ಬಾರದ ನೀರಿಗೂ ತಪ್ಪದ ಬಿಲ್...!

7

ಬಾರದ ನೀರಿಗೂ ತಪ್ಪದ ಬಿಲ್...!

Published:
Updated:
ಬಾರದ ನೀರಿಗೂ ತಪ್ಪದ ಬಿಲ್...!

ಬೆಂಗಳೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 44 ರ ವಿಜಯಾನಂದ ನಗರ ಹಾಗೂ ಅಕ್ಕ ಪಕ್ಕದ ಬಡಾವಣೆಗಳಲ್ಲಿ ಈಗ ನೀರಿನ ಸಮಸ್ಯೆ ಮಿತಿ ಮೀರಿದ್ದು, ಜನರು ಪರದಾಡುವಂತಾಗಿದೆ.ವಿಜಯಾನಂದನಗರ, ದೀನಬಂಧುನಗರ, ಶ್ರೀನಿವಾಸನಗರದ ಹಲವು ಭಾಗಗಳಿಗೆ ನಿಗದಿತ ವೇಳೆಯಲ್ಲಿ ಬೆಂಗಳೂರು ಜಲಮಂಡಲಿಯು ನೀರು ಪೂರೈಸುತ್ತಿಲ್ಲ. ಈ ಬಡಾವಣೆಗಳಿಗೆ ಹದಿನೈದು ದಿನಗಳಿಗೆ ಒಮ್ಮೆಯೂ ನೀರು ಪೂರೈಕೆಯಾಗುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.`ನೀರಿನ ಬಿಲ್ ತಿಂಗಳಿಗೆ ಸರಿಯಾಗಿ ಬರುತ್ತದೆ. ಆದರೆ ನೀರು ಮಾತ್ರಾ ಹದಿನೈದು ದಿನಗಳಿಗೆ ಒಂದು ಸಾರಿಯಾದರೂ ಬರುವುದೇ ಇಲ್ಲ. ಹೀಗಾದರೆ ನೀರಿಲ್ಲದೇ ನಾವು ಬದುಕುವುದು ಹೇಗೆ~ ಎಂಬುದು ಸ್ಥಳೀಯ ನಿವಾಸಿ ಸರೋಜಮ್ಮ ಅವರ ಪ್ರಶ್ನೆ.`ಜಲಮಂಡಲಿಯ ಸಂಪರ್ಕ ಪಡೆದರೂ ಹಣ ಕೊಟ್ಟು ಕ್ಯಾನ್‌ಗಳಲ್ಲಿ ನೀರು ತರಿಸಿಕೊಳ್ಳುವುದು ತಪ್ಪಿಲ್ಲ. ಅಧಿಕಾರಿಗಳ ಅಸಡ್ಡೆಯೇ ಬಡಾವಣೆಯಲ್ಲಿ ನೀರಿನ ಸಮಸ್ಯೆಗೆ ಕಾರಣ~ ಎಂಬುದು ಮುನಿಯಮ್ಮ ಅವರ ದೂರು.`ನೀರು ಬಿಡಲು ಸರಿಯಾದ ಸಮಯವೂ ಇಲ್ಲ. ಅಧಿಕಾರಿಗಳಿಗೆ ಅದೆಷ್ಟು ಬಾರಿ ದೂರು ನೀಡಿದರೂ ಅವರು ನೀರು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ದೂರು ನೀಡಲು ಹೋದರೆ ಅಸಡ್ಡೆಯ ಮಾತು ಕೇಳಿ ಕೇಳಿ ಸಾಕಾಗಿದೆ. ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕರೂ ಸಮಸ್ಯೆಗೆ ಕೈ ಚೆಲ್ಲಿ ಕುಳಿತಿದ್ದಾರೆ. ಇನ್ನು ಯಾರ ಬಳಿ ನಮ್ಮ ಸಮಸ್ಯೆ ಹೇಳಿಕೊಳ್ಳುವುದು~ ಎಂಬುದು ರಂಗಮ್ಮ ಅವರ ಅಳಲು.`ಬಡಾವಣೆಯಲ್ಲಿ ಇರುವ ನಾಲ್ಕೈದು ಬೋರ್‌ವೆಲ್‌ಗಳೂ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬೋರ್‌ಗಳು ಕೆಟ್ಟು ನಿಂತರೆ ದೂರು ನೀಡಿ ತಿಂಗಳು ಕಳೆದರೂ ರಿಪೇರಿ ಮಾಡಿಸುವುದಿಲ್ಲ~ ಎನ್ನುತ್ತಾರೆ ಖಾಲಿ ಕೊಡಗಳೊಂದಿಗೆ ನೀರಿಗಾಗಿ ನಲ್ಲಿ ಬಳಿ ಕಾಯುತ್ತಿದ್ದ ಸಾವಿತ್ರಮ್ಮ.ಸ್ಥಳೀಯ ಕಾರ್ಪೊರೇಟರ್ ಹಾಗೂ ಶಾಸಕರ ನಿಧಿಗಳಿಂದ ಬಡಾವಣೆಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಸಿ ನೀರು ಪೂರೈಸುವ ವ್ಯವಸ್ಥೆ ಸಹ ಅವ್ಯವಸ್ಥೆಗಳಿಂದ ಕೂಡಿದೆ. ನೀರು ಬಿಡುವ ವಾಟರ್‌ಮನ್‌ಗಳು ಸರಿಯಾಗಿ ಬೋರ್‌ವೆಲ್‌ಗಳನ್ನು ನಿರ್ವಹಿಸುತ್ತಿಲ್ಲ. ನೀರು ಬಿಡುವ ಸಮಯವನ್ನೂ ಅವರು ಸರಿಯಾಗಿ ಪಾಲಿಸುತ್ತಿಲ್ಲ.`ಮೋಟಾರ್ ಆನ್ ಮಾಡಿ ಬಿಟ್ಟರೆ ಅವನ್ನು ಆಫ್ ಮಾಡುವ ಗೋಜಿಗೇ ಹೋಗುವುದಿಲ್ಲ. ಹೀಗಾದರೆ ಮೋಟಾರ್‌ಗಳು ಉಳಿಯುವುದಾದರೂ ಹೇಗೆ. ಇದರ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿ ಸಾಕಾಗಿ ಹೋಗಿದೆ. ನಾವು ಮಾಡಿದ ಪಾಪವೋ ಏನೋ ದೂರದಿಂದಾದರೂ ನೀರು ಹೊರಲೇ ಬೇಕು~ ಎನ್ನುತ್ತಾರೆ ಧೀನಬಂದುನಗರದ ನಿವಾಸಿ ಶ್ರೀನಿವಾಸ್.ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀರಿನ ಸಮಸ್ಯೆ ಬಗೆಹರಿಸಲು ಸೋತಿರುವುದರಿಂದ ಇಲ್ಲಿನ ನಿವಾಸಿಗಳು ಯಾರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry