ಬಾದಾಮಿಯಲ್ಲಿ ವಿದೇಶಿಯರ ಸಾಹಸ

7

ಬಾದಾಮಿಯಲ್ಲಿ ವಿದೇಶಿಯರ ಸಾಹಸ

Published:
Updated:

ಬಾಗಲಕೋಟೆ: ವಿದೇಶಿ ಯುವಕರ ತಂಡವೊಂದು ಗುರುವಾರ ವಿಶ್ವಪ್ರಸಿದ್ಧ ಬಾದಾಮಿಯ ಕಡಿದಾಡ ಬೆಟ್ಟ ಏರುವ ರೋಮಾಂಚನಕಾರಿ ಸಾಹಸ ಪ್ರದರ್ಶಿಸಿದರು.ಬಾದಾಮಿಯ ಗುಡ್ಡದ ರಂಗನಾಥ ದೇವಾಲಯದ ಬಳಿ ವಿದೇಶಿ ಯುವಕರು 80ರಿಂದ 150 ಅಡಿ ಎತ್ತರದ ಕಡಿದಾದ ಬೆಟ್ಟದ ತುತ್ತ ತುದಿಯಿಂದ ಕೆಳಗೆ ಧುಮ್ಮಿಕ್ಕಿದರು. ಕೈಯಲ್ಲಿ ಹಗ್ಗ ಹಿಡಿದುಕೊಂಡು ಹಕ್ಕಿಯಂತೆ ಹಾರಾಡಿದರು. ಕಾಲನ್ನು ಹಗ್ಗಕ್ಕೆ ಕಟ್ಟಿಕೊಂಡು ತಲೆ ಕೆಳಗೆ ಮಾಡಿ ನೇತಾಡಿದರು. ಅಕ್ಷರಶಃ ಮಂಗನಂತೆ ಕಲ್ಲಿನಿಂದ ಕಲ್ಲಿಗೆ ಜಿಗಿಯುವ ಮೂಲಕ ನೋಡುಗರ ಮೈ ಜುಮ್ಮೆನಿಸಿದರು.ಅಂತರರಾಷ್ಟ್ರೀಯ ರಾಕ್ ಅಡ್ವೆಂಚರ್ ಕ್ಲಬ್ ಸದಸ್ಯರಾದ ಕೆನಡಾದ ನಾಥನ್ ಹಾಲ್, ಇಟಲಿಯ ರಿಕಾಡೋ ಮೊನೆಟ್ಟಾ, ಸ್ಲೋವೆಕಿಯಾದ ಝರೋಸ್ಲಾವ್ ಮತ್ತು ಇಸ್ರೇಲ್‌ನ ಗಾಲ್ ಕೋಹೆನ್, ರೋಪ್ ಮತ್ತು ಹುಕ್ಸ್‌ಗಳ ಸಹಾಯದಿಂದ ಅಪಾಯವನ್ನು ಲೆಕ್ಕಿಸದೇ ಬೆಟ್ಟ ಏರುವ ಸಾಹಸ ಪ್ರದರ್ಶಿಸಿದರು.ಈ ಕುರಿತು `ಪ್ರಜಾವಾಣಿ'ಗೆ ಮಾಹಿತಿ ನೀಡಿದ ಬಾದಾಮಿ ಮಾರ್ಗದರ್ಶಿ (ಗೈಡ್) ಇಷ್ಟಲಿಂಗ ಶಿರಸಿ, ವಿಶ್ವದ ಪ್ರಮುಖ 10 ಬೆಟ್ಟ ಹತ್ತುವ ತಾಣಗಳಲ್ಲಿ ಬಾದಾಮಿ ಒಂದಾಗಿದ್ದು, ಇಲ್ಲಿಗೆ ಪ್ರತೀ ವರ್ಷ ದೇಶ-ವಿದೇಶದಿಂದ ನೂರಾರು ಸಾಹಸಿಗರು ಆಗಮಿಸಿ, ಸಾಹಸ ಪ್ರದರ್ಶನ ನೀಡುತ್ತಾರೆ ಎಂದರು.ಭಾರತೀಯ ಸೇನೆಯ ಮದ್ರಾಸ್ ಮತ್ತು ಮರಾಠ ರೆಜಿಮೆಂಟ್ ಸಾಹಸಿ ಸೈನಿಕರು ಮೂರು ವರ್ಷದ ಹಿಂದೆ ಬಾದಾಮಿ ಬೆಟ್ಟವನ್ನು ಏರುವ ಸಾಹಸ ಪ್ರದರ್ಶನ ಮಾಡಿದ ಬಳಿಕ ಸಾಹಸ ಪ್ರದರ್ಶನದ ವಿಡಿಯೋ ತುಣುಕುಗಳನ್ನು ವೆಬ್, ಗೂಗಲ್‌ನಲ್ಲಿ ಹರಿಬಿಟ್ಟಿದ್ದು, ಇದನ್ನು ನೋಡಿದ ಬಳಿಕ ವಿಶ್ವದ ಪ್ರಮುಖ ಸಾಹಸಿಗರು ಬಾದಾಮಿಯತ್ತ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry