ಶುಕ್ರವಾರ, ನವೆಂಬರ್ 22, 2019
21 °C

ಬಾಯಾರಿದ ಬೆಂಗಳೂರಿಗೆ ಹೇಮಾವತಿ ನೀರು?

Published:
Updated:

ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ವರುಣಾಗಮನ ವಿಳಂಬವಾದರೆ ಹೇಮಾವತಿ ಅಣೆಕಟ್ಟೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಯೋಚಿಸಿದ್ದು, ಕುಡಿಯುವ ನೀರಿನ ಗಂಡಾಂತರ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.ಕಾವೇರಿ ಜಲಾನಯನ ಪ್ರದೇಶ ಹಾಗೂ ಬೆಂಗಳೂರು ಆಸುಪಾಸಿನಲ್ಲಿ ಕಳೆದ ವರ್ಷ ಮಳೆ ಶುರುವಾದುದು ಜೂನ್ 15ಕ್ಕೆ. ಮಳೆ ಬರುವವರೆಗೂ ಕೆಆರ್‌ಎಸ್‌ನಲ್ಲಿ 14 ಟಿಎಂಸಿ ನೀರು ಇತ್ತು. ಮಳೆ ವಿಳಂಬವಾದರೂ ಸಮಸ್ಯೆ ಆಗಿರಲಿಲ್ಲ. ಈ ಸಲ ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ತಮಿಳುನಾಡಿಗೆ 2 ಟಿಎಂಸಿಯಷ್ಟು ನೀರನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಿದ ಪರಿಣಾಮ ರಾಜಧಾನಿಗೆ ಬಿಸಿ ತಟ್ಟಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ಮಳವಳ್ಳಿ ತಾಲ್ಲೂಕಿನ ಶಿವ ಸಮತೋಲನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಭಾನುವಾರ ಸಂಜೆ ವೇಳೆಗೆ ಕನಿಷ್ಠ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಜಲಮಂಡಳಿಯ ಅಧಿಕಾರಿಗಳು ಕೆಆರ್‌ಎಸ್‌ನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಹೆಚ್ಚುವರಿ ನೀರು ಈವರೆಗೂ ಶಿವ ಅಣೆಕಟ್ಟಿಗೆ ತಲುಪಿಲ್ಲ.`ಪ್ರಸ್ತುತ ಕೆಆರ್‌ಎಸ್‌ನಲ್ಲಿ 2.86 ಟಿಎಂಸಿ, ಹೇಮಾವತಿಯಲ್ಲಿ 3.9 ಟಿಎಂಸಿ, ಹಾರಂಗಿಯಲ್ಲಿ 0.73 ಟಿಎಂಸಿ ನೀರು ಲಭ್ಯ ಇದೆ. ನಗರಕ್ಕೆ ನೀರು ಪೂರೈಸಲು ತಿಂಗಳಿಗೆ 1.5 ಟಿಎಂಸಿ ಬೇಕಿದೆ. ಕೆಆರ್‌ಎಸ್‌ನಲ್ಲಿ ಈಗಿರುವ ನೀರಿನ ಪ್ರಮಾಣದ ಆಧಾರದಲ್ಲಿ ಮೇ ತಿಂಗಳ ಕೊನೆಯವರೆಗೂ ನಗರಕ್ಕೆ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಆಗುವುದಿಲ್ಲ. ಆ ಬಳಿಕವೂ ಮಳೆ ಕೈಕೊಟ್ಟರೆ ಕಠಿಣ ದಿನಗಳು ಎದುರಾಗಲಿವೆ. ಆಗ ಹೇಮಾವತಿ ಅಣೆಕಟ್ಟೆಯಿಂದ ಒಂದು ಟಿಎಂಸಿ ನೀರು ಬಳಸಿಕೊಳ್ಳಲಾಗುವುದು ಎಂದು ಜಲಮಂಡಳಿಯ ಮುಖ್ಯ ಎಂಜಿನಿಯರ್ (ಕಾವೇರಿ ಯೋಜನೆ) ನಾರಾಯಣ್ `ಪ್ರಜಾವಾಣಿ'ಗೆ ಸೋಮವಾರ ತಿಳಿಸಿದರು.ನಗರಕ್ಕೆ ಸಮರ್ಪಕ ನೀರು ಪೂರೈಕೆಗೆ ಶಿವ ಸಮತೋಲನ ಜಲಾಶಯಕ್ಕೆ ಪ್ರತಿನಿತ್ಯ 600 ಕ್ಯೂಸೆಕ್ ನೀರು ಹರಿದು ಬರಬೇಕಿದೆ. ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಕುಸಿತದ ಹಿನ್ನೆಲೆಯಲ್ಲಿ ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಅವರನ್ನು ಇದೇ 10ರಂದು ಭೇಟಿ ಮಾಡಿ ಪ್ರತಿದಿನ 600 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ವಿನಂತಿಸಲಾಗಿತ್ತು. ನೀರು ಬಿಡುಗಡೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನೀರು ತಲುಪಿದರೆ ಶಿವ ಅಣೆಕಟ್ಟಿನ ನೀರಿನ ಮಟ್ಟ ಹೆಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಕೆ.ಆರ್.ಎಸ್.ನಿಂದ ಶಿವ ಅಣೆಕಟ್ಟಿಗೆ ನೀರು ಹರಿದು ಬರಲು 72 ಗಂಟೆಗಳು ಬೇಕು. ಸೋಮವಾರದ ವೇಳೆಗೆ ಮಾಧವಯಂತ್ರದಲ್ಲಿ ಒಳಹರಿವು ಹಾಗೂ ಹೊರಹರಿವಿನ ಪ್ರಮಾಣ 400 ಕ್ಯೂಸೆಕ್ಸ್ ಇತ್ತು. ಸತ್ಯಗಾಲದಲ್ಲೂ ಇದೇ ಪರಿಸ್ಥಿತಿ ಇದೆ. ನೀರಿನ ಕಳವು ಮತ್ತಿತರ ಕಾರಣದಿಂದ ಕೆಆರ್‌ಎಸ್‌ನಿಂದ ಶಿವ ಅಣೆಕಟ್ಟಿಗೆ ತಲುಪುವಾಗ 100 ಕ್ಯೂಸೆಕ್ಸ್‌ನಷ್ಟು ಕಡಿಮೆಯಾಗುತ್ತದೆ. ಪ್ರತಿ ಸಲ ನೀರಿನ ಪ್ರಮಾಣ ಕಡಿಮೆಯಾದಾಗಲೂ ಜಲಮಂಡಳಿಯ ಎಂಜಿನಿಯರ್‌ಗಳು ಸತ್ಯಗಾಲ ಹಾಗೂ ಮಾಧವಯಂತ್ರಕ್ಕೆ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಿ ನಿಗಮದ ಅಧಿಕಾರಿಗಳಿಗೆ ಒತ್ತಡ ಹೇರಬೇಕಿದೆ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ನೀರಿನ ಸಮಸ್ಯೆಯಾದರೆ ಶಿವ ಅಣೆಕಟ್ಟಿನ ಡೆಡ್ ಸ್ಟೋರೇಜ್ ನೀರನ್ನು ಬಳಸಿಕೊಳ್ಳಲು ಆರಂಭದಲ್ಲಿ ಯೋಜಿಸಲಾಗಿತ್ತು. ಡೆಡ್ ಸ್ಟೋರೇಜ್‌ನಲ್ಲಿ 1.5 ಟಿಎಂಸಿಯಷ್ಟು ನೀರು ಇರುತ್ತದೆ. ಆದರೆ, ಪಾಚಿ ಮತ್ತಿತರ ಕಾರಣಗಳಿಂದ ಈ ನೀರು ಕುಡಿಯಲು ಅಷ್ಟು ಉತ್ತಮ ಅಲ್ಲ. ಹೀಗಾಗಿ ಈ ಪ್ರಸ್ತಾವವನ್ನು ಕೈಬಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಶಿವ ಅಣೆಕಟ್ಟಿನಲ್ಲಿ ನೀರಿನ ಮಟ್ಟದಲ್ಲಿ ಇನ್ನಷ್ಟು ಕುಸಿತ ಕಂಡರೆ ತೊರೆಕಾಡನಹಳ್ಳಿ, ತಾತಗುಣಿ, ಹಾರೋಹಳ್ಳಿಯಲ್ಲಿ ಕೆಲವು ನೀರಿನ ಪಂಪ್‌ಗಳಲ್ಲಿ ನೀರಿನ ಪೂರೈಕೆಯನ್ನು ನಿಲ್ಲಿಸಬೇಕಾಗುತ್ತದೆ. ಆಗ ನಗರಕ್ಕೆ ನೀರಿನ ಪೂರೈಕೆಯಲ್ಲಿ ಏರುಪೇರಾಗುವುದು ನಿಶ್ಚಿತ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)