ಬಾಪು ಬದುಕಿನ ಕ್ಷಣ ಕ್ಷಣ ದರ್ಶನ...

7

ಬಾಪು ಬದುಕಿನ ಕ್ಷಣ ಕ್ಷಣ ದರ್ಶನ...

Published:
Updated:
ಬಾಪು ಬದುಕಿನ ಕ್ಷಣ ಕ್ಷಣ ದರ್ಶನ...

ಗಾಂಧಿ ಬದುಕಿನ ಕ್ಷಣಕ್ಷಣದ ದರ್ಶನ ಪಡೆದು ಕೃತಾರ್ಥರಾಗಬೇಕೆಂದುಕೊಂಡಿದ್ದರೆ ಬನ್ನಿ ಸಕ್ಕರೆ ನಾಡು ಮಂಡ್ಯಕ್ಕೆ.

ಇಲ್ಲಿನ ಕೃಷ್ಣರಾಜ ರಸ್ತೆಯಲ್ಲಿ ಎರಡು ವೃತ್ತಾಕಾರದ ವಿನ್ಯಾಸದಲ್ಲಿ ಸ್ಥಾಪಿತವಾದ ಗಾಂಧಿ ಭವನಕ್ಕೆ ಬಂದರೆ ಗಾಂಧೀಜಿ ಅವರ ಜೀವನ ದರ್ಶನವೇ ನಿಮಗಾಗುತ್ತದೆ. ಗಾಂಧಿ ಜನನದಿಂದ ಹಿಡಿದು ಅವರ ಅಂತ್ಯದವರೆಗಿನ ಚಿತ್ರಮಾಲೆಯಲ್ಲಿ ೩೨೨ ಚಿತ್ರಗಳು ಇಲ್ಲಿವೆ. ಎರಡು ಗಾಜಿನ ಮೇಲೆ ಬಿಡಿಸಿರುವ ಚಿತ್ರ, ಎರಡು ಗಾಂಧಿ ಪ್ರತಿಮೆ ಹಾಗೂ ಗೋಡೆಯ ಮೇಲೆ ದೊಡ್ಡದಾಗಿ ಅಳವಡಿಸಿರುವ ಉಬ್ಬು ಚಿತ್ರಪಟಗಳನ್ನು ನೋಡಿದಾಗ ಗಾಂಧಿ ಲೋಕಕ್ಕೆ ಬಂದ ಅನುಭವ ಉಂಟಾಗುತ್ತದೆ.ಗಾಂಧಿ ಭವನದ ಪ್ರವೇಶದ ಎರಡು ಕಡೆ ಎಂಟು ಅಡಿ ಎತ್ತರದ ಗಾಂಧಿ ಚಿತ್ರಗಳಿವೆ. ದ್ವಾರದ ಮೇಲೆ ‘ನನ್ನ ಜೀವನವೇ ನನ್ನ ಸಂದೇಶ’ ಎಂಬ ಬರಹ ಕಾಣುತ್ತದೆ. ಒಳಪ್ರವೇಶಿಸಿದಂತೆ ಸಭಾಂಗಣದ ಮೇಲೆ ‘ಸತ್ಯವೇ ದೇವರು’ ಎಂಬ ಗಾಂಧಿ ಉಕ್ತಿಯನ್ನು ಬರೆಯಲಾಗಿದೆ.ಸಭಾಂಗಣದ ವೇದಿಕೆಯ ಮೇಲೆ ಗಾಂಧಿ ಚಿತ್ರಪಟ ಸೇರಿದಂತೆ ಎಲ್ಲಾ ಧರ್ಮಗಳ ಸಂಸ್ಥಾಪಕರ ಚಿತ್ರಗಳಿವೆ. ಸಭಾಂಗಣದ ಎಡ, -ಬಲಗಡೆ ಸ್ವತಂತ್ರ ಭಾರತದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳ ಭಾವಚಿತ್ರಗಳನ್ನು ನೇತು ಹಾಕಲಾಗಿದೆ.ಮೊದಲ ಅಂತಸ್ತಿನಲ್ಲಿ ಬಹುತೇಕ ಗಾಂಧಿಗೆ ಸಂಬಂಧಪಟ್ಟಂತಹ ಪುಸ್ತಕಗಳಿರುವ ಗ್ರಂಥಾಲಯ, ವಾಚನಾಲಯ ಸಾರ್ವಜನಿಕರಿಗಾಗಿ ಮೀಸಲಾಗಿದೆ.ಗಾಂಧಿ ಚಿತ್ರ ಶಾಲೆಯಲ್ಲಿ ಗಾಂಧೀಜಿಯವರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು ಇವೆ. ಚಿತ್ರಪಟಗಳನ್ನು ಮಹಾತ್ಮಾ ಗಾಂಧೀಜಿಯ ಪ್ರಥಮ ಹೆಜ್ಜೆ, ದಕ್ಷಿಣ ಆಫ್ರಿಕಾದಲ್ಲಿ, ಸತ್ಯಾಗ್ರಹದ ದೃಶ್ಯಭಾಗ, ದುಂಡುಮೇಜಿನ ಕಾಂಗ್ರೆಸ್, ಹರಿಜನರಿಗಾಗಿ, ನಿರ್ಮಾಣದ ದೃಶ್ಯಭಾಗ, ಭಾರತ ಬಿಟ್ಟು ತೊಲಗಿ ಆಂದೋಲನ, ಸ್ವಾತಂತ್ರ್ಯದ ಮೊದಲು, ಮಹಾತ್ಮಗಾಂಧಿ ಸ್ವಾತಂತ್ರ್ಯದಲ್ಲಿ, ಗಾಂಧೀಜಿಯ ಕೊನೆಯ ಹಂತ ಎಂಬುದಾಗಿ ವಿಂಗಡಿಸಿ ಚಿತ್ರಗಳನ್ನು ಇರಿಸಲಾಗಿದೆ.ಚರಿತ್ರೆಯ ಪುಟಗಳು...

೧೮೬೯ ಅಕ್ಟೋಬರ್ ೨ರಂದು ಗಾಂಧೀಜಿ ಜನ್ಮ ತಾಳಿದ ಸೌರಾಷ್ಟ್ರದ ಪೋರ್‌ಬಂದರಿನ ಮನೆ, ಜನಿಸಿದ ಕೊಠಡಿ, ಗಾಂಧಿ ವ್ಯಾಸಂಗ ಮಾಡಿದ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು, ತಂದೆ- ಕರಮಚಂದ ಗಾಂಧಿ, ತಾಯಿ- ಪುತಲೀಬಾಯಿ, ಬಾಲಕ ಗಾಂಧಿ, ದಕ್ಷಿಣಾ ಆಫ್ರಿಕಾದಲ್ಲಿ ರೈಲಿನಿಂದ ಹೊರದೂಡಲ್ಪಟ್ಟ ಪೀಟರ್ ಮರಿಟ್ಸ್ ಬರ್ಗ್ ರೈಲು ನಿಲ್ದಾಣ, ಜುಲು ಬಂಡಾಯದ ವೇಳೆ ಕೊಡಲಾದ ಸೇವಾ ಪದಕಗಳು, ಶಬರಮತಿ ಆಶ್ರಮಕ್ಕೆ ಸೈಕಲ್‌ನಲ್ಲಿ ಹೋಗುತ್ತಿರುವ ಚಿತ್ರ, ಉಪ್ಪಿನ ಸತ್ಯಾಗ್ರಹ, ಚಾರ್ಲಿ ಚಾಪ್ಲಿನ್ ಜೊತೆಗಿನ ಚಿತ್ರ, ಸಮುದ್ರದಲ್ಲಿ ಈಜುತ್ತಿರುವ ಚಿತ್ರ, ಯರವಾಡ ಸೆರಮನೆ, ಹರಿಜನ ಯಾತ್ರೆ, ನೇತಾಜಿ, ಜಿನ್ನ, ಮಹದೇವ ದೇಸಾಯಿ, ನೆಹರು, ಸರ್ದಾರ್ ಪಟೇಲ್, ಮೌಂಟ್ ಬ್ಯಾಟನ್ ದಂಪತಿ, ಅಬ್ದುಲ್ ಗಫರ್‌ಖಾನ್, ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಸಭೆ, ರಾಜ್‌ಘಾಟ್‌ಗೆ ಹೊರಟಿರುವ ಅಂತಿಮ ಯಾತ್ರೆ, ಸಮಾಧಿಯ ಚಿತ್ರವೂ ಒಳಗೊಂಡಂತೆ ೩೨೨ ಚಿತ್ರಗಳನ್ನು ಹತ್ತು ವಿಭಾಗಳನ್ನಾಗಿ ವಿಂಗಡಿಸಲಾಗಿದೆ.ಗಾಂಧೀಜಿಯವರ ಕುರಿತ ಚಿತ್ರಪಟಗಳು ನೋಡುಗರಿಗೆ ಗಾಂಧೀಜಿಯವರ ಜೀವನ ದರ್ಶನವನ್ನೇ ಮಾಡಿಸುತ್ತದೆ. ಚಿತ್ರಶಾಲೆಯ ಪಕ್ಕದಲ್ಲೇ ಚರಕದಿಂದ ನೂಲು ತೆಗೆಯುವ ಗಾಂಧಿ ಪ್ರತಿಮೆ ಎಲ್ಲರನ್ನೂ ಆಕರ್ಷಿಸುತ್ತಿದೆ.ಕಳೆದ ಏಳು ವರ್ಷಗಳಿಂದ ಲಿಂಗಣ್ಣ ಬಂಧೂಕಾರ್ ಸಂಪಾದಕತ್ವದಲ್ಲಿ ಪ್ರಕಟಗೊಳ್ಳುತ್ತಿರುವ ಗಾಂಧಿಭವನ ವಾರ್ತಾ ಮಾಸ ಪತ್ರಿಕೆ ಗಾಂಧೀಜಿಯವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಒಳಗೊಂಡ ಲೇಖನಗಳು ಪ್ರಕಟಗೊಳ್ಳುತ್ತಿವೆ.

‘ಬಿರ್ಲಾ ಫೌಂಡೇಶನ್’ ಕೊಡುಗೆಯಾಗಿ ನೀಡಿರುವ ಸಂಚಾರಿ ಚಲನಚಿತ್ರ ವಾಹನದ ಮೂಲಕ ಹಳ್ಳಿ, -ಪಟ್ಟಣಗಳಲ್ಲಿ ಉಚಿತವಾಗಿ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.ಸ್ತ್ರೀಯರೇ ತಯಾರಿಸಿದ ಸೀಮೆ ಸುಣ್ಣ, ಮೇಣದ ಬತ್ತಿ, ಫಿನಾಯಿಲ್, ಬ್ಲೀಚಿಂಗ್ ಪೌಡರ್‌ ಅನ್ನು ಕಡಿಮೆ ದರದಲ್ಲಿ ಗಾಂಧಿಭವನದಲ್ಲೇ ಮಾರಾಟ ಮಾಡಲಾಗುತ್ತಿದೆ.ನಗರದ ಸಂಘ- ಸಂಸ್ಥೆಗಳು, ಶಾಲಾ-ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಇಲ್ಲಿ ಸಾಗುತ್ತಿದ್ದು, ಚಟುವಟಿಕೆಯ ಕೇಂದ್ರವಾಗಿದೆ. ಅಂದಹಾಗೆ ಇದು ಸ್ಥಾಪನೆಗೊಂಡಿರುವುದು ೨೦೦೬ರಲ್ಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry