ಸೋಮವಾರ, ಏಪ್ರಿಲ್ 12, 2021
22 °C

ಬಾರದ ಮಳೆ: ಆಗಸದತ್ತ ಮುಖ ಮಾಡಿದ ಅನ್ನದಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾರದ ಮಳೆ: ಆಗಸದತ್ತ ಮುಖ ಮಾಡಿದ ಅನ್ನದಾತ

ಕಮಲನಗರ: ರೈತರ ಬದುಕಿಗೆ ಬೆಳಕಾಗ ಬೇಕಿದ್ದ ಮುಂಗಾರು ಮಳೆ ಆರಂಭಗೊಂಡು ತಿಂಗಳಾದರೂ ಸುರಿಯದಿರುವುದರಿಂದ ವ್ಯಾಪ್ತಿಯ ರೈತರು ಚಿತಾಕ್ರಾಂತರಾಗಿದ್ದಾರೆ.ಕಳೆದ ಜೂನ್ ಎರಡನೇ ವಾರ ಸುರಿದ ಮಳೆಗೆ ಸಂತಸಗೊಂಡ ರೈತರು ಸಂಪರ್ಕ ಕೇಂದ್ರಗಳ ಮುಂದೆ ಸರತಿಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ, ತರಾತುರಿಯಲ್ಲಿ ಬಿತ್ತನೆ ಮಾಡಿದ್ದರು.ಆದರೆ ಜುಲೈಎರಡನೇ ವಾರ ಕಳೆಯುತ್ತಿದ್ದರೂ, ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದರಿಂದ ಬಿತ್ತನೆ ಮಾಡಿದ ರೈತರ ಮೊಗದಲ್ಲಿ ಆತಂಕದ ಛಾಯೆ ಮೂಡಿದೆ.ವ್ಯಾಪ್ತಿಯ ಮದನೂರ್, ಖತಗಾಂವ್, ಡೋಣಗಾಂವ್, ಬಿಜಲಗಾಂವ್, ಮುರ್ಕಿ, ಡೋಣಗಾಂವ್, ಹಕ್ಯಾಳ್, ಸೋನಾಳ್, ಬಾಲೂರ್, ಮುರ್ಗ್ (ಕೆ), ಖೇಡ್, ಸಂಗಮ್, ಹುಲಸೂರ್, ರಂಡ್ಯಾಳ, ಹೊರಂಡಿ, ತೋರಣಾ ಗ್ರಾಮಗಳಲ್ಲಿನ ರೈತರು ಸಾಲ-ಸೋಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಸಾಕಷ್ಟು ಬಿತ್ತನೆ ಮಾಡಿದ್ದಾರೆ.ಈಗಾಗಲೇ ಬಿತ್ತನೆ ಮಾಡಿರುವ ರೈತರಲ್ಲಿ ಕೊಳವೆ ಬಾವಿ ಹೊಂದಿರುವ ಹಲವರು ತಮ್ಮ ಅಲ್ಪ ಸ್ವಲ್ಪ ಚಿಗುರೊಡೆದು ನಿಂತ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೇ, ಇನ್ನೊಂದೆಡೆ ಮಳೆ ಆಶ್ರಿತ ರೈತರು ಆಕಾಶಕ್ಕೆ ಕಣ್ಣು ನೆಟ್ಟು ಕಣ್ಣೀರು ಸುರಿಸುವಂತಾಗಿದೆ.ಪ್ರತಿ ವರ್ಷ ಕಮಲನಗರ ವ್ಯಾಪ್ತಿಯಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿತ್ತು, ಆದರೆ ಈ ಬಾರಿ ಮಳೆರಾಯ ಮುನಿಸುಕೊಂಡಂತಿದೆ. ನಾಲ್ಕೈದು ಬಾರಿ ಬಂದ ಮಳೆ ಮತ್ತೆ ಈ ಕಡೆ ಸುಳಿದಿಲ್ಲ. ಸಕಾಲಕ್ಕೆ ಮಳೆಯಾಗದಿದ್ದರೆ ಬಿತ್ತನೆ ಮಾಡಿದ ಸೋಯಾಬಿನ್, ಜೋಳ್, ತೊಗರಿ, ಉದ್ದು, ಹೆಸರು ಕೈ ಕೊಡಲಿವೆ. ದಿನ ಕಳೆದ ಮೇಲೆ ಮಳೆ ಎಷ್ಟೇ ಸುರಿದರೂ ಉದ್ದು, ಹೆಸರು ಮಾತ್ರ ಹಾಳಾಗುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ ರೈತ ಉತ್ತಮ ಕುಂಬಾರ್.ವ್ಯಾಪ್ತಿಯಲ್ಲಿ ಶೇ. 90 ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ವಾಡಿಕೆಯಂತೆ ಇಲ್ಲಿಯವರೆಗೆ 200 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಮಳೆಯಾಗಿದ್ದು ಕೇವಲ 136.9 ಮಿ.ಮೀ. ನಷ್ಟು ಮಾತ್ರ. ಇನ್ನೆರಡು ದಿನಗಳಲ್ಲಿ ಮಳೆ ಬಾರದಿದ್ದರೆ ರೈತರ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕೃಷಿ ಅಧಿಕಾರಿ ಸುಭಾಷ ಹುಲಸೂರೆ ಆತಂಕ ವ್ಯಕ್ತಪಡಿಸಿದ್ದಾರೆ.

 

ಪ್ರತಿದಿನ ಸಂಜೆಯಾಗುತ್ತಿದ್ದಂತೆ ಆಕಾಶದಲ್ಲಿ ಕಾರ್ಮೋಡಗಳು ಕಾಣಲಾರಂಭಿಸುತ್ತವೆ. ಮಳೆ ಈಗೊ-ಆಗೊ ಎಂಬಂತಿರುತ್ತದೆ. ಭಾರೀ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿರುವಾಗಲೆ ಕೆಲಹೊತ್ತು ತುಂತುರು ಮಳೆಯಾದಂತಾಗಿ ಮೊಡಗಳು ಬೇರೆಡೆಗೆ ಓಡಲಾರಂಭಿಸುತ್ತವೆ.ಇದು ವ್ಯಾಪ್ತಿಯಲ್ಲಿ ಕಾರ್ಮೋಡಗಳು ಆಡುವ ನಿತ್ಯದ ಆಟ. ಹೀಗಾಗಿ ರೈತ ಬಾಂಧವರು ಚಿಂತೆಗೀಡಾಗಿದ್ದಾರೆ. ಸಾಲ ಮಾಡಿ ಬಿತ್ತನೆಗಾಗಿ ಬೀಜ, ರಸಗೊಬ್ಬರಕ್ಕೆಂದು ಖರ್ಚು ಮಾಡಲಾಗಿದೆ, ಈಗ ಮಳೆಯಿಲ್ಲದೆ ಬೆಳೆ ಕೈ ಕೊಡುವ ಸಂಭವ ಇರುವುದರಿಂದ ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ರೈತರನ್ನು ತೀವ್ರವಾಗಿ ಕಾಡುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.