ಬಾಪೂ ನೆನಹು: ಕಾರಣ ಹಲವು

7

ಬಾಪೂ ನೆನಹು: ಕಾರಣ ಹಲವು

Published:
Updated:
ಬಾಪೂ ನೆನಹು: ಕಾರಣ ಹಲವು

ಚಿಕ್ಕಬಳ್ಳಾಪುರ: ಅಕ್ಟೋಬರ್ 2. ಈ ದಿನ ಬಂದರೆ ಸಾಕು, ದೇಶದೆಲ್ಲೆಡೆ ಸಂಭ್ರಮ-ಸಂತೋಷ ಆವರಿಸಿಕೊಳ್ಳುತ್ತದೆ. ಗಾಂಧಿ ಜಯಂತಿ ಅಂಗವಾಗಿ ಹಿರಿಯರೆಲ್ಲ `ಬಾಪೂಜಿ~ ಎಂದು ಸ್ಮರಿಸಿದರೆ, ಕಿರಿಯರೆಲ್ಲ `ಗಾಂಧಿ ತಾತಾ~ ಎಂದು ನೆನಪಿಸಿಕೊಳ್ಳುತ್ತಾರೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಆಚರಿಸುವ ಜಯಂತಿ ಕಾರ್ಯಕ್ರಮಕ್ಕೂ ಮತ್ತು ಗಾಂಧೀಜಿಗೂ ಗಾಢವಾದ ನಂಟಿದೆ. ಕಾರಣ, ಗಾಂಧೀಜಿ ಎರಡು ಬಾರಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು. ಸುಮಾರು 48 ದಿನ ನಂದಿ ಬೆಟ್ಟದಲ್ಲಿ ವಿಶ್ರಾಂತಿ ಪಡೆದಿದ್ದರು.ಹಸಿರು ಪರಿಸರ ಮತ್ತು ರಮ್ಯ ವಾತಾವರಣಕ್ಕೆ ಪ್ರಸಿದ್ಧವಾಗಿರುವ ಕಾರಣಕ್ಕೆ ಬಹುತೇಕ ಮಂದಿ ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಆದರೆ ನಂದಿ ಬೆಟ್ಟವು ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಪ್ರಮುಖ ಪಾತ್ರವಹಿಸಿತ್ತು ಎಂಬುದು ಕೆಲವರಿಗೆ ಅಚ್ಚರಿ ಉಂಟು ಮಾಡಬಹುದು.

 

ಗಾಂಧೀಜಿ ತಿಂಗಳಾನುಗಟ್ಟಲೆ ತಂಗಿದ್ದು ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದು ಕೂಡ ನಂದಿ ಬೆಟ್ಟದಲ್ಲೇ. ಈ ಕಾರಣಕ್ಕಾಗಿಯೇ ಬೆಟ್ಟದ ಮೇಲೆ ಅವರದ್ದೇ ಹೆಸರಿನ ಅತಿಥಿಗೃಹವಿದೆ. ಅದರ ಎದುರು ಕನ್ನಡಕವಿಲ್ಲದ ಅಪರೂಪದ ಬಾಪೂ ಪ್ರತಿಮೆಯೂ ಇದೆ.ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಂಚರಿಸುತ್ತಿದ್ದ ಗಾಂಧೀಜಿ ಬೆಂಗಳೂರಿಗೆ ಐದು ಬಾರಿ ಭೇಟಿ ನೀಡಿದರು. ಮೊದಲ ಬಾರಿಗೆ 1915ರಲ್ಲಿ ಭೇಟಿ ನೀಡಿದ ಅವರು, 1920, 1927, 1934 ಮತ್ತು 1936ರಲ್ಲೂ ಆಗಮಿಸಿದರು. 1927 ಮತ್ತು 1936ರ ಭೇಟಿ ಸಂದರ್ಭದಲ್ಲಿ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ನಂದಿ ಬೆಟ್ಟದಲ್ಲಿ ತಂಗಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪ್ರಾಕೃತಿಕ ಚಿಕಿತ್ಸೆ ಪಡೆದ ನಂತರವಷ್ಟೇ ಬೆಟ್ಟದಿಂದ ನಿರ್ಗಮಿಸಿದರು.ಅಹಿಂಸೆ ಚಳವಳಿ ಮೂಲಕ ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು 57ರ ಪ್ರಾಯದಲ್ಲಿ ಅಖಿಲ ಭಾರತ ಪ್ರವಾಸ ಕೈಗೊಂಡ ಗಾಂಧೀಜಿಯವರು 1927ರ ಮಾರ್ಚ್ 27ರಂದು ಬೆಳಗಾವಿಯ ನಿಪ್ಪಾಣಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡರು. ನಂತರದ ದಿನಗಳಲ್ಲೂ ಆರೋಗ್ಯ ಸುಧಾರಿಸದ ಕಾರಣ ಅವರು ಏಪ್ರಿಲ್ 19ರಂದು ನಂದಿ ಬೆಟ್ಟಕ್ಕೆ ಆಗಮಿಸಿ ಕನ್ನಿಂಗ್‌ಗ್ಯಾಂ ಭವನದಲ್ಲಿ ವಿಶ್ರಾಂತಿ ಪಡೆದರು. ಅವರು ತಂಗಿದ 45 ದಿನಗಳ ಕಾಲ ಬೆಂಗಳೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಹೊಸ ಸಂಚಲನ ಮೂಡಿತು.ಮೋತಿಲಾಲ ನೆಹರೂ ಬೆಂಗಳೂರಿಗೆ ಭೇಟಿ ನೀಡುತ್ತಾರೆ ಎಂಬ ಹಿನ್ನೆಲೆಯಲ್ಲಿ ಜೂನ್ 4ರಂದು ಬೆಟ್ಟದಿಂದ ಕೆಳಗಿಳಿದ ಗಾಂಧೀಜಿಯವರನ್ನು ಇಲ್ಲಿಂದ ತೆರಳದಂತೆ ಚಿಕ್ಕಬಳ್ಳಾಪುರದ ಜನರು ಪ್ರೀತಿಯಿಂದ ಕೇಳಿಕೊಂಡರು. ಬಿನ್ನವತ್ತಳೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ನಿಧಿಯನ್ನು ಸಹ ಅರ್ಪಿಸಿದರು.ಆದರೆ ಹೋರಾಟದ ಹಿನ್ನೆಲೆಯಲ್ಲಿ ಗಾಂಧೀಜಿಯವರು ಅಲ್ಲಿಂದ ನಿರ್ಗಮಿಸಿದರು. 1936ರ ಮೇ 10ರಂದು ಮತ್ತೊಮ್ಮೆ ನಂದಿ ಬೆಟ್ಟಕ್ಕೆ ಭೇಟಿ ನೀಡಿದ ಅವರು 3 ದಿನಗಳ ಮಟ್ಟಿಗೆ ಇಲ್ಲಿ ತಂಗಿದ್ದರು.

ಈ ಎಲ್ಲ ಅಂಶಗಳನ್ನು ಲೇಖಕ ವೇಮಗಲ್ ಸೋಮಶೇಖರ್ ಅವರು `ನಂದಿ ಗಿರಿಧಾಮದಲ್ಲಿ ಮಹಾತ್ಮಗಾಂಧಿ~ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.ಡೋಲಿಯಲ್ಲಿ ಬೆಟ್ಟಕ್ಕೆ ಪ್ರಯಾಣ

1927ರ ಏಪ್ರಿಲ್ 19ರಂದು ಗಾಂಧೀಜಿಯವರು ಬರುತ್ತಾರೆ ಎಂಬ ಸುದ್ದಿ ಹರಡಿತು. ಗಾಂಧೀಜಿಗೆ ಬೆಟ್ಟ ಹತ್ತಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಂದಿ ಗ್ರಾಮ ಸಮೀಪದ ಸುಲ್ತಾನಪೇಟೆ ಯುವಕರು ಡೋಲಿಗಳನ್ನು ಸಿದ್ಧಪಡಿಸಿಕೊಂಡಿದ್ದರು.ಗಾಂಧೀಜಿ, ಕಸ್ತೂರಬಾ ಮತ್ತು ಇತರರನ್ನು ಡೋಲಿಗಳಲ್ಲಿ ಕೂರಿಸಿಕೊಂಡು 1775 ಮೆಟ್ಟಿಲುಗಳುಳ್ಳ ಎರಡು ಮೈಲಿ ಎತ್ತರದ ಕಡಿದಾದ ದಾರಿಯ ಮೂಲಕ ಯುವಕರರು ಬೆಟ್ಟವನ್ನು ಹತ್ತಿದ್ದರು.ಆದರೆ, 1936ರ ಮೇ 10ರಂದು ಎರಡನೇ ಬಾರಿಗೆ ಬೆಟ್ಟಕ್ಕೆ ಭೇಟಿ ನೀಡಿದ ಗಾಂಧೀಜಿಯವರು ಕುಡುವತಿ ಗ್ರಾಮದಿಂದ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಕುದುರೆ ರಸ್ತೆಯ ಮೂಲಕವೇ ಬೆಟ್ಟವನ್ನು ಹತ್ತಿದರು. ಅವರು ದೇಹಸ್ಥಿತಿ ಚಿಂತಾಜನಕವಾಗಿದ್ದರೂ ನಡೆದೇ ಬೆಟ್ಟವನ್ನು ಏರಿದ್ದರು. ನಂದಿ ಬೆಟ್ಟದಲ್ಲಿ ಗಾಂಧೀಜಿ ಅಸ್ತಿ ವಿಸರ್ಜನೆ

1948ರ ಜ.30ರಂದು ಸಾವನ್ನಪ್ಪಿದ ಗಾಂಧೀಜಿ ಅಸ್ತಿ (ಚಿತಾಭಸ್ಮ) ದೇಶದ ಇತರ ಪವಿತ್ರ ಕ್ಷೇತ್ರಗಳಲ್ಲಿ ವಿಸರ್ಜಿಸಿದಂತೆ ನಂದಿ ಬೆಟ್ಟದಲ್ಲೂ ವಿಸರ್ಜಿಸಲಾಯಿತು. ಆಗಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಮತ್ತು ರಾಜವೈದ್ಯ ಪಂಡಿತ ಕೆ.ಎನ್.ರಾಮಚಂದ್ರ ಅಯ್ಯರ್ ಮುತುವರ್ಜಿ ವಹಿಸಿ ಗಾಂಧೀಜಿ ಅಸ್ತಿಯನ್ನು 1948ರ ಫೆಬ್ರುವರಿ 12ರಂದು ನಂದಿ ಬೆಟ್ಟಕ್ಕೆ ತರಿಸಿದರು. ಕೋಲಾರ ಜಿಲ್ಲಾಧಿಕಾರಿ ಜಾರ್ಜ್ ಮ್ಯಾಥನ್, ಕೆ.ಪಟ್ಟಾಭಿರಾಮನ್ ಸಮ್ಮುಖದಲ್ಲಿ ಅಂದು ಮಧ್ಯಾಹ್ನ ಅಸ್ತಿ ವಿಸರ್ಜಿಸಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry