟೆ ಒಡ್ಡು ಮಾರ್ಗವಾಗಿ ಬಾಣಾವರಕ್ಕೆ ಹಾಯಿವಾಳಿ ನಾಲೆಯನ್ನು ನಿರ್ಮಿಸಲು ಅಂದಿನ ಸರ್ಕಾರ ನೀಲನಕ್ಷೆ ಸಿದ್ಧಪಡಿಸಿತ್ತು.ನಂತರ ಸರ್ಕಾರ ಬದಲಾದ ಹಾಗೇ ನೀಲನಕ್ಷೆಯು ಬದಲಾಗಿ ನಾಲೆಯ ಮಾರ್ಗ ಹೊಳೆನರಸೀಪುರ ದಾರಿ ಹಿಡಿದ ಪರಿಣಾಮ ಬಾಣಾವರ ಹೋಬಳಿಯ ರೈತರ ನೀರಾವರಿ ಕನಸಿಗೆ ಕಲ್ಲುಬಿತ್ತು.1995-96ರಲ್ಲಿ ಜಾವಗಲ್ ಮತ್ತು ಬಾಣಾವರ ಹೋಬಳಿಯಲ್ಲಿ ಪಾದಯಾತ್ರೆ ಮಾಡಿದ ಆಗಿನ ವಿರೋದಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಬಾಣಾವರ ಹೋಬಳಿಯ ರೈತರಿಗೆ ಆದ ಆನ್ಯಾಯವನ್ನು ಮನಗಂಡು ಈ ಭಾಗದ ಕೃಷಿ ಚಟುವಟಿಕೆಗೆ ಸಹಾಯವಾಗುವ ಸಲುವಾಗಿ ಹಾಯಿವಾಳಿ ನಾಲೆಯನ್ನು ಕೊಡಿಸುವ ಭರವಸೆ ನೀಡಿದ್ದರು. ಅದರೆ, ಮುಂದೆ  ಅವರೇ ಮುಖ್ಯಮಂತ್ರಿ ಯಾದರೂ ರೈತರ ಬವಣೆ ನೀಗಿಲ್ಲ. ಬಾಣಾವರ ಹೋಬಳಿಯ ರೈತರ ಕಷ್ಟವನ್ನರಿಯಬೇಕಾಗಿದೆ.ಇಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ನಿಲ್ಲುವ ಮುನ್ನ ಹಾಯಿವಳಿ ನಾಲೆ ನೀರನ್ನು ಒದಗಿಸಿ ಕೊಡುವಂತೆ ಹೋಬಳಿಯ ರೈತರು ಒಕ್ಕೂರಲಿನಿಂದ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.