ಗುರುವಾರ , ಅಕ್ಟೋಬರ್ 17, 2019
28 °C

ಬಾಪೂಜಿ ಹೈಟೆಕ್ ವಿದ್ಯಾಸಂಸ್ಥೆಯಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

Published:
Updated:

ದಾವಣಗೆರೆ: ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಷನ್ ಪರೀಕ್ಷಾ ಭಯ ನಿವಾರಿಸುವ ನಿಟ್ಟಿನಲ್ಲಿ ಗುರುವಾರ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಹಮ್ಮಿಕೊಂಡಿದೆ.  ನಗರದ ಎಸ್‌ಎಸ್ ಲೇಔಟ್‌ನ ಸಂಸ್ಥೆಯ ಲೇಕ್ ವ್ಯೆ ಕ್ಯಾಂಪಸ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.ಏಕೆ ಕಾರ್ಯಾಗಾರ?

ಸಂಸ್ಥೆಯ ಶಿಕ್ಷಕರು ಹೇಳುವ ಪ್ರಕಾರ, ಇಂದು ವಿದ್ಯಾರ್ಥಿಗಳ ಮೇಲೆ ಪೋಷಕರು ಒಳ್ಳೆಯ ಫಲಿತಾಂಶ ತರಬೇಕು ಎಂಬ ದೃಷ್ಟಿಯಿಂದ ಒತ್ತಡ ಹಾಕುತ್ತಿದ್ದಾರೆ. ಆದರೆ, ವಿದ್ಯಾರ್ಥಿಗಳು ಎದುರಿಸುತ್ತಿರುವ ಮೂಲ ಸಮಸ್ಯೆಗಳನ್ನು ಅರಿಯುವುದೇ ಇಲ್ಲ. ಅಂಥ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಮೇಲಿನ ಒತ್ತಡ ಅಥವಾ ಹೊರೆಯನ್ನು ಮುಕ್ತಗೊಳಿಸುವುದು ಕಾರ್ಯಕ್ರಮದ ಉದ್ದೇಶ.ಎಷ್ಟೋ ವಿದ್ಯಾರ್ಥಿಗಳು ಪರೀಕ್ಷಾ ಭಯದ ಕಾರಣದಿಂದ ನಕಾರಾತ್ಮಕ ಯೋಚನೆ ಮಾಡಿ ಭವಿಷ್ಯ ಹಾಳು ಮಾಡಿಕೊಳ್ಳುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಯುವಜನಾಂಗದ ಸುಪ್ತ ಚೇತನವನ್ನು ಜಾಗೃತಗೊಳಿಸಬೇಕಿದೆ. ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ಆದರೆ, ಪರಿಸರ ಅದಕ್ಕೆ ಕಾರಣವಾಗುತ್ತದೆ. ಮಕ್ಕಳು ಅನುಭವಿಸುವ ನಾಚಿಕೆ, ಹಿಂಜರಿಕೆ, ಸೋಮಾರಿತನ ಮೊದಲಾದವನ್ನು ತೊಡೆದುಹಾಕಿ ಸೂಕ್ತ ಮಾರ್ಗದರ್ಶನ ನೀಡಬೇಕಾಗುತ್ತದೆ. ಅದಕ್ಕಾಗಿ ಸತತ ಮೂರನೇ ಬಾರಿ ಈ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎನ್ನುತ್ತಾರೆ ಶಿಕ್ಷಕರು.ಪರೀಕ್ಷೆ ಭಯ ಬೇಡ- ಇದೆ ಅಭಯ

ಪರೀಕ್ಷೆ ಭಯ ಬೇಡ- ಇದೆ ಅಭಯ ಇದು ಕಾರ್ಯಕ್ರಮದ ಶೀರ್ಷಿಕೆ (Skills for Stressless Examination) ವಿಶೇಷವಾಗಿ ವಾಣಿಜ್ಯ ಮತ್ತು ವಿಜ್ಞಾನ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ಸುತ್ತಮುತ್ತಲಿನ ಯಾವುದೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನುರಿತ ಶಿಕ್ಷಣ ತಜ್ಞರು, ವಿಷಯ ಪರಿಣತರು ಭಾಗವಹಿಸಿ ವಿದ್ಯಾರ್ಥಿಗಳ ಗೊಂದಲ ನಿವಾರಿಸಲಿದ್ದಾರೆ.ಓದಿದರೆ ಸಾಲದು

ವಿದ್ಯಾರ್ಥಿಗಳು ಓದಿದರೆ ಅಷ್ಟೇ ಸಾಲದು. ಅದನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮಾರ್ಗದರ್ಶನ ಬೇಕು. ಅದಕ್ಕಾಗಿ ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ವಯಸ್ಸು, ಲಿಂಗ, ಮನೋಭಾವ, ಪ್ರಾದೇಶಿಕತೆ, ಪರಿಸರವನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯನ್ನು ನಿರಾತಂಕವಾಗಿ ಎದುರಿಸಲು ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸಲಾಗುತ್ತದೆ ಎನ್ನುತ್ತಾರೆ ಶಿಕ್ಷಕರು.ಯಾರು ಬರುತ್ತಾರೆ?

ಮೈಸೂರಿನ ಲಘು ಕೌಶಲ ಅಭಿವೃದ್ಧಿ ತರಬೇತುದಾರ ಕೆ.ಪಿ. ಪ್ರದ್ಯುಮ್ನ, ಬೆಂಗಳೂರು ಫ್ಯೂಚರ್‌ವೇರ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕ್ ಹಿರೇಮಠ, ಹೈಟೆಕ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ವೀರಪ್ಪ ಭಾಗವಹಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎ.ಎಸ್. ವೀರಣ್ಣ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

Post Comments (+)