ಬಾನುಲಿ ಅಂಕಣ ಬರೆದ `ಪ್ರಜಾವಾಣಿ'ಗೆ ಧನ್ಯವಾದ

7

ಬಾನುಲಿ ಅಂಕಣ ಬರೆದ `ಪ್ರಜಾವಾಣಿ'ಗೆ ಧನ್ಯವಾದ

Published:
Updated:

ಧಾರವಾಡ:  ಸದಾ ಸಂಗೀತ, ಭಾಷಣ, ಹರಟೆ, ಫೋನ್ ಇನ್, ಫೋನ್ ಔಟ್ ಕಾರ್ಯಕ್ರಮದಲ್ಲಿ ಬಿಜಿಯಾಗಿರುತ್ತಿದ್ದ ಇಲ್ಲಿಯ ಆಕಾಶವಾಣಿ ಕೇಂದ್ರದ ಬುಧವಾರದ ಚಿತ್ರಣ ಒಂದೂವರೆ ಗಂಟೆ ಮಟ್ಟಿಗೆ ಕೊಂಚ ಭಿನ್ನವಾಗಿತ್ತು. ಸಂಗೀತ ಕೇಳಿತು. ಆದರೆ, ದೂರದ ಕೇಳುಗರಿಗಲ್ಲ. ಸ್ಟುಡಿಯೊ ಒಳಗೇ ಕುಳಿತ ಆಯ್ದ ಪ್ರೇಕ್ಷಕರು ಕೀರವಾಣಿಯ ರಾಗವನ್ನು ಸವಿದರು.ಆಕಾಶವಾಣಿಯ ಕಳೆದ 62 ವರ್ಷಗಳ ಹೆಜ್ಜೆ ಗುರುತುಗಳನ್ನು ತನ್ನ ಓದುಗರಿಗೆ ತಲುಪಿಸಲು `ಪ್ರಜಾವಾಣಿ' ಹುಬ್ಬಳ್ಳಿ ಆವೃತ್ತಿಯ ಮೆಟ್ರೊ ಪುರವಣಿಯಲ್ಲಿ ಪ್ರತಿ ಸೋಮವಾರ ಪ್ರಕಟಿಸುತ್ತಿದ್ದ `ಬಾನುಲಿ ಭಿತ್ತಿಯಿಂದ' ಅಂಕಣ ಮಾಲೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಪತ್ರಿಕೆಗೆ ಧನ್ಯವಾದ ಅರ್ಪಿಸಲು ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಅತ್ಯಂತ ಆತ್ಮೀಯವಾಗಿದ್ದ ಕಾರ್ಯಕ್ರಮ ಅಷ್ಟೇ ವಿಶಿಷ್ಟವೂ ಆಗಿತ್ತು. ಬರೀ ಭಾಷಣ ಮಾಡುವ ಬದಲು ಸಿತಾರ್ ವಾದಕ ಪಂ.ಶಫೀಕ್ ಖಾನ್ ಹಾಗೂ ವಯಲಿನ್ ವಾದಕ ವಾದಿರಾಜ ನಿಂಬರಗಿ ಈ ಕಾರ್ಯಕ್ರಮಕ್ಕೆಂದೇ ಸಂಯೋಜಿಸಿದ ಕೀರವಾಣಿ ರಾಗವನ್ನು ಮೊದಲಿಗೆ ಪ್ರಸ್ತುತಪ ಡಿಸಲಾಯಿತು. ಆ ಬಳಿಕ ಧುನ್ ಒಂದನ್ನು ಪ್ರಸ್ತುತ ಪಡಿಸಿದರು.ಬಳಿಕ ಆಕಾಶವಾಣಿ ಕೇಂದ್ರದವರು ಇನ್ನೊಂದು ಲೋಕಕ್ಕೆ ಕರದೊಯ್ದರು. ಆಕಾಶವಾಣಿಯ ಬಗ್ಗೆ `ಪ್ರಜಾವಾಣಿ'ಯಲ್ಲಿ ಪ್ರಕಟವಾದ ಈ ಅಂಕಣ ಮಾಲೆಯನ್ನು ಓದಿದ ದ.ರಾ. ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮ ಸುಂದರ ಬಿದರಕುಂದಿ, ಹಿರಿಯ ವಿಮರ್ಶಕ ಡಾ.ಎಸ್.ಎಂ.ವೃಷಭೇಂದ್ರಸ್ವಾಮಿ, ಜಿ.ಸಿ.ತಲ್ಲೂರ ಹಾಗೂ ಬಿ.ಎ.ಸನದಿ ಅವರ ಅಭಿಪ್ರಾಯಗಳ ಧ್ವನಿ ಮುದ್ರಿಕೆಯನ್ನು ಸ್ಟುಡಿಯೊ ದಲ್ಲಿದ್ದ ಪ್ರೇಕ್ಷಕರಿಗೆ ಕೇಳಿಸಲಾಯಿತು.ಪ್ರಾಸ್ತಾವಿಕವಾಗಿ ಮಾತನಾಡಿದ ನಿಲಯದ ಕಾರ್ಯಕ್ರಮ ವಿಭಾಗದ ನಿರ್ದೇಶಕ ಸಿ.ಯು.ಬೆಳ್ಳಕ್ಕಿ, `ಆಕಾಶವಾಣಿಯ ಬಗ್ಗೆ ಅಲ್ಲೊಂದು, ಇಲ್ಲೊಂದು, ಲೇಖನ, ಭಾಷಣಗಳಲ್ಲಿ ಪ್ರಸ್ತಾಪ ಹೊರತುಪಡಿಸಿ ಇವೆಲ್ಲ ಹೆಜ್ಜೆಗುರುತುಗಳ, ಸಮಗ್ರ ದಾಖಲೆ ಎಲ್ಲಿಯೂ ಆಗಿರಲಿಲ್ಲ. ಪ್ರಜಾವಾಣಿ ಆ ಪ್ರಯತ್ನ ಮಾಡಿದ್ದು ಸಂತಸದ ಸಂಗತಿ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry