ಸೋಮವಾರ, ಜೂನ್ 14, 2021
27 °C

ಬಾಯಿಬೀಗಕ್ಕೆ ಸಜ್ಜಾದ ಹನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ತಾಲ್ಲೂಕಿನ ಹನೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಬೆಟ್ಟಳ್ಳಿ ಮಾರಮ್ಮನಿಗೆ ಜಾಗರೆ ಸಮರ್ಪಣೆ ಪೂಜಾ ಉತ್ಸವ  ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಮಹಿಳೆಯರು ದೇವಾಲಯಕ್ಕೆ ಆಗಮಿಸಿ ಜಾಗರೆ ಸಮರ್ಪಿಸಿದರು.ಬೆಟ್ಟಳ್ಳಿ ಮಾರಮ್ಮನ ಜಾತ್ರೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆಯಿಂದಲೇ ತಮಿಳುನಾಡು, ಬೆಂಗಳೂರು ಮತ್ತಿತರ ಕಡೆಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ತಂಪು ಸಲ್ಲಿಸಿ ಹರಕೆ ತೀರಿಸಿದರು.ಮಾರಮ್ಮನ ಹಬ್ಬದ ಪ್ರಯುಕ್ತ ದೇವಾಲಯವನ್ನು ಸಂಪೂರ್ಣವಾಗಿ ವರ್ಣಮಯ ಹೂಗಳಿಂದ ಸಿಂಗರಿಸಲಾಗಿದೆ. ಮಾರಮ್ಮನ ಬೀದಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವರ್ಣಮಯ ವಿದ್ಯುತ್ ದೀಪಗಳು ಕಂಗೊಳಿಸುತ್ತಿವೆ.ಗ್ರಾಮದ ಎಲ್ಲ ಬೀದಿಗಳನ್ನು ತಳಿರು- ತೋರಣಗಳಿಂದ ಸಿಂಗರಿಸಲಾಗಿದೆ. ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದಾರೆ. ಹೀಗಾಗಿ ಹನೂರು ಪಟ್ಟಣ ಜನಜಂಗುಳಿಯಿಂದ ಕೂಡಿದೆ. ಬೆಟ್ಟಳ್ಳಿ ಮಾರಮ್ಮ ಜಾತ್ರೆಯ ಪ್ರಮುಖ ಆಕರ್ಷಣೆ ಬಾಯಿಬೀಗ ಕಾರ್ಯಕ್ರಮ ಬುಧವಾರ ಬೆಳಿಗ್ಗೆ ನಡೆಯಲಿದೆ.18 ರಿಂದ 20ಅಡಿ ಉದ್ದದ ಸರಳಿನ ಬಾಯಿಬೀಗವನ್ನು ಈ ವರ್ಷ 60ಕ್ಕೂ ಹೆಚ್ಚು ಜನರು ಹಾಕಿಕೊಳ್ಳಲು ಕಳೆದ ಒಂದು ವಾರದಿಂದಲೂ ಉಪವಾಸ ವ್ರತಾಚರಣೆಯಲ್ಲಿದ್ದಾರೆ. ಬುಧವಾರ ಮಹಿಳೆಯರು ಪುರುಷರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಭಕ್ತರು ಸಣ್ಣಬಾಯಿ ಬೀಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಮಧ್ಯಾಹ್ನ 12 ಕ್ಕೆ ಬಾಯಿ ಬೀಗ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಹಸ್ರಾರು ಭಕ್ತರು ಈ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.