ಶನಿವಾರ, ಏಪ್ರಿಲ್ 17, 2021
33 °C

ಬಾಬ್‌ಹೇಸ್ ಹತ್ತು ಸೆಕೆಂಡು ತಲುಪಿದಾಗ ಅಲ್ಲಿ ನಾನಿದ್ದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಧ ಶತಮಾನದ ಹಿಂದೆ ವೇಗದ ಓಟದಲ್ಲಿ ಏಷ್ಯಾದ ಗಮನ ಸೆಳೆದಿದ್ದ ಕೆನೆತ್ ಪೊವೆಲ್ ಅತ್ಯಂತ ಮೃದು ಸ್ವಭಾವದ ಸರಳ ವ್ಯಕ್ತಿ. ಮಿತ ಮಾತಿನ ಅಂತರ್ಮುಖಿ. ಅವರೊಡನೆ ಮಾತಿಗಿಳಿದಾಗ ವೇಗದ ಓಟದಲ್ಲಿ ಭಾರತ ಮೂರು ಸೆಕೆಂಡುಗಳ ಗಡಿ ದಾಟಲು ಹೆಣಗುತ್ತಿರುವ ಪರಿಯ ಬಗ್ಗೆಯೇ ವಿಷಾದವೇ ತುಂಬಿತ್ತು.`ನಾನು ಇನ್ನೆಷ್ಟು ದಿನ ಬದುಕಬಲ್ಲೆ. ನಾನು ಸಾಯುವುದರೊಳಗೆ ಭಾರತ ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಪದಕ ಗೆಲ್ಲುವುದನ್ನು ನೋಡಬೇಕೆಂಬ ಆಸೆ ಇದೆ~ ಎಂಬುದಾಗಿ ಈಚೆಗೆ ತಮ್ಮ ಗೆಳೆಯ ಮಿಲ್ಖಾಸಿಂಗ್ ಹೇಳಿದ್ದ ಮಾತನ್ನು ಪುನರುಚ್ಚರಿಸಿದರು.ಬೆಂಗಳೂರಿನಲ್ಲಿ ದಶಕಗಳ ಹಿಂದೆ ಸೌಲಭ್ಯಗಳ ಕೊರತೆ ಇದ್ದರೂ, ಕ್ರೀಡಾ ಸಾಧನೆಗಾಗಿ ಶಕ್ತಿ ಮೀರಿ ಯತ್ನಿಸುತ್ತಿದ್ದವರಿದ್ದರು. ಆದರೆ ಈಗ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯಗಳಿವೆ. ಫಲಿತಾಂಶ ಮಾತ್ರ ಕಡಿಮೆಯೇ... ಇತ್ಯಾದಿ ಅನಿಸಿಕೆಗಳನ್ನು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡಿರುವುದು ಇಲ್ಲಿದೆ.

ಒಲಿಂಪಿಕ್ಸ್‌ನಲ್ಲಿ ನಿಮಗೆ ಮರೆಯಲಾಗದ ಕ್ಷಣ?

ಟೋಕಿಯೊ ಒಲಿಂಪಿಕ್ಸ್‌ನ 100 ಮೀಟರ್ಸ್‌ನ ಮೊದಲ ಹೀಟ್‌ನಲ್ಲಿ ನಾನು ಓಡಿದ್ದೆ. ಹತ್ತನೇ ಹೀಟ್‌ನಲ್ಲಿ ಅಮೆರಿಕಾದ ಬಾಬ್ ಹೇಸ್ ಓಡಿದ್ದರು. ಅವರು ಫೈನಲ್‌ನಲ್ಲಿ 10.0 ಸೆಕೆಂಡುಗಳಲ್ಲಿ ಓಡಿದ್ದರು. ಮನುಕುಲದ ಇತಿಹಾಸದಲ್ಲಿಯೇ ವೇಗದ ಓಟದಲ್ಲಿ ಹತ್ತರ ಗಡಿ ತಲುಪಿದ ಮೊದಲ ಓಟಗಾರ ಅವರು. ಚರಿತ್ರೆಯ ಆ ರೋಚಕ ಕ್ಷಣದಲ್ಲಿ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ.

ಸದಾ ನೆನಪಿಸಿಕೊಳ್ಳುವ ವ್ಯಕ್ತಿ?

ಬೆಂಗಳೂರಿನ ಫ್ರೆಜರ್‌ಟೌನ್‌ನ ಅಣ್ಣಾಸ್ವಾಮಿ ಮೈದಾನದಲ್ಲಿ ಸುಮ್ಮನೆ ನಿಂತಿದ್ದ ನನ್ನನ್ನು ಕರೆದು, ಓಡಲು ಹೇಳಿ ತರಬೇತು ನೀಡಿದ ಕೃಷ್ಣ ಅವರನ್ನು ನಾನು ಹೇಗೆ ಮರೆಯಲಿ.

ಈಗಿನ ಅಥ್ಲೆಟಿಕ್ ಚಟುವಟಿಕೆ ಬಗ್ಗೆ ಏನನ್ನಿಸುತ್ತದೆ?

ಈಗ ತರಬೇತಿಗೆ ವೈಜ್ಞಾನಿಕ ಸಲಕರಣೆಗಳಿವೆ. ನೂರಾರು ಪುಸ್ತಕಗಳಿವೆ. ನಿರಂತರ ತರಬೇತಿ ಶಿಬಿರ, ವಿಚಾರ ಸಂಕಿರಣಗಳು ನಡೆಯುತ್ತಿವೆ. ಮಾಧ್ಯಮಗಳ ಮೂಲಕ ಬಹಳ ಬೇಗ ಜನಮನ ತಲುಪುವ ವ್ಯವಸ್ಥೆ ಇದೆ.

 

ಆದರೆ ಇಲ್ಲಿ ಕ್ರೀಡಾ ಸಂಸ್ಕೃತಿಯ ಕೊರತೆ ಎದ್ದು ಕಾಣುತ್ತಿದೆ. ಜಮೈಕಾ, ಇಥಿಯೋಪಿಯ, ಅಮೆರಿಕಾಗಳಲ್ಲಿರುವಂತಹ ಕ್ರೀಡಾ ಸಂಸ್ಕೃತಿ ಸಂಸ್ಕಾರ ಜನಸಮುದಾಯದಲ್ಲಿ ಮೂಡಬೇಕಿದೆ.ಭಾರತದ ಈಗಿನವರ ಅಥ್ಲೆಟಿಕ್ ಸಾಧನೆ ಬಗ್ಗೆ ಏನನ್ನಿಸುತ್ತದೆ?

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋಲಿಸಿ ನೋಡಿದಾಗ ತೀರಾ ಕಳಪೆ ಎನಿಸುವುದು ಸಹಜ ತಾನೆ.

ಈಗ ವಿದೇಶಿ ಕೋಚ್‌ಗಳ ತರಬೇತಿ ನಮ್ಮವರಿಗೆ ಅನುಕೂಲವಾಗಿದೆ ಎನಿಸುತ್ತದಾ?

ಇದೇನೂ ಹೊಸದಲ್ಲ ಬಿಡಿ, ನಾವು ಓಡುತ್ತಿದ್ದಾಗಲೂ ವಿದೇಶಿ ಕೋಚ್‌ಗಳಿದ್ದರು. ನಾನು ಒಲಿಂಪಿಕ್ಸ್‌ಗೆ ತೆರಳಿದ್ದಾಗ ನಮ್ಮ ತಂಡದೊಡನೆ ಹಂಗರಿ ದೇಶದ ಜೋಸಲ್ ಕೊವಾಕ್ ಎನ್ನುವವರು ಜತೆಗಿದ್ದರು.

ಬೆಂಗಳೂರಿನ ಆಗಿನ ಅಥ್ಲೆಟಿಕ್ಸ್ ರಂಗದ ವಾತಾವರಣ ಹೇಗಿತ್ತು?

ವಿಶೇಷವೇನಿಲ್ಲ. ನಾನು ಹೆಚ್ಚು ಅಭ್ಯಾಸ ನಡೆಸುತ್ತಿದ್ದುದೇ ಅಣ್ಣಾಸ್ವಾಮಿ ಮೈದಾನದಲ್ಲಿ. ಕಂಠೀರವ ಕ್ರೀಡಾಂಗಣಕ್ಕೆ ಹೋಗುತ್ತಿದ್ದುದು ಕಡಿಮೆ. ಹೋದಾಗ ಅಲ್ಲಿ ಚಿಕ್ಕಪಾಪಯ್ಯ, ನೆಟ್ಟಕಲ್ಲಪ್ಪ ಮುಂತಾದವರೊಡನೆ ಮಾತನಾಡಿ ಬರುತ್ತಿದ್ದೆ. ಆ ಕಾಲದ ವೇಗದ ಓಟಗಾರ ಪಿ.ಸಿ.ಪೊನ್ನಪ್ಪ ಸೇರಿದಂತೆ ಹಲವರು ಆಗ ಅಲ್ಲಿ ಅಭ್ಯಾಸ ನಡೆಸುತಿದ್ದರು. ಅವರೆಲ್ಲರೊಡನೆ ಹರಟುತ್ತಿದ್ದೆ.

ರಾಜ್ಯದ ಆಗಿನ ಕ್ರೀಡಾಡಳಿತ?

ಅವುಗಳೆಲ್ಲಾ ಆಗ ನನಗೆ ಗೊತ್ತಾಗುತ್ತಿರಲಿಲ್ಲ. ನೆಟ್ಟಕಲ್ಲಪ್ಪನವರು ಆಗ ಅಥ್ಲೆಟಿಕ್ ಸಂಸ್ಥೆಯ ಮುಖ್ಯಸ್ಥರಾಗಿದ್ದರೆನಿಸುತ್ತದೆ. ನಾನು ಗೆದ್ದಾಗಲೆಲ್ಲಾ ಪ್ರೋತ್ಸಾಹದ ಮಾತುಗಳನ್ನು ಹೇಳುತ್ತಿದ್ದರು. ಬೆನ್ನು ತಟ್ಟುತ್ತಿದ್ದರು.ಆ ಕಾಲದ ಹಲವು ಅಥ್ಲೀಟ್‌ಗಳಿಗೆ ಅವರು ನೆರವು ನೀಡಿದ್ದು ನನಗೆ ಗೊತ್ತು. ಅವರು ನಮ್ಮ ಜೊತೆಯಲ್ಲೇ ಟೋಕಿಯೊ ಒಲಿಂಪಿಕ್ಸ್‌ಗೂ ಬಂದಿದ್ದರು. ನಾವು ಪಾಲ್ಗೊಳ್ಳುತ್ತಿದ್ದ ಸ್ಪರ್ಧೆಗಳನ್ನೂ ಇವರು ಮತ್ತು ಚಿಕ್ಕಪಾಪಯ್ಯ ನಿಂತು ನೋಡುತ್ತಿದ್ದುದು ನನಗಿನ್ನೂ ನೆನಪಿದೆ.

ವೇಗದ ಓಟಕ್ಕೆ ಸಂಬಂಧಿಸಿದಂತೆ ಭಾರತದ ಭವಿಷ್ಯ?

ಇನ್ನಷ್ಟು ಶ್ರಮ ಪಟ್ಟರೆ ಏಷ್ಯಾ ಮಟ್ಟದಲ್ಲಿ ಅಗ್ರಸ್ಥಾನಕ್ಕೇರಬಹುದು. ಟೋಕಿಯೊ ಒಲಿಂಪಿಕ್ಸ್ ರಿಲೆಯಲ್ಲಿಯೇ ನಾವು ಜಪಾನ್, ಮಲೇಷ್ಯಾಗಳಂತಹ ತಂಡಗಳನ್ನು ಹಿಂದಿಕ್ಕಿ ಏಷ್ಯಾದ ಅತ್ಯುತ್ತಮ ಸಮಯ (40.5ಸೆ.)ದಲ್ಲಿ ಗುರಿ ಮುಟ್ಟಿದ್ದೆವು.ಪ್ರತಿಭಾವಂತ ಓಟಗಾರರನ್ನು ಎಳವೆಯಲ್ಲಿಯೇ ಹುಡುಕಿ ಅವರಿಗೆ ವೈಜ್ಞಾನಿಕ ನೆಲೆಯಲ್ಲಿ ದೀರ್ಘಕಾಲದ ಕಠಿಣ ತರಬೇತಿ ನೀಡಬೇಕು. ಅಂತಹವರು ಬಾಬ್‌ಹೇಸ್‌ನಂತಹ ದೇಹದಾರ್ಢ್ಯ, ಕತಾರ್‌ನ ಮನ್ಸೂರ್ ತಲಾಲ್‌ನಂತಹ ವೇಗ ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರ ಭವಿಷ್ಯದ ಬಗ್ಗೆ ಭರವಸೆ ಇರಿಸಬಹುದೇನೋ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.