ಭಾನುವಾರ, ನವೆಂಬರ್ 17, 2019
28 °C

`ಬಾಬೂಜಿಯಂತೆ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಿ'

Published:
Updated:

ತಿ.ನರಸೀಪುರ: ಎಲ್ಲ ವರ್ಗದ ಜನರ ವಿಶ್ವಾಸ ಪಡೆದು ಉನ್ನತ ಸ್ಥಾನಕ್ಕೇರಿದ ಬಾಬು ಜಗಜೀವನರಾಂ ಅವರ ಬದುಕು ಹಾಗೂ ಸಾಧನೆ ಆದರ್ಶನೀಯ ಎಂದು ಚಿತ್ರದುರ್ಗ ಕೋಡಿಹಳ್ಳಿ ಮಠದ ಷಡಕ್ಷರಮುಖಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದ ಬಾಬು ಜಗಜೀವನರಾಂ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಹಸಿರುಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿಯಲ್ಲಿ ಅವರು ಮಾತನಾಡಿದರು.ಆರ್ಥಿಕವಾಗಿ ಹಿಂದುಳಿದ ಸಮುದಾಯದಿಂದ ಬಂದು ಉಪಪ್ರಧಾನಿ ಹುದ್ದೆ ಅಲಂಕರಿಸಿ, ದೇಶ ಆಹಾರ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಹಸಿರು ಕ್ರಾಂತಿ ಮಾಡಿದ ಬಾಬೂಜಿ ಅವರಂತೆ ಸಮುದಾಯದ ಜನರು ಶಿಕ್ಷಿತರಾಗಬೇಕು ಎಂದರು.ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗ ಸಮುದಾಯಕ್ಕೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಆದ್ಯತೆ ನೀಡದಿರುವುದು ವಿಪರ್ಯಾಸ. ರೋಸ್ಟರ್ ಪದ್ಧತಿಯಿಂತೆ ಮೀಸಲು ಕ್ಷೇತ್ರಗಳಲ್ಲಿ ಶೋಷಿತ ಸಮುದಾಯಗಳಿಗೆ ಅವಕಾಶ ನೀಡಬೇಕು. ಮಾದಿಗ ಸಮುದಾಯದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಭಿನ್ನಾಭಿಪ್ರಾಯ ಬದಿಗಿಟ್ಟು ಸಂಘಟಿತರಾಗಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜಕೀಯ ಅಧಿಕಾರ ದೊರಕಿಸುವತ್ತ ಈ ಸಮುದಾಯದ ಮುಖಂಡರು ಚಿಂತನೆ ನಡೆಸಬೇಕು. ಇತರೆ ಸಮುದಾಯದ ಜನರ ವಿಶ್ವಾಸವನ್ನು ಗಳಿಸಬೇಕು ಎಂದು ಹೇಳಿದರು.ಬಾಬು ಜಗಜೀವನರಾಂ ಒಕ್ಕೂಟದ ಅಧ್ಯಕ್ಷ ಮೂಗೂರು ಸಿದ್ದರಾಜು, ಡಿಸಿಸಿ ಸದಸ್ಯ ಹುಣಸೂರು ಬಸವಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಲ್.ಮಹಾದೇವ, ನಿವೃತ್ತ ನೌಕರರ ಸಂಘದ ಕೆ.ಬೆಟ್ಟಯ್ಯ, ತಲಕಾಡು ಜಿ.ಕೆಂಪರಾಜು, ಹುಣಸೂರು ಡಿ.ರಾಜೇಂದ್ರ, ಮಹೇಶ್, ಮಹಾದೇವಸ್ವಾಮಿ, ಸಿ.ಮಹಾದೇವ್, ವೆಂಕಟಾಚಲಯ್ಯ ಇದ್ದರು.

ಪ್ರತಿಕ್ರಿಯಿಸಿ (+)