ಬಾಯಿ ಮೂಲಕ ರೋಗ ಪತ್ತೆ !

7

ಬಾಯಿ ಮೂಲಕ ರೋಗ ಪತ್ತೆ !

Published:
Updated:

ಬಾಯಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ತೊಂದರೆಗಳು ನಮ್ಮ ದೇಹದ ಆರೋಗ್ಯದಲ್ಲಿ ಉಂಟಾಗುವ ಏರುಪೇರಿನ ಲಕ್ಷಣಗಳಾಗಿರಬಹುದು.          ಕಣ್ಣುಗಳು ಹೇಗೆ ನಮ್ಮ ಆತ್ಮದ ಕನ್ನಡಿಯೋ, ಹಾಗೆಯೇ ಬಾಯಿ ನಮ್ಮ ದೇಹಾರೋಗ್ಯದ ಕನ್ನಡಿ. ಬಾಯಿಯ ಆರೋಗ್ಯದ ಹಲವಾರು ಲಕ್ಷಣಗಳು ನಮ್ಮ ದೇಹ ಪ್ರಕೃತಿಯಲ್ಲಾಗುವ ಏರುಪೇರುಗಳ ಸೂಚನೆ ನೀಡುತ್ತವೆ.ಅದೆಷ್ಟೋ ಬಾರಿ ಬಾಯಿಯ ಆರೋಗ್ಯ ಬಾಯಿಗಷ್ಟೇ ಸೀಮಿತವಾಗಿರದೆ ದೇಹದ ಇತರ ಅಂಗಗಳ ಅನಾರೋಗ್ಯದ ಲಕ್ಷಣಗಳನ್ನು ತೋರಿಸಬಹುದು. ಕೆಲವೊಮ್ಮೆ ರೋಗದ ಮೊದಲ ಚಿಹ್ನೆಗಳು ಬಾಯಿಯ ಮೂಲಕವೇ ಕಾಣಿಸಿಕೊಳ್ಳಬಹುದು. ಹಾಗೆಯೇ ಬಾಯಿಯಲ್ಲಿ ಕಾಣಿಸುವ ಒಸಡಿನ ರೋಗದ ಸೋಂಕಿನಿಂದ ದೇಹದ ಇತರ ಭಾಗಗಳಿಗೆ ರೋಗಾಣುಗಳು ಹರಡಬಹುದು. ಹಾಗಾಗಿ ಬಾಯಿ ಮತ್ತು ದೇಹದ ನಡುವಿನ ಸಂಬಂಧ ಅವಿನಾಭಾವವಾದದ್ದು.ಹೀಗಿದೆ ಸಂಬಂಧ

ನಮ್ಮ ಬಾಯಿ ಅನೇಕ ಸೂಕ್ಷ್ಮಾಣು ಜೀವಿಗಳ ಆಗರ. ಬಾಯಿಯ ಆರೋಗ್ಯವನ್ನು ಸರಿಯಾಗಿ ಹಲ್ಲು ಉಜ್ಜುವ ಹಾಗೂ ಫ್ಲೋಸ್ಸಿಂಗ್ (ದಾರದ ಎಳೆಯ ಮೂಲಕ ಹಲ್ಲು ಶುಚಿಗೊಳಿಸುವ ವಿಧಾನ) ಮೂಲಕ ಕಾಪಾಡಿಕೊಳ್ಳಬಹುದು. ಬಾಯಿಯ ಜೊಲ್ಲು ರಸ ಕೂಡ ಈ ಸೂಕ್ಷ್ಮಾಣು ಜೀವಿಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜೊಲ್ಲು ರಸದಲ್ಲಿನ ಕಿಣ್ವಗಳು ಈ ಕೆಲಸವನ್ನು ಮಾಡುತ್ತವೆ. ಆದರೂ ಸೂಕ್ಷ್ಮಾಣು ಜೀವಿಗಳ ಅನಿಯಂತ್ರಿತ ಬೆಳವಣಿಗೆ ಒಸಡಿನ ರೋಗಕ್ಕೆ ಕಾರಣವಾಗಿ ಬಿಡುತ್ತದೆ.ಒಸಡುಗಳು ಆರೋಗ್ಯವಾಗಿದ್ದರೆ ಸೂಕ್ಷ್ಮಾಣು ಜೀವಿಗಳು ದೇಹದ ರಕ್ತ ಸಂಚಾರಕ್ಕೆ ಪ್ರವೇಶಿಸುವುದಿಲ್ಲ. ಆದರೆ ಒಮ್ಮೆ ಒಸಡಿಗೆ ಸೋಂಕಾಗಿ ರೋಗ ಬಂದರೆ, ಒಸಡಿನ ಮೂಲಕ ಸೂಕ್ಷ್ಮಾಣು ಜೀವಿಗಳು ಪ್ರವೇಶಿಸಿ ದೇಹದ ಇತರ ಭಾಗಗಳಿಗೆ ಹರಡಲು ಅವಕಾಶವಾಗುತ್ತದೆ.

ಬಾಯಿಯ ಕೆಲವು ತೀಕ್ಷ್ಣ ಶಸ್ತ್ರಕ್ರಿಯೆಯಿಂದಲೂ ಸೂಕ್ಷ್ಮಾಣುಜೀವಿಗಳಿಗೆ ಪ್ರವೇಶ ಸುಲಭವಾಗುತ್ತದೆ. ನಾವು ಸೇವಿಸುವ ಔಷಧಿ, ಅನೇಕ ಚಿಕಿತ್ಸೆಗಳೂ ಬಾಯಿಯ ಸೌಖ್ಯ ಹಾಳು ಮಾಡುತ್ತವೆ. ಕ್ಯಾನ್ಸರ್ ಚಿಕಿತ್ಸೆಯಂತಹ ಇತರ ಅನೇಕ ಚಿಕಿತ್ಸೆಗಳಿಂದ ಜೊಲ್ಲು ರಸ ಉತ್ಪತ್ತಿಯಾಗುವುದು ಕಡಿಮೆಯಾಗಿ ಸೂಕ್ಷ್ಮಾಣು ಜೀವಿಗಳು ಹೆಚ್ಚಲು ಕಾರಣವಾಗುತ್ತದೆ. ಬಾಯಿಯ ಅನಾರೋಗ್ಯ ಹಾಗೂ ಹಾನಿಕಾರಕ ಸೂಕ್ಷ್ಮಾಣು ಜೀವಿಗಳೇ ದೇಹದ ಇತರ ಅಂಗಾಂಗಗಳಿಗೆ ಹಾನಿ ಉಂಟು ಮಾಡಲು ಕಾರಣವಾಗುತ್ತವೆ.

ಹೃದಯ ಕಾಯಿಲೆ?ಹಲವು ಹೃದಯ ಸಂಬಂಧಿ ರೋಗಗಳು ಬಾಯಿಯ ಮೂಲಕ ಗೋಚರಿಸುತ್ತವೆ. ಒಸಡಿನಲ್ಲಿ ಉಂಟಾಗುವ ಸೋಂಕಿನ ಮೂಲಕ ಹೃದಯಾಘಾತ ಸಂಭವ ಹಾಗೂ ರಕ್ತನಾಳಗಳಿಗೆ ಬರುವ ರೋಗಗಳ ಮುನ್ಸೂಚನೆ ಪಡೆಯಬಹುದು. ಒಸಡಿನಲ್ಲಿ ಉಂಟಾಗುವ ಸೋಂಕು ಹೃದಯ ಸಂಬಂಧಿ ರೋಗಗಳಿಗೆ ರಹದಾರಿ ಇದ್ದಂತೆ. ಹಾಗಾಗಿ ಸೋಂಕಾದಾಗ ನಿರ್ಲಕ್ಷ್ಯ ಒಳ್ಳೆಯದಲ್ಲ.ಗರ್ಭಧಾರಣೆ ಮತ್ತು ಜನನ: ಗರ್ಭಿಣಿಯರ ಒಸಡಿಗೆ ಸೋಂಕಾದರೆ, ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರಬಲ್ಲದು. ಜನನ ಪ್ರಕ್ರಿಯೆ ಕಷ್ಟವಾಗಬಹುದು. ಮಗುವಿನ ಅವಧಿಪೂರ್ವ ಜನನಕ್ಕೆ ಒಸಡಿನ ಸೋಂಕು ಕಾರಣ ಎಂದು ಅನೇಕ ಸಂಶೋಧನೆಗಳು ತಿಳಿಸಿವೆ. ಹೀಗಾಗಿ ಗರ್ಭಿಣಿಯರು ತಮ್ಮ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಲೇಬೇಕು. ಸೋಂಕಾಗದಂತೆ ಮುತುವರ್ಜಿ ವಹಿಸಬೇಕು.ಸಕ್ಕರೆ ಕಾಯಿಲೆ: ದಂತಕ್ಷಯ, ಹಲ್ಲು ಸಡಿಲವಾಗುವುದು, ಬಾಯಿ ಒಣಗುವುದು, ಒಸಡಿನ ಕಾಯಿಲೆ ಹಾಗೂ ಊತವು ಸಕ್ಕರೆ ಕಾಯಿಲೆಯ ಲಕ್ಷಣ. ಬಾಯಿಯಲ್ಲಿ ಸೋಂಕಾದರೆ ಸಕ್ಕರೆ ಕಾಯಿಲೆ ಉಲ್ಬಣಿಸುವ ಸಾಧ್ಯತೆಯೂ ಇರುತ್ತದೆ. ಈ ಲಕ್ಷಣಗಳು ಗೋಚರಿಸಿದ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯಬೇಕು. ಚಿಕಿತ್ಸೆಗಿಂತ ಮುನ್ನೆಚ್ಚರಿಗೆ ಅಗತ್ಯ. ಸಕ್ಕರೆ ಅಂಶವನ್ನು ನಿಯಂತ್ರಿಸಲು ಇನ್ಸುಲಿನ್ ಬೇಕಾಗುವುದರಿಂದ ಸಕ್ಕರೆ ರೋಗ ಉಲ್ಬಣಿಸಲೂಬಹುದು.ಎಚ್‌ಐವಿ-ಏಡ್ಸ್: ನಾಲಿಗೆ ಮೇಲೆ ಬಿಳಿ ಮಚ್ಚೆಗಳು ಮೂಡುತ್ತಿವೆ ಎಂದರೆ ಅದು ಎಚ್‌ಐವಿ- ಏಡ್ಸ್ ಲಕ್ಷಣ ಆಗಿರಬಹುದು. ಔಷಧಿಗೆ ಜಗ್ಗದ ಬಾಯಿಯ ಸೋಂಕು ಏಡ್ಸ್‌ನ ಮೊದಲ ಚಿಹ್ನೆ ಇರಬಹುದು. ಸಾಮಾನ್ಯವಾಗಿ ಏಡ್ಸ್ ಇರುವವರಿಗೆ ಬಾಯಿಯ ಸೋಂಕು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇವರಲ್ಲಿ ಬಾಯಿಯ ರೋಗಗಳು ಬ್ಯಾಕ್ಟೀರಿಯಾ, ವೈರಸ್ ಅಥವಾ ಫಂಗಲ್ ಸೋಂಕಿನಿಂದ ಬರುತ್ತವೆ.ಮೂಳೆಸವೆತ: ಬಾಯಿಯ ದವಡೆಯ ಮೂಳೆ ಸವೆತದಿಂದ ದೇಹದಲ್ಲಿ ಮೂಳೆ ಸವೆತ ಆರಂಭವಾಗಿದೆ ಎಂದು ತಿಳಿದುಕೊಳ್ಳಬಹುದು. ದಂತ ವೈದ್ಯರು ಪ್ರಾಥಮಿಕ ಚಿಕಿತ್ಸೆ ಅಥವಾ ಇತರ ಉದ್ದೇಶಕ್ಕಾಗಿ ತೆಗೆಯುವ ಎಕ್ಸ್-ರೇಗಳಿಂದ ಮೂಳೆ ಸವೆತ ಗೋಚರಿಸುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದವಡೆಯ ಮೂಳೆಗೂ ಸೋಂಕಾಗಿ ಸವೆತ ಉಂಟಾಗಬಹುದು.

ಇತರ ಲಕ್ಷಣಗಳು: ಇನ್ನೂ ಹಲವು ರೋಗಗಳನ್ನು ಬಾಯಿಯ ಮೂಲಕವೇ ಕಂಡುಕೊಳ್ಳಬಹುದು. ಉದಾಹರಣೆಗೆ ಜೋಗ್ರೆನ್ಸ್ ಸಿಂಡ್ರೋಮ್, ಕೆಲವು ಕ್ಯಾನ್ಸರ್‌ಗಳು, ಈಟಿಂಗ್ ಡಿಸಾರ್ಡರ್, ಸಿಫಿಲಿಸ್, ಗೊನೇರಿಯಾ (ಲೈಂಗಿಕ ರೋಗಗಳು) ಬಾಯಿಯ ಮೂಲಕ ಗೋಚರಿಸುತ್ತವೆ.

ಆರೋಗ್ಯಕ್ಕೆ ಉಪಾಯ: ಬಾಯಿಯ ಶುಚಿತ್ವ ಕಾಪಾಡಿಕೊಳ್ಳುವುದೇ ಆರೋಗ್ಯ ಸಂರಕ್ಷಿಸಿಕೊಳ್ಳುವ ಮೊದಲ ಹೆಜ್ಜೆ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು, ನಾಲಿಗೆಯನ್ನು ಬ್ರಶ್‌ನ ಸಹಾಯದಿಂದ ಶುಚಿಗೊಳಿಸುವುದು, ಆರು ತಿಂಗಳಿಗೆ ಒಮ್ಮೆ ದಂತ ವೈದ್ಯರಿಂದ ತಪಾಸಣೆ, ತಾಜಾ ಹಣ್ಣು-ತರಕಾರಿ ಸೇವನೆ, ಅತಿಯಾದ ಅಂಟಾದ ಪದಾರ್ಥ ಸೇವನೆ ಕಡಿತ ಅತ್ಯವಶ್ಯಕ. ಬಾಯಿಯ ಆರೋಗ್ಯ ಕಾಪಾಡಿಕೊಂಡರೆ ಮಾತ್ರ ದೇಹದ ಪರಿಪೂರ್ಣ ಆರೋಗ್ಯ ಸಾಧ್ಯ ಎಂಬ ಅರಿವು ಎಲ್ಲರಲ್ಲೂ ಇರಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry