ಬಾಬಾ ಶತಕ

7

ಬಾಬಾ ಶತಕ

Published:
Updated:

ಉದಯ ಟಿವಿಯಲ್ಲಿ ಪ್ರತೀ ಭಾನುವಾರ ಬೆಳಿಗ್ಗೆ 9 ಗಂಟೆಗೆ ಪ್ರಸಾರವಾಗುತ್ತಿರುವ `ಶ್ರೀ ಶಿರಡಿ ಸಾಯಿಬಾಬಾ' ನೂರು ಕಂತುಗಳನ್ನು ಪೂರೈಸಿದೆ. ನೂರರ ಸಂತೋಷಗೋಷ್ಠಿಯಲ್ಲಿ ಸಾಯಿಬಾಬಾ ಪಾತ್ರಧಾರಿ ಡಾ.ಸಂಜಯ್, ಬಾಬಾ ವೇಷಭೂಷಣ ತೊಟ್ಟು ಬಂದಿದ್ದರು. ಎರಡು ವರ್ಷಗಳಿಂದ ನಟನೆಯಿಂದ ದೂರ ಉಳಿದು ನೃತ್ಯಶಾಲೆ ಕಡೆ ಗಮನ ಹರಿಸಿದ್ದ ಸಂಜಯ್ ಅವರಿಗೆ ಬಾಬಾ ಪಾತ್ರಕ್ಕೆ ಕರೆ ಬಂದ ನಂತರ ಹತ್ತು ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬಂತಂತೆ.


ಆರಂಭದಲ್ಲಿ ತಮಗೆ ಬಾಬಾನ ಪಾತ್ರ ಹೊಂದುವುದಿಲ್ಲ ಎಂದುಕೊಂಡಿದ್ದ ಅವರು ಭಯದಿಂದಲೇ ಪಾತ್ರ ನಿರ್ವಹಣೆಗೆ ತೊಡಗಿದ್ದರಂತೆ. ಇದೀಗ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಆತ್ಮವಿಶ್ವಾಸ ಮೂಡಿಸಿದೆಯಂತೆ. `ಈ ಪಾತ್ರ ನಿರ್ವಹಿಸುವುದು ಒಂದು ದೊಡ್ಡ ಹೊಣೆಗಾರಿಕೆ. ಇದುವರೆಗೂ ಯುವ ಬಾಬಾನ ಕತೆಯಾಯಿತು. ಇನ್ನು ಮುಂದೆ ಧಾರಾವಾಹಿಯಲ್ಲಿ ಬಿಳಿದಾಡಿಯ ಬಾಬಾ ಬರುವುದರಿಂದ ಅದು ನನಗೆ ಸವಾಲು. ಜನರು ಇಂಥ ಪೌರಾಣಿಕ ಧಾರಾವಾಹಿಗಳನ್ನು ನೋಡಿ ಪ್ರೋತ್ಸಾಹಿಸಬೇಕು' ಎನ್ನುವುದು ಸಂಜಯ್ ಅನಿಸಿಕೆ.ಪವಾಡಗಳನ್ನು ವಿಜೃಂಭಣೆ ಮಾಡದೇ, ಅತಿರೇಕದ ದೃಶ್ಯಗಳಿಲ್ಲದೇ, ಪುಸ್ತಕಗಳನ್ನು ಓದಿಕೊಂಡು ವಾಸ್ತವಕ್ಕೆ ಹತ್ತಿರವಾಗಿ `ಶ್ರೀ ಶಿರಡಿ ಸಾಯಿಬಾಬಾ' ಧಾರಾವಾಹಿ ಮಾಡುತ್ತಿರುವೆ ಎನ್ನುವುದು ನಿರ್ದೇಶಕ ನಾಗೇಶ್ ಅವರ ಆತ್ಮವಿಶ್ವಾಸದ ಮಾತು.ಕೋಲಾರ ಜಿಲ್ಲೆಯ ಮುಳಬಾಗಿಲು ಊರಿನಲ್ಲಿ ಹಳೆಯ ಹೆಂಚಿನ ಮನೆಗಳು, ಅದಕ್ಕೆ ಅಂಟಿಕೊಂಡಂತೆ ಕಾಡು ಇರುವುದರಿಂದ ಅದನ್ನು ಚಿತ್ರೀಕರಣಕ್ಕೆ ಸೂಕ್ತ ತಾಣ ಎಂದು ಗುರುತಿಸಲಾಗಿದೆಯಂತೆ. ಶೂಟಿಂಗ್ ಇದ್ದಾಗ ಕಲಾವಿದರು ಮತ್ತು ತಂತ್ರಜ್ಞರನ್ನು ಬೆಂಗಳೂರಿನಿಂದ ಅಲ್ಲಿಗೆ ಕರೆದುಕೊಂಡು ಹೋಗಿ ಚಿತ್ರೀಕರಿಸಲಾಗುತ್ತಿದೆ ಎಂದು ನಿರ್ಮಾಪಕ ಪುಟ್ಟಸ್ವಾಮಿ ಹೇಳಿದರು.ಧಾರಾವಾಹಿಯಲ್ಲಿ ಖಳನಾಗಿ ನಟಿಸಿರುವ ವೆಂಕಟೇಶ್, ಮಂತ್ರವಾದಿ ಪಾತ್ರಧಾರಿ ಮೀಸೆ ಅಂಜನಪ್ಪ, ಬಾಬಾ ಜೀವನ ಚರಿತ್ರೆ ಬರೆಯುವ ದಾಸಗಣ ಪಾತ್ರಧಾರಿ ಸುನೀಲ್ ಬನವಾಸಿ ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದು ತಮ್ಮ ಅದೃಷ್ಟ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry