ಬಾನೆತ್ತರದ ಸಾಧನೆ

7

ಬಾನೆತ್ತರದ ಸಾಧನೆ

Published:
Updated:

ಜಿಸ್ಯಾಟ್‌–14 ಸಂವಹನ ಉಪಗ್ರಹವನ್ನು ಹೊತ್ತ ‘ಜಿಎಸ್‌ಎಲ್‌ವಿ–ಡಿ5’ ರಾಕೆಟ್‌ ಉಡಾವಣೆಯ ಯಶಸ್ಸು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹಿರಿಮೆಯನ್ನು ಮುಗಿಲೆತ್ತರಕ್ಕೆ ಏರಿಸಿದೆ. ಈವರೆಗೆ ಭಾರತದ ಹಲವು ಸಂವಹನ ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡಾವಣೆ ಮಾಡಿತ್ತಾ­ದರೂ ‘ಜಿಎಸ್‌ಎಲ್‌ವಿ–ಡಿ5’ ರಾಕೆಟ್‌ನಲ್ಲಿ ಅತ್ಯಂತ ಸಂಕೀರ್ಣವಾದ ಕ್ರಯೊಜೆನಿಕ್‌ ತಂತ್ರಜ್ಞಾನ­ವನ್ನು ಬಳಸಿ, ಯಶಸ್ಸು ಕಂಡಿದ್ದು ಹೆಗ್ಗಳಿಕೆ.ಯಾವುದೇ ದೇಶದ ತಾಂತ್ರಿಕ ನೆರವು ಪಡೆಯದೇ ಇಸ್ರೊ ವಿಜ್ಞಾನಿಗಳೇ ಕ್ರಯೊಜೆನಿಕ್‌ ಎಂಜಿನ್‌ ರೂಪಿ­ಸಿದ್ದು ಮತ್ತೊಂದು ಸಾಧನೆ. ಈ ಮೂಲಕ ಭಾರತ ಈ ವಿಶೇಷ ತಂತ್ರ­ಜ್ಞಾನವನ್ನು ಹೊಂದಿರುವ ಅಮೆರಿಕ, ರಷ್ಯಾ, ಜಪಾನ್‌, ಚೀನಾ ಮತ್ತು ಫ್ರಾನ್ಸ್‌ ಸಾಲಿನಲ್ಲಿ ನಿಂತಿದೆ.

ಹಾಗೆಂದು ಈ ಯಶಸ್ಸು ಸುಲಭವಾಗಿ ದಕ್ಕಿಲ್ಲ. ಇಸ್ರೊ ವಿಜ್ಞಾನಿಗಳ ಇಪ್ಪತ್ತು ವರ್ಷಗಳ ತಪಸ್ಸು ಈಗ ಸಿದ್ಧಿಸಿದೆ.ಎಂಬತ್ತರ ದಶಕದಲ್ಲಿ ಅಮೆರಿಕ ಹಾಗೂ ಸೋವಿಯತ್‌ ಒಕ್ಕೂಟ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ಭಾರತ ಕ್ರಯೊಜೆನಿಕ್‌ ತಂತ್ರಜ್ಞಾನ ಹೊಂದುವ, ತನ್ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಕನಸು ಕಂಡಿತ್ತು. ಈ ಕುರಿತು ಸೋವಿಯತ್‌ ಒಕ್ಕೂಟದ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು. ಆದರೆ, 1991ರಲ್ಲಿ ಸೋವಿಯತ್‌ ಒಕ್ಕೂಟದ ಪತನದ ನಂತರ ಅಮೆರಿಕದ ಒತ್ತಡಕ್ಕೆ ಮಣಿದ ರಷ್ಯಾ ಭಾರತಕ್ಕೆ ಕ್ರಯೊಜೆನಿಕ್‌ ತಂತ್ರಜ್ಞಾನ ಹಸ್ತಾಂತರಿ­ಸಲು ನಿರಾಕರಿಸಿತು.2001ರ ನಂತರ ಏಳು ಸಲ ರಷ್ಯಾ ನೆರವಿನಿಂದ ರಾಕೆಟ್‌ ಉಡಾವಣೆ ಮಾಡಲಾಗಿತ್ತಾದರೂ ನಾಲ್ಕು ಸಲ ಮಾತ್ರ ‘ಜಿಎಸ್‌ಎಲ್‌ವಿ’ ಗುರಿ ಮುಟ್ಟಿತ್ತು. 2010ರ ಏಪ್ರಿಲ್‌ನಲ್ಲಿ ಮೊದಲ ಬಾರಿ ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿ ಉಪಗ್ರಹ ಉಡಾ­ವಣೆಗೆ ಇಸ್ರೊ ಪ್ರಯತ್ನಿಸಿತ್ತು. ಆದರೆ ಅದು ವಿಫಲವಾಗಿತ್ತು. ಕಳೆದ ವರ್ಷ ಆಗಸ್ಟ್‌ 19ರಂದು ಕ್ರಯೊಜೆನಿಕ್‌ ರಾಕೆಟ್‌ ಉಡಾವಣೆಗೆ ಸಕಲ ಸಿದ್ಧತೆ ಮಾಡಿ­ಕೊಳ್ಳಲಾಗಿ­ತ್ತಾದರೂ ಇಂಧನ ಸೋರಿಕೆ ಕಂಡುಬಂದಿದ್ದರಿಂದ ಕೊನೆಯ ಕ್ಷಣದಲ್ಲಿ ಉಡಾವಣೆ ಕೈಬಿಡಲಾಗಿತ್ತು. ಭಾನುವಾರದ ಯಶಸ್ಸು ಇಸ್ರೊ ವಿಜ್ಞಾನಿಗಳ ಮುಖದಲ್ಲಿ ನಗು, ಹೆಮ್ಮೆ ಮೂಡಿಸಿದೆ.ಈವರೆಗೆ ಇಸ್ರೊ ತನ್ನ ಬಹುತೇಕ ಉಪಗ್ರಹ ಉಡಾವಣೆಗಳಿಗೆ ‘ಪಿಎಸ್‌ಎಲ್‌ವಿ’ಯನ್ನೇ (ಧ್ರುವಗಾಮಿ ಉಡಾವಣಾ ವಾಹನ)  ಅವಲಂಬಿಸಿ­ಕೊಂಡಿತ್ತು. ಕ್ರಯೊಜೆನಿಕ್‌ ತಂತ್ರಜ್ಞಾನ ಹೊಂದಿರುವ ‘ಜಿಎಸ್‌ಎಲ್‌ವಿ’ ಯಶಸ್ಸು ಬಾಹ್ಯಾಕಾಶದಲ್ಲಿ ಮುಂದಿನ ಸಾಧನೆಗಳಿಗೆಲ್ಲ ಮುನ್ನುಡಿ ಬರೆದಿದೆ.2000–4000 ಕೆ.ಜಿ. ತೂಕ ಹೊಂದಿರುವ ಉಪಗ್ರಹಗಳನ್ನು ಈಗ ‘ಜಿಎಸ್‌ಎಲ್‌ವಿ’ ಮೂಲಕ ಉಡಾವಣೆ ಮಾಡಬಹುದಾಗಿದೆ. ಬಾಹ್ಯಾ­ಕಾಶಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ, ಮತ್ತಷ್ಟು ಅಂತರ­ಗ್ರಹೀಯ ಯಾನಗಳನ್ನು ಕೈಗೊಳ್ಳುವ ಇಸ್ರೊ ಕನಸಿಗೆ ಈಗ ಜೀವ ಬಂದಿದೆ. ವಾಣಿಜ್ಯ ಉದ್ದೇಶದಿಂದ ಇತರ ದೇಶಗಳ ಉಪಗ್ರಹ ಉಡಾವಣೆಗೂ ಇದು ಹೆಬ್ಬಾಗಿಲು ತೆರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry