ಶನಿವಾರ, ಫೆಬ್ರವರಿ 27, 2021
28 °C

ಬಾಯಾರಿದ ಜನ ಸುಡುಬಿಸಿಲಿಗೆ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಯಾರಿದ ಜನ ಸುಡುಬಿಸಿಲಿಗೆ ತತ್ತರ

ತಾಳಿಕೋಟೆ: ಪಟ್ಟಣದಲ್ಲಿ ಎರಡು ದಿನಕ್ಕೊಮ್ಮೆ ದೊರೆಯುತ್ತಿದ್ದ ಶುದ್ಧೀಕರಿಸಿದ ಕುಡಿಯುವ ನೀರು ಈಗ ಐದು ದಿನಗಳಿಗೊಮ್ಮೆ ಪೂರೈಸಲಾಗುತ್ತಿದೆ. ಭೀಕರ ಸುಡುಬಿಸಿಲಿಗೆ ತತ್ತರಿಸಿದ ಪಟ್ಟಣದ ಜನತೆಯಲ್ಲಿ ತಳಮಳ ಆರಂಭವಾಗಿದೆ.ಜಿಲ್ಲೆಯಲ್ಲಿ ಕುಡಿಯುವ ನೀರಿನ ನಿರ್ವಹಣೆಯಲ್ಲಿ ಉತ್ತಮ ಎಂದು ಹೆಸರು ಪಡೆದಿರುವ ಇಲ್ಲಿಯ ಪುರಸಭೆಯೂ ತಲ್ಲಣಗೊಂಡಿದೆ. ಏಕೆಂದರೆ ಕಳೆದ ವರ್ಷ ಮಾಳೂರು ಕೆರೆಯಲ್ಲಿ ನೀರು ಕಡಿಮೆಯಾಗಿ, ಕುಡಿಯುವ ನೀರಿನ ಅಭಾವದಿಂದ ಆದ ಕೆಟ್ಟ ಅನುಭವ ಪುರಸಭೆ ಮರೆತಿಲ್ಲ. ಜನತೆಗೆ ನೀರಿನ ತೊಂದರೆ ಬಾರದಂತೆ ರೂ.70ಲಕ್ಷ ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಿ ಹೆಚ್ಚಿನ ನೀರು ಸಂಗ್ರಹಿಸುವ ಪ್ರಯತ್ನ ಮಾಡಿದೆ.`ಕಾಲುವೆಯ ದುರಸ್ತಿ ಕಾರಣ ನೀಡಿ ನಾರಾಯಣಪುರ ಕೃಷ್ಣಾ ಎಡದಂಡೆ ಕಾಲುವೆ ನೀರನ್ನು 10.3.2012ರಿಂದ ಬಂದ್ ಮಾಡಿದ್ದು, ಮಾಳೂರ ಕೆರೆಯಲ್ಲಿ ಸದ್ಯ ಸಂಗ್ರಹಿಸಿರುವ ನೀರು ಎರಡು ತಿಂಗಳಿಗೆ ಸಾಕಾಗುತ್ತದೆ. ಜೂನ್-ಜುಲೈನಲ್ಲಿ ಕುಡಿಯುವ ನೀರಿನ ಅಭಾವ ಕಾಣಿಸಲಿದೆ. ಅದನ್ನು ತಪ್ಪಿಸಲು ಐದು ದಿನಕ್ಕೊಮ್ಮೆ ಬಿಡುವ ನೀರನ್ನು 8-10ದಿನಕ್ಕೆ ಬಿಟ್ಟು ಅದನ್ನು ಸರಿದೂಗಿಸಲಾಗುವುದು~ ಎಂದು ಪುರಸಭೆ ಅಧ್ಯಕ್ಷರು ಹೇಳುತ್ತಿದ್ದಾರೆ.ಇಲ್ಲಿಯ ಜನತೆಗೆ ಸವಳು  ನೀರೇ ಗತಿಯಾಗಿತ್ತು. ಪಟ್ಟಣದ ಜನತೆಗೆ ಸಿಹಿ ನೀರು ದೊರಕಿದ್ದು 2004ರಲ್ಲಿ. ರೂ.10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಮಾಳೂರ ಕೆರೆಯ ಜಾಕ್‌ವೆಲ್‌ನಿಂದ  ಕೃಷ್ಣೆಯ ಸಿಹಿ ನೀರನ್ನು ಪಟ್ಟಣಕ್ಕೆ ಸಾಗಿಸಿ ಶುದ್ಧೀಕರಣ ಘಟಕದಲ್ಲಿ ಶೋಧಿಸಿ ಕುಡಿಯುವ ನೀರು ಪೂರೈಕೆಯಾಗಲು ಪ್ರಾರಂಭಿಸಿದ ಮೇಲೆ ಪಟ್ಟಣದ ಶತಮಾನಗಳ ಶಾಪ ಪರಿಹಾರವಾದಂತೆ ಜನರು ಹಿಗ್ಗಿದ್ದರು. ಅಲ್ಲಿಂದ ಈಚೇಗೆ ಕಳೆದ ವರ್ಷದ ವರೆಗೆ ಪಟ್ಟಣಕ್ಕೆ ನೀರಿನ ಅಭಾವ ಕಾಡಿರಲಿಲ್ಲ.ಎರಡು ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರನ್ನು ಪೂರೈಸುವಲ್ಲಿ ಪಟ್ಟಣದ ಪುರಸಭೆಯ ಕಾರ್ಯಕ್ಷಮತೆ ಹೆಚ್ಚಿದಂತೆ ಪಟ್ಟಣದ ಜನಸಂಖ್ಯೆಯೂ ಹೆಚ್ಚಿತು. ಈಗ ಪಟ್ಟಣದಲ್ಲಿ 6,134 ಮನೆಗಳಿವೆ. ಜನಸಂಖ್ಯೆ 35ಸಾವಿರ ದಾಟಿದೆ. 3,407 ನಲ್ಲಿ ಸಂಪರ್ಕ ಪಡೆದಿದ್ದಾರೆ. ಎಲ್ಲಿಯೂ ಅಕ್ರಮ ಸಂಪರ್ಕ ಪಡೆಯದಂತೆ ಪುರಸಭೆ ಎಚ್ಚರಿಕೆ ವಹಿಸಿದೆ. ಸಾಲದೆಂಬಂತೆ ಮಳೆಗಾಲ ಆರಂಭದವರೆಗೆ ಹೊಸ ನಲ್ಲಿ ಸಂಪರ್ಕ ನೀಡದಿರುವಂತೆ ತೀರ್ಮಾನಿಸಿದೆ.ಬಳಕೆಗೆ ಪಟ್ಟಣದಲ್ಲಿ ಬೋರ್‌ವೆಲ್‌ಗಳಿಗೆ ಕೊರತೆಯಿಲ್ಲ, ನೂತನವಾಗಿ ಕೊರೆದಿರುವ 17ರಲ್ಲಿ 15ಬೋರ್‌ವೆಲ್‌ಗಳಲ್ಲಿ ನೀರಿದೆ.. ಹಿಂದಿನ 13ಬೋರ್‌ವೆಲ್‌ಗಳಿವೆ. ಹಳೆಯ 23 ಸಣ್ಣ ಟ್ಯಾಂಕ್‌ಗಳೊಂದಿಗೆ ಹೊಸದಾಗಿ 20 ಸಣ್ಣ ಟ್ಯಾಂಕ್ (ಗುಮ್ಮಿ) ನಿರ್ಮಿಸಲಾಗಿದೆ. ರೂ.9ಕೋಟಿ ವೆಚ್ಚದ ಮೇಲ್ಮಟ್ಟದ ನೀರು ಸಂಗ್ರಹಾಗಾರಕ್ಕೆ ಟೆಂಡರ್ ಆಗಿದೆ ಎನ್ನುತ್ತಿದ್ದಾರೆ ಪುರಸಭೆಯವರು.ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಪಟ್ಟಣದ ರಜಪೂತಗಲ್ಲಿ, ಡಾ.ಅಂಬೇಡ್ಕರ್ ಓಣಿಯಲ್ಲಿ ಐದು ದಿನಕ್ಕೊಮ್ಮೆ ಬರುವ ನಲ್ಲಿ ನೀರು ಬಿಟ್ಟು ಇತರೆ ಅನುಕೂಲತೆಗಳಿಲ್ಲ. ಡಾ.ಅಂಬೇಡ್ಕರ್ ಓಣಿಯಲ್ಲಿರುವ ಲಾಲಸಾನ ಬಾವಿಯನ್ನು ಈಚೆಗೆ ತಾನೆ ನೀರು ಖಾಲಿ ಮಾಡಿ ಸ್ವಚ್ಛಗೊಳಿಸಿದೆ ಎಂದು ಪುರಸಭೆ ಹೇಳುತ್ತದೆ.ಆದರೆ, `ಇಲ್ಲಿಯ ನೀರಲ್ಲಿ ಸ್ನಾನ ಮಾಡಿದರೆ, ಬಟ್ಟೆ ತೊಳೆದರೆ ಕೆಟ್ಟ ವಾಸನೆ ಬರುತ್ತದೆ. ಆದ್ದರಿಂದ ಒಂದು ಕಿಲೋ ಮೀಟರ್ ದೂರದ ಅಂಬಾಭವಾನಿ ಗುಡಿಯ ಬಳಿ ನೀರು ತರುತ್ತಿದ್ದೇವೆ~ ಎನ್ನುತ್ತಾರೆ ಇಲ್ಲಿನ ನಿವಾಸಿಗಳಾದ ಯಮನಪ್ಪ ಕಟ್ಟಿಮನಿ, ಶರಣಪ್ಪ ಡೋಣೂರ, ರೇವಣೆಪ್ಪ ಕಟ್ಟಿಮನಿ ಮೊದಲಾದವರು.`ಓಣ್ಯಾಗಿನ ಗುಮ್ಮಿ ಬಂದಾಗಿ 5-6 ವರ್ಷ ಆತು. ನಮ್ಮ ಜಾತಿಯ ಐದು ಮೆಂಬರ್ ಅದಾರ‌್ರಿ. ಓಟು ಹಾಕಿಸಿಕೊಳ್ಳಾಗ ಜಾತಿ ಬೇಕರಿ ನೀರ ಕೊಡಾಕ ಎಲ್ಲ ಮರತಾರ‌್ರಿ~ ಎಂದು 13ನೇ ವಾರ್ಡ್‌ನ ಕಮಲಾಬಾಯಿ ಹಜೇರಿ, ಪ್ರಭಾವತಿ ವಿಜಾಪುರ, ಭಾರತಿ ನರಗುಂದ, ಚಂದ್ರಭಾಗ ವಿಜಾಪುರ, ನಿಂಬಾಬಾಯಿ ಹಜೇರಿ ಇತರರು ದೂರಿದರು. ಅವರ ಮುಖದಲ್ಲಿ ಆಕ್ರೋಶ, ನೋವು ಎದ್ದು ಕಂಡಿತು.

`ಇತ್ತ 3 ಮತ್ತು 4ನೇ ವಾರ್ಡ್‌ನಲ್ಲಿ  ನೀರಿಲ್ಲ, ಪೈಪಲೈನ್ ತೊಂದರೆಯಿದೆ.  15 ನಿಮಿಷ ಬಂದರೆ ಹೆಚ್ಚು ಎನ್ನುತ್ತಾರೆ~ 4ನೇ ವಾರ್ಡ್‌ನ ಇಂದಿರಾ ನಗರದ  ಶಂಕರ ರಾಠೋಡ. ಆಶ್ರಯ ಬಡಾವಣೆಯಲ್ಲೂ ನೀರಿನ ಅಭಾವವಿದೆ.`ಪಟ್ಟಣದಲ್ಲಿ ಹೊಸ ಲೈನ್‌ನಲ್ಲಿ ನೀರಿನ ಒತ್ತಡ ಬಂದಂತೆ  ಹಳೆ ಲೈನ್‌ನಲ್ಲಿ ನೀರು ಬರದೇ  ಇರುವುದರಿಂದ  ಮೋಟಾರು ಹಚ್ಚಿದರೂ  ನೀರು ಸಾಕಾಗುತ್ತಿಲ್ಲ~ ಎಂಬ ಅಳಲು ಹಳೆಯ ಪೈಪ್‌ಲೈನ್ ಹೊಂದಿರುವ ವಿದ್ಯಾನಗರದವರದ್ದು.ಪಟ್ಟಣದ ಸುತ್ತಲಿರುವ ಗೋಟಖಿಂಡ್ಕಿ, ಮೈಲೇಶ್ವರ, ಹೊಸಹಳ್ಳಿ ಮೊದಲಾದೆಡೆ ಸಹ ನೀರಿನ ತೀವ್ರ ತೊಂದರೆಯಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.