ಬಾನಂಗಳದಿ ಬಣ್ಣದ ಬೆಡಗ ನೋಡಿದಿರಾ

7

ಬಾನಂಗಳದಿ ಬಣ್ಣದ ಬೆಡಗ ನೋಡಿದಿರಾ

Published:
Updated:
ಬಾನಂಗಳದಿ ಬಣ್ಣದ ಬೆಡಗ ನೋಡಿದಿರಾ

 ಬೆಂಗಳೂರು: ಅದು ಕೇವಲ ವಿಮಾನಗಳ ಹಾರಾಟ ಮಾತ್ರವಲ್ಲ; ಅಲ್ಲಿನ ಬಾನಂಗಳದಲ್ಲಿ ಕಂಡುಬಂದಿದ್ದು ಲೋಹದ ಹಕ್ಕಿಗಳು ರಚಿಸಿದ ವರ್ಣರಂಜಿತ ಚಿತ್ತಾರ. ದೇಶವಿದೇಶಗಳ ಸಹಸ್ರಾರು ಪ್ರತಿನಿಧಿಗಳ ನೆತ್ತಿಯ ಮೇಲೆ ವಿವಿಧ ಮಾದರಿಯ, ಅತ್ಯಾಧುನಿಕ ತಂತ್ರಜ್ಞಾನದ ಲೋಹದ ಹಕ್ಕಿಗಳು ಬರೆದ ಸುಂದರ ದೃಶ್ಯಕಾವ್ಯ.ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಬುಧವಾರ ಆರಂಭವಾದ ‘ಏರೋ ಇಂಡಿಯಾ-2011 ವೈಮಾನಿಕ ಪ್ರದರ್ಶನ’ದ ಉದ್ಘಾಟನಾ ಸಮಾರಂಭದ ಕೊನೆಯಲ್ಲಿ ‘...ಏರೋ ಇಂಡಿಯಾ ಪ್ರದರ್ಶನ ಆರಂಭವಾಗಿದೆ ಎಂದು ಘೋಷಿಸುತ್ತಿದ್ದೇನೆ...’ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಹೇಳುತ್ತಿದ್ದಂತೆಯೇ ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡದ ಸೂರ್ಯಕಿರಣ ವಿಮಾನಗಳು ಬಾನಂಗಳದಲ್ಲಿ ವರ್ಣಮಯ ರಂಗೋಲಿ ಬರೆಯಲು ಅನುವಾದವು.ಪ್ರತಿ ಗುಂಪಿನಲ್ಲಿ ಮೂರು ವಿಮಾನಗಳಂತೆ ಮೂರು ಗುಂಪುಗಳು (ಒಟ್ಟು ಒಂಬತ್ತು ವಿಮಾನಗಳು) ರನ್‌ವೇನಿಂದ ಮೇಲೇರುತ್ತಿದ್ದಂತೆಯೇ ಪ್ರೇಕ್ಷಕರ ಸಾಲಿನಿಂದ ಹರ್ಷೋದ್ಗಾರ ಕೇಳಿಬಂತು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಧೂಮವನ್ನು ಹೊರಸೂಸುತ್ತ ಸಾಗಿದ ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ತ್ರಿವರ್ಣ ಧ್ವಜದ ಪ್ರತಿರೂಪವನ್ನು ಸೃಷ್ಟಿಸಿದವು. ಸೂರ್ಯಕಿರಣ ವಿಮಾನಗಳ ತಂಡವನ್ನು ಮುನ್ನಡೆಸಿದ್ದು ವಿಂಗ್ ಕಮಾಂಡರ್ ಪ್ರಜ್ವತ್ ಸಿಂಗ್.ಅರೆಕ್ಷಣ ಆಕಾಶದಲ್ಲಿ ಮಾಯವಾದಂತಿದ್ದ ಈ ವಿಮಾನಗಳು ಇದ್ದಕ್ಕಿದ್ದಂತೆ ನಡುಗಡ್ಡೆಯ (ಡೆಲ್ಟಾ) ಮಾದರಿಯಲ್ಲಿ ಮತ್ತೆ ಪ್ರೇಕ್ಷಕರ ನೆತ್ತಿಯ ಮೇಲೆ ಪ್ರತ್ಯಕ್ಷವಾದಾಗ ಎಲ್ಲರಿಗೂ ಅರೆಕಾಲ ರೋಮಾಂಚನ! ಭಾರತೀಯ ವಾಯುಪಡೆಯಲ್ಲಿ ಯಾವುದೇ ಯುದ್ಧ ವಿಮಾನವನ್ನು ಹಾರಿಸುವುದಕ್ಕೂ ಮೊದಲು ಸೂರ್ಯಕಿರಣ ವಿಮಾನಗಳ ಹಾರಾಟದಲ್ಲಿ ಪೈಲಟ್‌ಗಳು ಪರಿಣತಿ ಪಡೆದಿರುವುದು ಕಡ್ಡಾಯ. ಸೂರ್ಯಕಿರಣ ವಿಮಾನಗಳ ವೇಗ ಗಂಟೆಗೆ 550 ಕಿಲೋ ಮೀಟರ್.ಬುಧವಾರ ನಡೆದ ಸೂರ್ಯಕಿರಣ ಏರೋಬ್ಯಾಟಿಕ್ ಪ್ರದರ್ಶನಕ್ಕೆ 70 ಮಂದಿ ತಂತ್ರಜ್ಞರು ಸಾಥ್ ನೀಡಿದರು. ಸೂರ್ಯಕಿರಣ ವಿಮಾನಗಳ ಹಿಂದೆಯೇ ಏರೋ-ಹೆಡ್ (ವಾಯು ಧನುಷ್) ಮಾದರಿಯಲ್ಲಿ ಹಾರಾಟ ನಡೆಸುತ್ತ ಐದು ಜಾಗ್ವಾರ್ ವಿಮಾನಗಳು ಬಂದವು. ನಂತರ ಬಂದದ್ದು ಭಾರತೀಯ ವಾಯುಪಡೆಯ ಸೇವೆಯಲ್ಲಿರುವ ರಷ್ಯಾ ನಿರ್ಮಿತ ಸುಖೋಯ್ 30-ಎಂಕೆಆರ್ ಯುದ್ಧ ವಿಮಾನಗಳು. ತ್ರಿಶೂಲದ ಮಾದರಿಯಲ್ಲಿ ಬಾನಂಗಳ ಪ್ರವೇಶಿಸಿದ ಸುಖೋಯ್ ವಿಮಾನಗಳು, ವಿವಿಧ ಮಾದರಿಯಲ್ಲಿ ಬಾನಿನಲ್ಲೇ ಪಲ್ಟಿ ಹೊಡೆಯುವುದರ ಮೂಲಕ ಪ್ರೇಕ್ಷಕರನ್ನು ರಂಜನೆಗೂ, ಉತ್ಸುಕತೆಗೂ ಒಡ್ಡಿದವು. ನಂತರ ಬಂದ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್’ ಕೂಡ ವೈಮಾನಿಕ ಕಸರತ್ತುಗಳ ಮೂಲಕ ನೆರೆದಿದ್ದವರ ಮನಗೆದ್ದಿತು. ಕ್ಯಾಪ್ಟನ್ ಸುನೀತ್ ಕೃಷ್ಣ ಅವರು ಪ್ರತಿ ಘಂಟೆಗೆ 700 ಕಿ.ಮಿ. ವೇಗದಲ್ಲಿ ತೇಜಸ್ ವಿಮಾನದ ಚಾಲನೆ ನಡೆಸುತ್ತ ‘ವರ್ಟಿಕಲ್ ಲೂಪ್’ ಸೇರಿದಂತೆ ವಿವಿಧ ಮಾದರಿಯ ವ್ಯೆಹರಚನೆ ಪ್ರದರ್ಶಿಸುತ್ತ ತಮ್ಮ ಚಾಕಚಕ್ಯತೆ ಮೆರೆದರು.ಇದು ರಾಕೆಟ್ ಅಲ್ಲ: ವೈಮಾನಿಕ ಪ್ರದರ್ಶನದ ವೇಳೆ ಆಕಾಶದಲ್ಲಿ ರಾಕೆಟ್‌ನಂತೆ ಮೇಲಕ್ಕೆ ಚಿಮ್ಮಿದ್ದು, ಅಲ್ಲೇ ಬುಗುರಿಯಂತೆ ತಿರುಗಿದ್ದು ಅಮೆರಿಕದ ಬೋಯಿಂಗ್ ಕಂಪೆನಿಯ ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳು. ಇದಲ್ಲದೆ 30 ಡಿಗ್ರಿ ಕೋನದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಮೂಲಕ ನೆರೆದವರ ಉಸಿರಿನ ವೇಗವೂ ತಗ್ಗುವಂತೆ ಮಾಡಿದವು! ಸದ್ಯ ಆಸ್ಟ್ರೇಲಿಯ ಮತ್ತು ಅಮೆರಿಕದ ಸೇನೆಗಳಲ್ಲಿ ಒಟ್ಟಾರೆ 500 ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳು ಸೇವೆಯಲ್ಲಿವೆ. ಫ್ರಾನ್ಸ್ ವಾಯುಪಡೆಯ ರಫೆಲ್ ಯುದ್ಧವಿಮಾನ ಕೂಡ ಸೂಪರ್ ಹಾರ್ನೆಟ್ ವಿಮಾನ ಪ್ರದರ್ಶಿಸಿದ ಎಲ್ಲ ವೈಮಾನಿಕ ಕಸರತ್ತುಗಳನ್ನು ಪ್ರದರ್ಶಿಸಿತು.ಭಾರತೀಯ ವಾಯುಪಡೆಯ ಸೇವೆಯಲ್ಲಿರುವ ಸಾರಂಗ್ ಹೆಲಿಕಾಪ್ಟರ್‌ಗಳು ‘ಇನ್ವರ್ಟೆಡ್ ವೈನ್ ಗ್ಲಾಸ್’ (ವೈನ್ ಕುಡಿಯುವ ಗಾಜಿನ ಲೋಟವನ್ನು ತಲೆಕೆಳಗಾಗಿ ಇಟ್ಟಾಗ ಕಾಣುವಂತೆ) ಮಾದರಿಯಲ್ಲಿ ಆಕಾಶದಲ್ಲಿ ತೇಲಾಡಿ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದವು. ಇದಲ್ಲದೆ ಎರಡು ರೇಖೆಗಳು ಪರಸ್ಪರ ಛೇದಿಸಿದಂತೆ ಹಾರಾಡಿ ನೋಡುಗರ ಎದೆಬಡಿತ ಹೆಚ್ಚಾಗುವಂತೆಯೂ ಮಾಡಿದವು.ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲ ನಡೆದ ಏರೋಬ್ಯಾಟಿಕ್ಸ್ ಕಾರ್ಯಕ್ರಮಕ್ಕೆ ರಕ್ಷಣಾ ಸಚಿವ ಎ.ಕೆ. ಆಂಟನಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸಹಸ್ರಾರು ಮಂದಿ ದೇಶವಿದೇಶಗಳ ಪ್ರತಿನಿಧಿಗಳು ಸಾಕ್ಷಿಯಾದರು.  ಅಲ್ಲದೆ ವಾಯುನೆಲೆಯ ಆವರಣದ ಹೊರಗೂ ಜನಸಾಮಾನ್ಯರು ನಿಂತು ಈ ಪ್ರದರ್ಶನದ ಸೊಬಗನ್ನು ಸವಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry