ಬಾನಂಗಳದಲ್ಲಿ ಹೊಸ ಜಗತ್ತು ಸೃಷ್ಟಿ!

ಮಂಗಳೂರು: ಎಂದೂ ನೀರಿನಲ್ಲಿ ಇರುತ್ತಿದ್ದ ಮೀನುಗಳು, ಆಕ್ಟೋಪಸ್, ಜೆಲ್ಲಿಮೀನುಗಳು ನಭದಲ್ಲಿ ತೇಲುತ್ತಿದ್ದವು. ಭೂಮಿಯ ಮೇಲೆ ನಿತ್ಯವೂ ಭಾರ ದೇಹದಿಂದ ಹೆಜ್ಜೆ ಹಾಕುತ್ತಿದ್ದ ಹಸುವೂ ಹಾರುತ್ತಿತ್ತು. ಇನ್ನು ಎಂದೂ ಆಗಸದಲ್ಲಿ ಹಾರಾಡುವ ಪಕ್ಷಿಗಳು ದಾರದ ಅಂಚಿನಲ್ಲಿದ್ದು ಕೊಂಡು ಕವಾಯತು ನಡೆಸುತ್ತಿದ್ದವು.
ಇವು ಯಾವುದೋ ಲೋಕದ ಸೃಷಿಯಲ್ಲ. ಬದಲಿಗೆ ನಗರದ ಹೊರ ವಲಯ ಪಣಂಬೂರು ಕಡಲತೀರದಲ್ಲಿ ಶನಿವಾರ ಆರಂಭಗೊಂಡ ಅಂತರ ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪ್ರಾಣಿ–ಪಕ್ಷಿಗಳ ಮಾದರಿಯ ಗಾಳಿಪಟ ಗಳು ಬಾನಂಗಳದಲ್ಲಿ ಮೂಡಿಸಿದ ಬಗೆ ಬಗೆಯ ಚಿತ್ತಾರದ ಸೃಷ್ಟಿ. ಇದನ್ನು ಕಂಡ ಸಾವಿರಾರು ಜನರು ನಿಬ್ಬೆರಗಾಗಿ, ಪುಳಕಿತಗೊಂಡರು.
‘ಸಮಾನತೆ ಮತ್ತು ಏಕತೆ’ ಎಂಬ ದೃಷ್ಟಿಕೋನದಿಂದ ‘ಒಂದೇ ಆಕಾಶ, ಒಂದೇ ನೆಲ, ಒಂದೇ ಕುಟುಂಬ’ ಎಂಬ ಧ್ಯೇಯದೊಂದಿಗೆ ಆಯೋಜಿಸ ಲಾಗಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಫ್ರಾನ್ಸ್, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ, ಟರ್ಕಿ, ನೆದರ್ಲ್ಯಾಂಡ್, ಕಾಂಬೋಡಿಯಾ, ಉಕ್ರೇನ್, ಸಿಂಗಾಪುರ, ಕುವೈತ್, ಥಾಯ್ಲೆಂಡ್, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 13 ರಾಷ್ಟ್ರಗಳ ಗಾಳಿಪಟ ತಂಡಗಳು ಭಾಗವಹಿಸಿದ್ದವು.
‘ಮಕ್ಕಳೊಂದಿಗೆ ಇಲ್ಲಿ ಭೇಟಿ ನೀಡಿದ್ದೇನೆ. ಅವರಿಗೂ ಗಾಳಿಪಟ ತಯಾರಿಸಲು ಕಲಿಸಿದ್ದೇನೆ. ಗಾಳಿಪಟ ಖರೀದಿಸಿರುವ ಮಕ್ಕಳು ಅವುಗಳನ್ನು ಹಾರಿಸಲು ತುದಿಗಾಲ ಮೇಲೆ ನಿಂತಿದ್ದಾರೆ’ ಎಂದು ಒಂದು ಕೈಯಲ್ಲಿ ಗಾಳಿ ಪಟ, ಸೂತ್ರದ ದಾರ ಮತ್ತು ಇನ್ನೊಂದು ಕೈಯಲ್ಲಿ ಮಗನನ್ನು ಹಿಡಿದುಕೊಂಡಿದ್ದ ಶಿವಭಾಗ್ ನಿವಾಸಿ ಪ್ರಕಾಶ್ ಹೇಳಿದರು.
ಗಾಳಿಪಟ ಹಾರಿಸುವವರಿಗಾಗಿ ನಿರ್ಮಿಸಲಾಗಿದ್ದ ಗ್ಯಾಲರಿಯಲ್ಲಿ ವ್ಯಕ್ತಿಯೊಬ್ಬರು ಚಿಕ್ಕ ಚಿಕ್ಕ ಕಟ್ಟಿಗೆಗಳನ್ನು ಕೆತ್ತಿ ಅವುಗಳಿಗೆ ನೀರು ಕುರಿಯುವ ಸ್ಟ್ರಾಗಳನ್ನು ಅಳವಡಿಸುತ್ತಿದ್ದರು. ಅವರನ್ನು ಮಾತಿಗೆಳೆದಾಗ, ‘ಹೆಸರು ಬಾಬ್ ಸಿ. ವಯಸ್ಸು 62, ಬ್ರಿಟನ್ನಿಂದ ಬಂದಿದ್ದೇನೆ. ಮಂಗಳೂರಿಗೆ ಐದನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ.
ಸ್ಟ್ರಾಗಳನ್ನು ಕಟ್ಟಿಗೆಗೆ ಜೋಡಿಸಿ ನೋಡಿದಾಗ ಗಾಳಿಯ ದಿಕ್ಕು ಗೊತ್ತಾಗುತ್ತದೆ. ಇಲ್ಲಿ ಬರುವ ಜನರಿಗೆ ಅದನ್ನು ನೀಡುತ್ತೇನೆ. ಆಗ ಅವರ ಮುಖದಲ್ಲಿ ಮೂಡುವ ಮಂದಹಾಸದಿಂದಲೇ ಮನ ತುಂಬುತ್ತದೆ’ ಎಂದು ಹೇಳಿದರು.
ಇನ್ನು ಪೆಟ್ಟಿಗೆಯಂತಿದ್ದ ಗಾಳಿಪಟ ವನ್ನು ಹಾರಿಸುವವರನ್ನು ಮಾತಿಗೆಳೆದರೆ ಅವರು ಭಾರತದಲ್ಲಿ ಹುಟ್ಟಿ 1967ರಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಮೈಕಲ್ ಅಲ್ವಾರಿಸ್ ಎಂದು ಗೊತ್ತಾಯಿತು. ‘ಇಂದು ನನ್ನ ದೇಶದ ಪೆಟ್ಟಿಗೆಯ ಗಾಳಿಪಟವನ್ನು ಹಾರಿಸುತ್ತಿದ್ದೇನೆ. ಇದರಲ್ಲಿ 23 ಪೆಟ್ಟಿಗೆಗಳಿವೆ. ಈ ತರಹದ ಗಾಳಿಪಟಗಳು ನನ್ನ ದೇಶದಲ್ಲಿ ಮಾತ್ರ ಸಿಗುತ್ತವೆ’ ಎಂದು ವಿವರಿಸಿದರು.
‘ನಾನು 32 ವರ್ಷಗಳಿಂದ ಆಸ್ಟ್ರೇ ಲಿಯಾದಲ್ಲಿ ಗಾಳಿಪಟ ತಯಾರಿಕೆಯ ಪಾಠ ಮಾಡುತ್ತಿದ್ದೇನೆ. ಅದೇ ನನ್ನ ವೃತ್ತಿ. ಈ ಉತ್ಸವದ ಅಂಗವಾಗಿ ನಾಲ್ಕು ದಿನ ಮುಂಚಿತವಾಗಿಯೇ ಇಲ್ಲಿಗೆ ಬಂದಿದ್ದೇನೆ. ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಗಾಳಿಪಟ ತಯಾರಿಕೆಯ ಬಗ್ಗೆ ಕಾರ್ಯಾಗಾರ ನಡೆಸಿದ್ದೇನೆ. ಇಲ್ಲಿ ಬರಲು ತುಂಬಾ ಖುಷಿಯಾಗುತ್ತದೆ’ ಎಂದು ಹೇಳಿದರು.
ಮುಂಬೈನ ಅಶೋಕ್ ಡಿಸೈನರ್ ಕೈಟ್ಸ್ನ ಆರು ಜನರ ತಂಡ 5–6 ಗಾಳಿ ಪಟಗಳನ್ನು ಹಾರಿಸುತ್ತಿತ್ತು. ತಂಡದ ನಾಯಕ ಅಶೋಕ್ ಅವರು ಮಾತ ನಾಡಿ, ‘ನಾನು ಅನೇಕ ಕಡೆ ನಡೆದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಮೊದಲನೆ ಸ್ಥಾನವನ್ನು ಪಡೆದುಕೊಂಡಿದ್ದೇನೆ.
1,100 ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಗಾಳಿಪಟ ತಯಾರಿಕೆಯ ಪಾಠ ಮಾಡಿ ಲಿಮ್ಕಾ ಬುಕ್ ರಿಕಾರ್ಡ್ಗೆ ಸೇರಿದ್ದೇನೆ. ಮಂಗಳೂರಿನ ಗಾಳಿಪಟ ಉತ್ಸವ ವ್ಯವಸ್ಥಿತವಾಗಿ ನಡೆಯುತ್ತದೆ. ಇಲ್ಲಿ ನಡೆಯುವ ಉತ್ಸವದಲ್ಲಿ ನನ್ನ ವೈಯಕ್ತಿಕ ಖುಷಿಗಾಗಿಯೇ ಭಾಗವಹಿಸುತ್ತೇನೆ’ ಎಂದು ಹೇಳಿದರು. ಪಶ್ಚಿಮದಿಂದ ಬರುತ್ತಿದ್ದ ಆಹ್ಲಾ ದಕರ ಗಾಳಿ, ಸಂಗೀತದ ಕಲರವ ಅದ್ಬುತ ವಾತಾವರಣ ಸೃಷ್ಟಿಯಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.