ಬಾಯಾರಿದ ಜನಕ್ಕೆ ಭರವಸೆ ಕೊಡಿಸಲು ಸನ್ನದ್ಧ

7
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಜಿಲ್ಲೆಗೆ

ಬಾಯಾರಿದ ಜನಕ್ಕೆ ಭರವಸೆ ಕೊಡಿಸಲು ಸನ್ನದ್ಧ

Published:
Updated:
ಬಾಯಾರಿದ ಜನಕ್ಕೆ ಭರವಸೆ ಕೊಡಿಸಲು ಸನ್ನದ್ಧ

ಕೋಲಾರ: ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಜಿಲ್ಲೆಗೆ ಸೆ.25ರಂದು ಭೇಟಿ ನೀಡುವ ಹಿನ್ನೆಲೆಯಲ್ಲಿ, ಬಾಯಾ­ರಿದ ಜನಕ್ಕೆ ಅವರಿಂದ ಭರವಸೆ ಕೊಡಿ­ಸಲು ಕೇಂದ್ರ ಸಚಿವ ಕೆ.ಎಚ್.ಮುನಿ­ಯಪ್ಪ ನೇತೃತ್ವದಲ್ಲಿ ಎಲ್ಲ ಶಾಸಕರು ಸಿದ್ಧತೆ ನಡೆಸಿದ್ದಾರೆ.ಅಸಮರ್ಪಕ ಮಳೆ ಮತ್ತು ಅಂತ­ರ್ಜಲ ಕುಸಿತದಿಂದ ಕಂಗಾಲಾಗಿರುವ  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ­ಯಲ್ಲಿ ಹನಿ ನೀರಾವರಿ ಕಡ್ಡಾಯಗೊಳಿ­ಸುವುದು, ಅದಕ್ಕೆ ಶೇ 100ರಷ್ಟು ಸಹಾಯಧನ ನೀಡುವುದು, ಸೌರಶಕ್ತಿ ಬಳಕೆ– ಶೇ 75 ಸಬ್ಸಿಡಿ ಕೊಡುವುದು, ಕೆರೆಗಳ ಪುನಶ್ಚೇತನ ಪ್ರಕ್ರಿಯೆ ಚುರುಕು­ಗೊಳಿಸುವ ಭರವಸೆಯನ್ನು ಮುಖ್ಯ­ಮಂತ್ರಿ­­ಯಿಂದ ಕೊಡಿಸಲು ಭರದ ಸಿದ್ಧತೆ ನಡೆದಿದೆ.  ಅದಲ್ಲದೆ, ಜಿಲ್ಲೆ ಎದುರಿಸು­ತ್ತಿರುವ ಗಂಭೀರ ಸಮಸ್ಯೆಗಳ ಕುರಿತೂ ವರದಿಯೊಂದನ್ನು ಸಿದ್ಧಪಡಿಸಿ ನೀಡುವ ನಿಟ್ಟಿನಲ್ಲಿ ಅಧಿ­ಕಾರಿಗಳೊಡನೆ ಸಮಾಲೋಚನೆಯೂ ನಡೆದಿದೆ.ಸೆ.27ರಂದು ನಿಗದಿಯಾಗಿದ್ದ ಭೇಟಿ ಕಾರ್ಯಕ್ರಮ ಭಾನುವಾರ ಸಂಜೆ ದಿಢೀರ್ ಬದಲಾಗಿ, ಸೆ.25ಕ್ಕೇ ಮುಖ್ಯ­ಮಂತ್ರಿ ಭೇಟಿ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಎರಡು ದಿನ ಅಷ್ಟೇ ಕಾಲಾವಕಾಶ ಇರುವ ಹಿನ್ನೆಲೆಯಲ್ಲಿ ಸಚಿವರು ಮತ್ತು ಶಾಸಕರು ನಗರದ ಜಿಲ್ಲಾ­ಧಿಕಾರಿ ಕಚೇರಿಯಲ್ಲಿ ಸೋಮ­ವಾರ ಸಮಾಲೋಚನೆ ನಡೆಸಿದರು.ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾ­ವರಿ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸ್ಪಷ್ಟ ನಿಲುವು ಏನೆಂಬುದನ್ನು ಮುಖ್ಯಮಂತ್ರಿಗಳು ತಮ್ಮ ಭೇಟಿ ಸಂದರ್ಭದಲ್ಲಿ ಪ್ರಕಟಿಸುತ್ತಾ­ರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪರಮಶಿವಯ್ಯ ವರದಿ ಜಾರಿಗೆ ಸಿದ್ಧತೆ ನಡೆದಿದೆ.ಅದರದ್ದೇ ಭಾಗವಾಗಿರುವ ಎತ್ತಿನ ಹೊಳೆ ಯೋಜನೆಯ ಸಮಗ್ರ ಯೋಜನಾ ವರದಿ ತಯಾರಿಕೆಗೂ ಚಾಲನೆ ನೀಡಲಾಗುತ್ತಿದೆ. ಈ ನಡುವೆ, ಯಾವಾಗ ಯೋಜನೆಗಳು ಪೂರ್ಣ­ಗೊಂಡು ಜಿಲ್ಲೆ ಜನರಿಗೆ ನೀರು ದೊರಕು­ತ್ತದೆ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ಹೇಳಲು ಮುಖ್ಯ­ಮಂತ್ರಿಯನ್ನು ಕೋರಲಾಗುವುದು ಎಂದರು.ಶಾಶ್ವತ ನೀರಾವರಿ ಯೋಜನೆ ಜಾರಿ­ಗೊಳಿಸದೆ ಜಿಲ್ಲೆಯ ಜನಪ್ರತಿನಿಧಿಗಳು ಜನರ ಬಳಿಗೆ ಹೋಗಲಾಗುವುದಿಲ್ಲ. ಅವರ ಆಕ್ಷೇಪಣೆಗಳಿಗೆ ಉತ್ತರಿಸಲೂ ಸಾಧ್ಯವಾಗುವುದಿಲ್ಲ. ಯಾವುದೇ ಚುನಾ­ವಣೆ ಬರಲಿ, ಹೋಗಲಿ. ನೀರಾವರಿ ಸೌಕರ್ಯವನ್ನು ಜಿಲ್ಲೆಗೆ ತರಲೇಬೇಕಾ­ಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಭೇಟಿಯನ್ನು ಗಂಭೀರವಾಗಿ ಪರಿಗಣಿಸ­ಲಾಗಿದೆ ಎಂದು ಅವರು ಹೇಳಿದರು.ಮುಖ್ಯಮಂತ್ರಿಗಳ ಭೇಟಿ ನಗೆ­ಪಾಟಲು ಆಗಬಾರದು. ಅವರ ಭೇಟಿ ಕಾರಣದಿಂದ ಜನರಲ್ಲಿ ಮೂಡಿ­ರುವ ನಿರೀಕ್ಷೆಗಳು ಈಡೇರಬೇಕು. ಹೀಗಾಗಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಭೇದ ಮರೆತು ಒಟ್ಟಾಗಿದ್ದಾರೆ ಎಂದರು.ಸಿಎಂಗೆ ಮನವಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ತಮ್ಮ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಿದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್‌.ರಮೇಶಕುಮಾರ್‌, ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಸಮಸ್ಯೆ­ಗಳ ಪರಿಹಾರದ ಕುರಿತು ಸ್ಪಷ್ಟವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕು ಎಂದು ಕೋರಿದರು.ಅಸಮರ್ಪಕ ಮಳೆ ಮತ್ತು ಅಂತರ್ಜಲ ಕುಸಿತದಿಂದ ಕಂಗಾ­ಲಾಗಿರುವ  ಕೋಲಾರ ಮತ್ತು ಚಿಕ್ಕ­ಬಳ್ಳಾ­ಪುರ ಜಿಲ್ಲೆಯಲ್ಲಿ ಹನಿ ನೀರಾ­ವರಿಯನ್ನು ಕಡ್ಡಾಯಗೊಳಿಸಬೇಕು, ಅದಕ್ಕೆ ಶೇ 100ರಷ್ಟು ಸಹಾಯಧನ ನೀಡಬೇಕು. ಸೌರಶಕ್ತಿ ಬಳಕೆ– ಶೇ 75 ಸಬ್ಸಿಡಿ ಕೊಡುವ ಭರವಸೆಯನ್ನು ನೀಡ­ಬೇಕು ಎಂದು ಅವರು ವಿನಂತಿಸಿದರು.ಶಾಶ್ವತ ನೀರಾವರಿ ಯೋಜನೆಗಳು ಜಾರಿಗೊಳ್ಳುವ ಹೊತ್ತಿಗೆ ಕೆರೆಗಳ ಪುನಶ್ಚೇತನವೂ ನಡೆಯಬೇಕು. ಹರಿದು ಬರುವ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕೆರೆಗಳಿಗೆ ತರಬೇಕು. ಆ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿಯನ್ನು ತಯಾರಿಸುವ ಪ್ರಕ್ರಿಯೆ ಚುರುಕಾಗಬೇಕಿದೆ. 11 ಸಾವಿರ ಕೋಟಿ ರೂಪಾಯಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಮೊತ್ತವಲ್ಲ. ಈ  ನಿಟ್ಟಿನಲ್ಲಿ ಅಧಿಕಾರಿಗಳೊಡನೆ ಸಭೆ ನಡೆಸಬೇಕು ಎಂದು ಅವರು ಕೋರಿದರು.ರೈಲ್ವೆ ಕೋಚ್: ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈಲ್ವೆ ಕೋಚ್ ಕಾರ್ಖಾನೆ ಸ್ಥಾಪನೆಗಾಗಿ 600 ಎಕರೆ ಭೂಮಿ ಸಿದ್ಧವಿದೆ. ಕೈಗಾರಿಕಾ ಅಭಿವೃದ್ಧಿ ಮಂಡಳಿ ಈ ಸಮಯದಲ್ಲಿ ಹೆಚ್ಚು ಕ್ರಿಯಾಶೀಲ­ಗೊಳ್ಳಬೇಕಿದೆ. ಆ ನಿಟ್ಟಿನಲ್ಲಿಯೂ ಭೇಟಿ ಸಂದರ್ಭದಲ್ಲಿ ಭರವಸೆ ನೀಡಬೇಕು ಎಂದು ಅವರು ಮನವಿ ಮಾಡಿದರು.ಶಾಸಕರಾದ ಬಂಗಾರಪೇಟೆ ಕ್ಷೇತ್ರದ ಕೆ.ಎಂ.ನಾರಾಯಣಸ್ವಾಮಿ, ಮಾಲೂರು ಕ್ಷೇತ್ರದ ಕೆ.ಎಸ್‌.ಮಂಜುನಾಥ, ಮುಳ­ಬಾಗಲು ಕ್ಷೇತ್ರದ ಡಾ.ಜಿ.ಮಂಜುನಾಥ ಮತ್ತು ಜಿಲ್ಲಾಧಿಕಾರಿ ಡಿ.ಕೆ.ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry